Mysore
20
overcast clouds
Light
Dark

ನಾವೇ ನಂಬರ್‌ 2! ನಮ್ಮ ಮೆಟ್ರೋಗೆ ಮತ್ತೊಂದು ಗರಿ, ಹೈದರಾಬಾದ್‌ ಅನ್ನು ಹಿಂದಿಕ್ಕಿದ ಬೆಂಗಳೂರು!

ಬೆಂಗಳೂರು : ನಮ್ಮ ಮೆಟ್ರೋ ಶನಿವಾರದಿಂದ (ಮಾ.25) ಇನ್ನಷ್ಟು ದೂರ ಕ್ರಮಿಸಲಿದ್ದು, ದೇಶದ ಎರಡನೇ ಅತಿ ದೂರ ಕ್ರಮಿಸುವ ಮೆಟ್ರೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮಾ.25 ರಂದು 13.71 ಕಿ.ಮೀ. ಉದ್ದದ ವೈಟ್‌ಫೀಲ್ಡ್‌ – ಕೆಆರ್‌ಪುರ ಮಾರ್ಗದ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಮೂಲಕ ನಮ್ಮ ಮಟ್ರೋ ಸಂಚಾರ ಮಾರ್ಗದ ಉದ್ದ 69.71 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಸದ್ಯ 56 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ಕ್ರಮಿಸುತ್ತಿದೆ.ದಿಲ್ಲಿ ಮೆಟ್ರೋ ಪ್ರಸ್ತುತ 390 ಕಿ.ಮೀ. ಸಂಚಾರ ಮಾರ್ಗ ಹೊಂದಿದ್ದು, ದೇಶದಲ್ಲಿಯೇ ನಂಬರ್‌ ಒನ್‌ ಸ್ಥಾನದಲ್ಲಿದೆ. ಸದ್ಯ 69.2 ಕಿ.ಮೀ. ಸಂಚಾರ ಮಾಡುತ್ತಿರುವ ಹೈದರಾಬಾದ್‌ ಮೆಟ್ರೋ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಗ್ಗಲಿದೆ.ಮೆಟ್ರೋ ಯೋಜನೆ ರಾಜಧಾನಿಗೆ ಕಾಲಿಟ್ಟು 12 ವರ್ಷಗಳಾಗಿವೆ. 2011ರ ಅ. 20ರಂದು ರೀಚ್‌-1ರ 6.7 ಕಿ.ಮೀ. ಉದ್ದದ ಮಾರ್ಗವು (ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ) ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿತು. ಕೊನೆಯದಾಗಿ 2021ರ ಜನವರಿ 15ರಂದು ಯಲಚೇನಹಳ್ಳಿಯಿಂದ- ರೇಷ್ಮೆ ಸಂಸ್ಥೆವರೆಗೆ 6.3 ಕಿ.ಮೀ ನೇರಳೆ ಮಾರ್ಗದ ವಿಸ್ತೃತ ಮಾರ್ಗಕ್ಕೆ ಹಸಿರು ನಿಶಾನೆ ತೋರಲಾಯಿತು.

ಪ್ರಯಾಣಿಕರ ಸಂಖ್ಯೆ 1.50 ಲಕ್ಷ ಹೆಚ್ಚಳ ನಿರೀಕ್ಷೆ!
ಕೋವಿಡ್‌ ಆರಂಭಕ್ಕೆ ಮೊದಲು ಮೆಟ್ರೋದಲ್ಲಿ ಪ್ರತಿದಿನ 5 ಲಕ್ಷಕ್ಕಿಂತ ಕಡಿಮೆ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕೋವಿಡ್‌ ಎರಡನೇ ಅಲೆಯ ನಂತರ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಮೆಟ್ರೋದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಕೇವಲ 2.5 ಲಕ್ಷಕ್ಕೆ ಇಳಿಕೆಯಾಯಿತು. ಈಗ ಮತ್ತೆ ಸಹಜ ಸ್ಥಿತಿಗೆ ಮರಳಿದ್ದು, ಸದ್ಯ ನಮ್ಮ ಮೆಟ್ರೋದಲ್ಲಿ ಪ್ರತಿ ದಿನ ಸರಾಸರಿ 5.30 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ವೈಟ್‌ಫೀಲ್ಡ್‌ – ಕೆ.ಆರ್‌.ಪುರ ಮಾರ್ಗ ಸಂಚಾರಕ್ಕೆ ಮುಕ್ತವಾದ ಬಳಿಕ 1.50 ಲಕ್ಷದಷ್ಟು ಪ್ರಯಾಣಿಕರ ಸಂಖ್ಯೆ ಅಧಿಕವಾಗಲಿದೆ.ಸಾಮಾನ್ಯವಾಗಿ ರಸ್ತೆ ಮೂಲಕ ಕೆಆರ್‌ ಪುರ ಮತ್ತು ವೈಟ್‌ಫೀಲ್ಡ್‌ ನಡುವೆ ಪ್ರಯಾಣಿಸಲು ಒಂದು ಗಂಟೆ ಬೇಕು. ಆದರೆ, ಮೆಟ್ರೋದಲ್ಲಿ ಪ್ರಯಾಣಿಸಲು ಕೇವಲ 24 ನಿಮಿಷ ಸಾಕು. ಬಿಎಂಆರ್‌ಸಿಎಲ್‌ 10- 12 ನಿಮಿಷಗಳ ಅಂತರದೊಳಗೆ 7 ರೈಲುಗಳ ಸೇವೆ ನೀಡಲಿದೆ.

ಈ ವರ್ಷವೇ ಇನ್ನಷ್ಟು ದೂರ ಕ್ರಮಿಸಲಿರುವ ಮೆಟ್ರೋ!
2025ರ ವೇಳೆಗೆ 175 ಕಿ.ಮೀ. ಮೆಟ್ರೋ ಸಂಚಾರ ಪ್ರಯಾಣಿಕರಿಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ಗುರಿ ಇಟ್ಟುಕೊಂಡಿದೆ. ಈ ವರ್ಷವೇ ಹೊಸದಾದ ಹಳದಿ ಮಾರ್ಗದ ಆರ್‌.ವಿ.ರೋಡ್‌ – ಬೊಮ್ಮಸಂದ್ರದವರೆಗಿನ 19 ಕಿ.ಮೀ. ಹಾಗೂ ಇದರ ಜತೆಗೆ ಮೈಸೂರು ರಸ್ತೆಯ ಕೆಂಗೇರಿಯಿಂದ ಚಲ್ಲಘಟ್ಟವರೆಗೆ 1.9 ಕಿ.ಮೀ. ಹಾಗೂ ಹಸಿರು ಮಾರ್ಗದ ಹೆಸರಘಟ್ಟ-ಮಾದವಾರವರೆಗಿನ 4 ಕಿ.ಮೀ. ಮಾರ್ಗದಲ್ಲಿಯೂ ಮೆಟ್ರೋ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. ನಮ್ಮ ಮೆಟ್ರೋದ 2 ಮತ್ತು 3 ನೇ ಹಂತದ ಕಾಮಗಾರಿಗಳು ಪೂರ್ಣಗೊಂಡರೆ, ನಗರದಲ್ಲಿ2041ರ ಹೊತ್ತಿಗೆ ಒಟ್ಟು 314 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಸಿದ್ಧವಾಗಲಿದೆ.

ದೇಶದ ಮೆಟ್ರೊ ಅಂಕಿ-ಸಂಖ್ಯೆ
819 ಕಿ.ಮೀ. ಸದ್ಯ ದೇಶದಲ್ಲಿರುವ ಮೆಟ್ರೋ ಸಂಚಾರ ವ್ಯವಸ್ಥೆ.
481.03 ಕಿ.ಮೀ. ಮೆಟ್ನಿರೋರ್ಮಾಣ ಕೆಲಸ ಪ್ರಗತಿಯಲ್ಲಿ
372.77 ಕಿ.ಮೀ. ಸರಕಾರದಿಂದ ಮೆಟ್ರೋ ಮಾರ್ಗದ ಒಪ್ಪಿಗೆ
1050 ಕಿ.ಮೀ. ವಿವಿಧ ರಾಜ್ಯಗಳಿಂದ ಪ್ರಸ್ತಾವನೆ
ಕೋಲ್ಕತಾ ಮೆಟ್ರೋ ಅತ್ಯಂತ ಹಳೇ ಮೆಟ್ರೋ
ದಿಲ್ಲಿ ಮೆಟ್ರೋ: ಅತಿಹೆಚ್ಚು ಮೆಟ್ರೋ ಪ್ರಯಾಣಿಕರನ್ನು ಹೊಂದಿರುವ ಸಾರಿಗೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ