ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಮಂಗಳವಾರ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕಚೇರಿಗೆ ದೂರು ಸಲ್ಲಿಸಿದೆ.
ಸಭಾಧ್ಯಕ್ಷ ಯು.ಟಿ ಖಾದರ್ ಅವರನ್ನು ಭೇಟಿ ಮಾಡಿದ ಮಹಾಸಭಾ ಪದಾಧಿಕಾರಿಗಳು, ಖರ್ಗೆ ಮತ್ತು ಅರಣ್ಯ ಸಚಿವ ಖಂಡ್ರೆ ವಿರುದ್ಧ ಹೇಳಿಕೆ ನೀಡಿದ ಜ್ಞಾನೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿದರು. ದೂರನ್ನು ಪರಿಶೀಲಿಸುವುದಾಗಿ ಖಾದರ್ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಹಾಸಭಾದ 20 ಕ್ಕೂ ಹೆಚ್ಚು ಜಿಲ್ಲಾಧ್ಯಕ್ಷರು ಸಭೆ ನಡೆಸಿ ಕ್ರಮ ಕೈಗೊಳ್ಳಲು ವಿಫಲವಾದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಜ್ಞಾನೇಂದ್ರ ಅವರನ್ನು ಪಕ್ಷದಿಂದ ವಜಾಗೊಳಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮಹಾಸಭಾ ಸಭೆಯಲ್ಲಿ ಬಿಜೆಪಿಗೆ ಒತ್ತಾಯಿಸಲಾಯಿತು.
ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ಜ್ಞಾನೇಂದ್ರ ಅವರು ಆಗಸ್ಟ್ 1 ರಂದು ಹೇಳಿಕೆ ನೀಡಿದ್ದು, ಮರುದಿನ ಬೆಂಗಳೂರಿನ ಸದಾಶಿವನಗರ ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ ಒಂದು ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಜ್ಞಾನೇಂದ್ರ ಅವರ ಹೇಳಿಕೆಗೆ ದೇಶಾದ್ಯಂತ ನೆಟಿಜನ್‌ಗಳಿಂದ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಸಂಘಟನೆಯ ಸಭೆಯಲ್ಲಿ ಚರ್ಚಿಸಿದ್ದರೂ ಜ್ಞಾನೇಂದ್ರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಟೀಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರು ಸ್ವಯಂ ಪ್ರೇರಿತವಾಗಿ ಮಹಾಸಭಾ ಸಭೆ ಕರೆದಿದ್ದಾರೆ ಎಂದು ಪ್ರಸನ್ನ ತಿಳಿಸಿದರು.