ಇಂದು ( ಡಿಸೆಂಬರ್ 3 ) ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಘಡ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಸಮೀಕ್ಷೆಗಳನ್ನೆಲ್ಲಾ ತಲೆಕೆಳಗಾಗುವಂತೆ ಮಾಡಿದ್ದರೆ, ಇತ್ತ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದೆ.
ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದು ತೆಲಂಗಾಣದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಉತ್ತಮ ಹಂತದಲ್ಲಿದೆ. ಈ ಗೆಲುವಿನ ಕುರಿತು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೊದಲಿಗೆ ಛತ್ತೀಸ್‌ಘಡ, ರಾಜಸ್ಥಾನ ಹಾಗೂ ಮಧ್ಯ ಪ್ರದೇಶದ ಫಲಿತಾಂಶಗಳ ಬಗ್ಗೆ ಟ್ವೀಟ್ ಮಾಡಿರುವ ಮೋದಿ “ಜನತಾ ಜನಾರ್ಧನರಿಗೆ ತಲೆ ನಾವು ತಲೆ ಬಾಗಿದ್ದೇವೆ. ಛತ್ತೀಸ್‌ಗಢ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಬಂದಿರುವ ಫಲಿತಾಂಶ ದೇಶದ ಜನತೆ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಪರ ಇರುವ ಬಿಜೆಪಿಯನ್ನು ಆರಿಸಿದ್ದಾರೆ. ಅಭೂತಪೂರ್ವ ಬೆಂಬಲ ಕೊಟ್ಟ ಈ ರಾಜ್ಯಗಳ ಜನತೆಗೆ ನಾನು ಧನ್ಯವಾದ ತಿಳಿಸುತ್ತೇನೆ ಹಾಗೂ ಅವರ ಅಭಿವೃದ್ಧಿಗಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡುತ್ತಿದ್ದೇನೆ. ಕಷ್ಟಪಟ್ಟು ಕೆಲಸ ನಿರ್ವಹಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ವಿಶೇಷ ಧನ್ಯವಾದಗಳು. ಅವರೆಲ್ಲಾ ಶ್ರಮದಿಂದ ಕೆಲಸ ಮಾಡಿದ್ದು ನಮ್ಮ ಪಕ್ಷ ಮಾಡಿದ ಅಭಿವೃದ್ಧಿಯನ್ನು ಜನರಿಗೆ ಮನವರಿಕೆ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಇನ್ನು ತೆಲಂಗಾಣದ ಜನತೆ ಬಗ್ಗೆ ಸಹ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ “ತೆಲಂಗಾಣದ ನನ್ನೆಲ್ಲಾ ಅಣ್ಣ-ತಮ್ಮ, ಅಕ್ಕ-ತಂಗಿಯರೇ, ಕಳೆದ ಕೆಲ ವರ್ಷಗಳಿಂದ ನೀವು ಬಿಜೆಪಿಗೆ ನೀಡಿದ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ಬೆಂಬಲ ಹೆಚ್ಚುತ್ತಲೇ ಇದ್ದು ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ. ತೆಲಂಗಾಣ ಜನತೆ ಜತೆಗಿನ ನಮ್ಮ ಸಂಬಂಧ ಬಿಡಿಸಲಾಗದ್ದು ಹಾಗೂ ಅವರಿಗಾಗಿ ನಾವು ಶ್ರದ್ಧೆಯಿಂದ ಕೆಲಸ ಮಾಡಲಿದ್ದೇವೆ. ತೆಲಂಗಾಣದಲ್ಲಿ ಶ್ರಮವಹಿಸಿ ಕೆಲಸ ಮಾ ಡಿದ ಬಿಜೆಪಿ ಕಾರ್ಯಕರ್ತರಿಗೂ ಸಹ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.