ಇಂದು ( ಡಿಸೆಂಬರ್ 3 ) ರಾಜಸ್ಥಾನ್, ತೆಲಂಗಾಣ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ್ ಕ್ಷೇತ್ರಗಳ ವಿಧಾನಸಭೆಯ ಮತ ಎಣಿಕೆ ನಡೆಯುತ್ತಿದ್ದು, ಬೆಳಗ್ಗೆ 11.30ರ ಸಮಯಕ್ಕೆ 4 ರಾಜ್ಯಗಳ ಮತಎಣಿಕೆಯಲ್ಲಿ ಬಿಜೆಪಿ 3 ರಾಜ್ಯಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಕೇವಲ ಒಂದು ರಾಜ್ಯದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಹೌದು, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢ ಈ ಮೂರು ರಾಜ್ಯಗಳಲ್ಲಿಯೂ ಬಿಜೆಪಿ ಮುನ್ನಡೆಯನ್ನು ಸಾಧಿಸಿದ್ದರೆ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಹೀಗೆ ಬಿಜೆಪಿ ಮೂರು ರಾಜ್ಯಗಳಲ್ಲಿ ಮುನ್ನಡೆ ಸಾಧಿಸುತ್ತಿರುವ ಸಂದರ್ಭದಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಈ ಟ್ರೆಂಡ್ ರೀತಿಯಲ್ಲಿಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲಲಿದೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂದಿದ್ದಾರೆ.
ಅಲ್ಲದೇ ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳ ಆಮಿಶಕ್ಕೆ ಜನ ಮಣೆ ಹಾಕಿಲ್ಲ, ದುಡ್ಡು ಸುರಿಯುವುದು ಮುಸ್ಲಿಂ ತುಷ್ಟೀಕರಣ ಮಾಡುವುದು ಈ ಬಾರಿ ಕೆಲಸ ಮಾಡಿಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಇನ್ನೂ ಮುಂದುವರಿದ ಮಾತನಾಡಿದ ಈಶ್ವರಪ್ಪ ಮಧ್ಯಪ್ರದೇಶದಲ್ಲಿ ಗೆಲ್ಲುವ ವಿಶ್ವಾಸವಿತ್ತು. ಆದರೆ ರಾಜಸ್ಥಾನ ಹಾಗೂ ಛತ್ತೀಸ್‌ಗಢದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿಲ್ಲ. ಇಲ್ಲಿ ಬಿಜೆಪಿ ಗೆಲ್ಲುತ್ತಿರುವುದು ಇಡೀ ದೇಶವನ್ನೇ ಗೆದ್ದಂತಾಗುತ್ತಿದೆ ಎಂದು ಹೇಳಿದರು. ಇದಕ್ಕೆಲ್ಲಾ ಕಾರಣ ಮೋದಿ ಅವರ ಕೃಷ್ಣ ತಂತ್ರಗಾರಿಕೆ ಎಂದೂ ಸಹ ಈಶ್ವರಪ್ಪ ಕೊಂಡಾಡಿದರು.