Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವರ್ತೂರು ಪ್ರಕಾಶ್ ಗೆ ಬಂಧನ ಭೀತಿ : ನಾಯಾಲಯದಿಂದ ಅರೆಸ್ಟ್ ವಾರಂಟ್

ಕೋಲಾರ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವರ್ತೂರು ಪ್ರಕಾಶ್ ಅವರಿಗೆ ಅರೆಸ್ಟ್ ವಾರಂಟ್ ಜಾರಿಯಾಗಿದೆ. 14 ವರ್ಷಗಳ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾರಂಟ್ ಜಾರಿಗೊಳಿಸಿರುವ ಆನೇಕಲ್ ಜೆಎಫ್ ಎಫ್ ಸಿ ನ್ಯಾಯಾಲಯ, ವರ್ತೂರು ಅವರನ್ನು ಮೇ 10ರೊಳಗೆ ಬಂಧಿಸುವಂತೆ ಆದೇಶಿಸಿದೆ.

14 ವರ್ಷಗಳ ಹಿಂದೆ ವರ್ತೂರು ಪ್ರಕಾಶ್ ಅವರು, ಲೀಲಾವತಿ ಎಂಬುವರಿಗೆ ಚೆಕ್ ನೀಡಿದ್ದ ಪ್ರಕರಣವಿದು. ಹಣದ ವ್ಯವಹಾರವೊಂದಕ್ಕೆ ಸಂಬಂಧಪಟ್ಟಂತೆ, 2008ರಲ್ಲಿ ಲೀಲಾವತಿ ಎಂಬುವರಿಗೆ 25 ಲಕ್ಷ ರೂ.ಗಳ ಚೆಕ್ ಅನ್ನು ವರ್ತೂರು ಪ್ರಕಾಶ್ ನೀಡಿದ್ದರು. ಲೀಲಾವತಿಯವರು ಚೆಕ್ ಮೂಲಕ ನಗದು ಡ್ರಾ ಮಾಡಲು ಹೋದಾಗ ಅದು ಬೌನ್ಸ್ ಆಗಿತ್ತು. ಆಗ ಅವರು, ಆನೇಕಲ್ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವರ್ತೂರು ವಿರುದ್ಧ ಪ್ರಕರಣ ದಾಖಲಿಸಿದ್ದರು.

ಲೀಲಾವತಿಯವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ವರ್ತೂರು ಪ್ರಕಾಶ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಹಲವಾರು ಬಾರಿ ಸಮನ್ಸ್ ಜಾರಿಗೊಳಿಸಿದರೂ ವರ್ತೂರು ಪ್ರಕಾಶ್ ಅವರು ವಿಚಾರಣೆಗೆ ಗೈರು ಹಾಜರಾಗಿದ್ದರು. ಆ ಹಿನ್ನೆಲೆಯಲ್ಲಿ ಮೇ 5ರಂದು ಬಂಧನ ವಾರಂಟ್ ಜಾರಿಗೊಳಿಸಿರುವ ಜೆಎಂಎಫ್ ಸಿ ನ್ಯಾಯಾಲಯ ಮೇ 10ರೊಳಗೆ ಪ್ರಕಾಶ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಆದೇಶಿಸಿದೆ.

2018ರಲ್ಲೂ ಬಂಧನ ಭೀತಿ : 2018ರಲ್ಲಿಯೂ ವರ್ತೂರು ಪ್ರಕಾಶ್ ಅವರಿಗೆ ಬಂಧನ ಭೀತಿ ಎದುರಾಗಿತ್ತು. ಕೋಲಾರ ವ್ಯಾಪ್ತಿಯ ಚಿನ್ನೇನಹಳ್ಳಿಯ ನಿವಾಸಿ ಚೆನ್ನಮ್ಮ ಎಂಬುವರಿಗೆ ಸೇರಿದ 1 ಎಕರೆ 30 ಗುಂಟೆ ಜಮೀನನ್ನು ವರ್ತೂರು ಅವರು ಖರೀದಿಸಲು ಮುಂದಾಗಿದ್ದರು. ಆ ಜಮೀನು ಖರೀದಿಸಿ, ತಮ್ಮ ಅಣ್ಣನ ಮಗ ರಕ್ಷಿತ್ ಹೆಸರಿಗೆ ಅವರು ವರ್ಗಾಯಿಸಿದ್ದರು. ಆದರೆ, ಚನ್ನಮ್ಮ ಅವರಿಗೆ ಹಣ ನೀಡಿರಲಿಲ್ಲ ಎಂಬ ಆರೋಪ ವರ್ತೂರು ವಿರುದ್ಧ ಕೇಳಿಬಂದಿತ್ತು.

ಚನ್ನಮ್ಮ ಅವರು ಮೊದಲು ಕೋಲಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆನಂತರ, ಈ ಪ್ರಕರಣ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ವರ್ತೂರು ಪ್ರಕಾಶ್ ಅವರನ್ನು ಈ ಪ್ರಕರಣದ 4ನೇ ಆರೋಪಿ ಎಂದು ಪರಿಗಣಿಸಲಾಗಿತ್ತು. ಈ ಪ್ರಕರಣದಲ್ಲಿ ವರ್ತೂರು ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿ ವಜಾಗೊಂಡಿತ್ತು. ಆಗ, ವರ್ತೂರು ಅವರಿಗೆ ಬಂಧನ ಭೀತಿ ಎದುರಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ