Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅತೀಕ್, ಅಶ್ರಫ್ ಶೂಟೌಟ್| ಉತ್ತರ ಪ್ರದೇಶದಲ್ಲಿ ಸೆಕ್ಷನ್ 144: ನ್ಯಾಯಾಂಗ ತನಿಖೆ

ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ): ಪ್ರಯಾಗ್‌ರಾಜ್‌ನಲ್ಲಿ ಶನಿವಾರ ರಾತ್ರಿ ನಡೆದ ಗ್ಯಾಂಗ್‌ಸ್ಟರ್- ಮಾಜಿ ಸಂಸದ ಅತಿಕ್ ಅಹ್ಮದ್ ಮತ್ತು ಅವರ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಅವರ ಹತ್ಯೆ ಕುರಿತು ಉನ್ನತ ಮಟ್ಟದ ತನಿಖೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಜಾರಿಗೆ ತರಲಾಗಿದೆ.

ಅತೀಕ್‌ (60) ಮತ್ತು ಅವರ ಸಹೋದರನನ್ನು ಶನಿವಾರ ರಾತ್ರಿ ಪೊಲೀಸರು ತಪಾಸಣೆಗಾಗಿ ಪ್ರಯಾಗರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಹೇಳಿಕೆ ಪಡೆಯುವಂತೆ ಮುಂದೆ ಬಂದ ಮೂವರು ನೇರವಾಗಿ ತಲೆಗೇ ಗುಂಡಿಟ್ಟರು.

ರಾತ್ರಿ 10ರ ಸುಮಾರಿನಲ್ಲಿ ನಡೆದ ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

‘ಅತೀಕ್‌ ಅಹ್ಮದ್ ಮತ್ತು ಅಶ್ರಫ್ ಹತ್ಯೆಯ ತನಿಖೆಗಾಗಿ ಮುಖ್ಯಮಂತ್ರಿ ಮೂರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದ್ದಾರೆ. ಮೂವರು ದಾಳಿಕೋರರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಹೇಳಿದರು.

ಪ್ರಯಾಗ್‌ರಾಜ್‌ನಲ್ಲಿ ರಾತ್ರಿ ನಡೆದ ಶೂಟೌಟ್‌ ನಂತರ, ಮುಖ್ಯಮಂತ್ರಿಗಳು ಲಖನೌನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ನಂತರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ ಎಂದು ಕುಮಾರ್ ಹೇಳಿದರು.

ಘಟನೆಯಲ್ಲಿ, ಕಾನ್‌ಸ್ಟೆಬಲ್ ಮಾನ್ ಸಿಂಗ್ ಅವರ ಕೈಗೆ ಗಾಯವಾಗಿದೆ. ಗುಂಡಿನ ದಾಳಿಯ ನಂತರ ನಡೆದ ಘರ್ಷಣೆಯಲ್ಲಿ ಪತ್ರಕರ್ತರೊಬ್ಬರು ಬಿದ್ದು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ಅತೀಕ್‌– ಅಶ್ರಫ್‌ ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್‌ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಈ ಇಬ್ಬರು ಆರೋಪಿ ಗಳಾಗಿದ್ದರು.

ಉಮೇಶ್‌ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಅತೀಕ್‌ ಅಹ್ಮದ್‌ನ ಪುತ್ರ ಅಸಾದ್‌ ಹಾಗೂ ಆತನ ಸಹಚರ ಗುಲಾಮ್‌ ಉತ್ತರ ಪ್ರದೇಶದ ಪೊಲೀಸರು ಝಾನ್ಸಿಯಲ್ಲಿ ಗುರುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದರು.

ಪಾತಕಿ ಅತೀಕ್‌ ಮೇಲೆ ಉಮೇಶ್‌ ಪಾಲ್‌ ಕೊಲೆ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ