ಬೆಂಗಳೂರು : ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರ ಕುಟುಂಬದ ಒಟ್ಟು ಆಸ್ತಿ ಮೂರು ವರ್ಷಗಳಲ್ಲೇ ಎಂಟು ಪಟ್ಟು ಹೆಚ್ಚಳವಾಗಿದೆ.
ಗೋಪಾಲಯ್ಯ ಕುಟುಂಬದ ಬಳಿ 2019ರ ನವೆಂಬರ್‌ನಲ್ಲಿ ಒಟ್ಟು₹ 11.99 ಕೋಟಿ ಮೌಲ್ಯದ ಆಸ್ತಿ ಇತ್ತು. ಈಗ ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ ₹ 96.15 ಕೋಟಿ. ಸಚಿವರು ಮತ್ತು ಅವರ ಪತ್ನಿ ಎಸ್.ಪಿ. ಹೇಮಲತಾ ಇಬ್ಬರೂ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
2019ರ ಉಪ ಚುನಾವಣೆ ಸಂದರ್ಭದಲ್ಲಿ ಗೋಪಾಲಯ್ಯ ಕುಟುಂಬ ಒಟ್ಟು ₹ 11.78 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿತ್ತು. ಈಗ ಅವರ ಕುಟುಂಬ ಹೊಂದಿರುವ ಒಟ್ಟು ಸ್ಥಿರಾಸ್ತಿ ₹ 95.91 ಕೋಟಿ ಮೌಲ್ಯದ್ದು ಎಂದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಇಬ್ಬರ ಆದಾಯದಲ್ಲೂ ಗಣನೀಯ ಏರಿಕೆಯಾಗಿದೆ. 2019ರಲ್ಲಿ ಗೋಪಾಲಯ್ಯ ಅವರ ವಾರ್ಷಿಕ ಆದಾಯ ₹ 6.70 ಲಕ್ಷ ಇದ್ದು, ಈಗ ₹ 3.47 ಕೋಟಿಗೆ ಏರಿಕೆಯಾಗಿದೆ. ಹೇಮಲತಾ ಅವರ ವಾರ್ಷಿಕ ಆದಾಯ ₹ 5.21 ಲಕ್ಷದಿಂದ ₹ 3.37 ಕೋಟಿಗೆ ಏರಿಕೆಯಾಗಿದೆ. ಸಾಲದಲ್ಲೂ ಭಾರಿ ಏರಿಕೆಯಾಗಿದೆ. ಸಚಿವರು 2019ರಲ್ಲಿ ₹ 1.79 ಕೋಟಿ ಸಾಲ ಹೊಂದಿದ್ದರು. ಈಗ ಸಾಲದ ಮೊತ್ತ ₹ 22.49 ಕೋಟಿಗೆ ಏರಿಕೆಯಾಗಿದೆ. ಪತ್ನಿಯ ಸಾಲ ₹ 5.26 ಕೋಟಿಯಿಂದ ₹ 26.01 ಕೋಟಿಗೆ ಹೆಚ್ಚಳವಾಗಿದೆ ಎಂಬ ಮಾಹಿತಿ ಪ್ರಮಾಣ ಪತ್ರದಲ್ಲಿದೆ.
ಸಚಿವರ ಬಳಿ ಮಹೀಂದ್ರಾ ಜೀಪ್, ಟೊಯೊಟಾ ಕ್ವಾಲಿಸ್, ಟೊಯೊಟಾ ಇನ್ನೋವಾ, ಟೊಯೊಟಾ ಫಾರ್ಚೂನರ್ ಕಾರುಗಳಿವೆ. ಕುಟುಂಬದ ಬಳಿ 18 ಕೆ.ಜಿ. ಬೆಳ್ಳಿ ಮತ್ತು 2 ಕೆ.ಜಿ.ಯಷ್ಟು ಚಿನ್ನವಿದೆ.