Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅನ್ನಭಾಗ್ಯ ಯೋಜನೆ: ಜುಲೈನಿಂದಲೇ 5 ಕೆಜಿ ಅಕ್ಕಿ ಬದಲಿಗೆ, ಹಣ ನೀಡಲು ಸಂಪುಟ ನಿರ್ಧಾರ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಭಾರತೀಯ ಆಹಾರ ನಿಗಮ ಅಕ್ಕಿ ಕೊಡಲು ನಿರಾಕರಿಸಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಹಣ ನೀಡಲು ಸಂಪುಟ ಸಭೆ ನಿರ್ಧರಿಸಿದೆ.

ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯನ ಖಾತೆಗೆ 5 ಕೆಜಿ ಅಕ್ಕಿ ಜೊತೆ ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಮಾಸಿಕ ತಲಾ 170 ರುಪಾಯಿ ಹಣ ನೀಡಲು ಸಂಪುಟ ತೀರ್ಮಾನಿಸಿದೆ. ಜುಲೈ 1ರಿಂದಲೇ ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತದೆ.

ಇಂದು ನಡೆದ ಸಂಪುಟ ಸಭೆ ಬಳಿಕ ಮಾತನಾಡಿದ ಆಹಾರ ಖಾತೆ ಸಚಿವ ಕೆಎಚ್ ಮುನಿಯಪ್ಪನವರು, ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಿದ್ದ 5 ಕೆಜಿ ಅಕ್ಕಿಯನ್ನು ಹೊಂದಿಸಲು ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಸಮಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ಕೊಡುವವರೆಗೂ ಹಣವನ್ನು ನೀಡಲಾಗುತ್ತದೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ.

ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗಾಗಿ ಅಕ್ಕಿ ಖರೀದಿಸಲು ಕರ್ನಾಟಕ ಸರ್ಕಾರ ಕೇಂದ್ರ ಆಹಾರ ನಿಗಮದ ಮೊರೆ ಹೋಗಿತ್ತು. ಆದರೆ, ಅಲ್ಲಿಂದ ಹೆಚ್ಚುವರಿ ಅಕ್ಕಿ ಪೂರೈಕೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಸಚಿವ ಮುನಿಯಪ್ಪ ಅವರು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೂ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ