ಬೆಂಗಳೂರು : ಮಾಜಿ ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಯನೂರು ಮಂಜುನಾಥ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದರು.
ಬಳಿಕ ಮಾತನಾಡಿದ ಆಯನೂರು ಮಂಜುನಾಥ್, ʼʼಕಾರ್ಮಿಕರ ಹೋರಾಟದ ಹಿನ್ನಲೆಯಿಂದ ಬಂದವನು ನಾನು. ಇವರ ಯೋಜನೆಗಳನ್ನು ನೋಡಿ ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ನಾನು ಮತ್ತು ನನ್ನ ಗೆಳೆಯರು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆʼʼ ಎಂದು ಹೇಳಿದರು.
ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ್
ವಿಧಾನಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಆಯನೂರು ಮಂಜುನಾಥ್ ಅದಕ್ಕಾಗಿ ಬಿಜೆಪಿ ಸದಸ್ಯತ್ವ ಮತ್ತು ವಿಧಾನ ಪರಿಷತ್‌ನ ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಕೆಪಿಸಿಸಿ ಮಟ್ಟದಲ್ಲಿ ಒಪ್ಪಿಗೆ ಸಿಕ್ಕರೂ ಎಐಸಿಸಿಯಲ್ಲಿ ಅದಕ್ಕೆ ತಡೆ ಬಿದ್ದಿತ್ತು. ಹೀಗಾಗಿ ಕೊನೆಗೆ ಜೆಡಿಎಸ್ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು.