Mysore
21
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಬಜೆಟ್ ಮಂಡನೆ ವೇಳೆ ಶಾಸಕರ ಸೀಟ್‍ನಲ್ಲಿ ಕುಳಿತ ಅಪರಿಚಿತ ವ್ಯಕ್ತಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹುನಿರೀಕ್ಷಿತ ಬಜೆಟ್ ಮಂಡನೆಯ ವೇಳೆ ಭದ್ರತಾ ಲೋಪ ಎದುರಾದ ಘಟನೆ ನಡೆದಿದೆ.

ಸಿಎಂ ಅವರು ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಶಾಸಕರ ಸೀಟ್‍ನಲ್ಲಿ ಕುಳಿತುಕೊಂಡಿದ್ದರು. ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದ ಸಂದರ್ಭದಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಅವರಿಗೆ ಮೀಸಲಾಗಿರುವ ಆಸನದಲ್ಲಿ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಕುಳಿತಿದ್ದರು. ಕರೆಮ್ಮ ಬಂದ ಬಳಿಕ ವ್ಯಕ್ತಿ ಎದ್ದು ಹೋಗಿದ್ದಾನೆ.

ಈ ಸಂಬಂಧ ಗುರುಮಿಠಕಲ್ ಶಾಸಕ ಶರಣ ಗೌಡ ಕಂದಕೂರು ಮಾಧ್ಯಮದವರೊಂದಿಗೆ ಮಾತನಾಡಿ, ಯಾರೋ ಒಬ್ಬ ಖಾಸಗಿ ವ್ಯಕ್ತಿ ಬಂದು ಸದನದ ಆಸನದಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ನಾನು ಪಕ್ಕದಲ್ಲಿದ್ದ ಜಿಟಿ ದೇವೇಗೌಡ ಅವರ ಬಳಿ ಕೇಳಿದೆ. ಅವರು ಯಾರೋ ಗೊತ್ತಿಲ್ಲ ಅಂದ್ರು. ಆಗ ನಾನು ಆ ವ್ಯಕ್ತಿಯನ್ನು ಕೇಳಿದಾಗ ಮೊಳಕಾಲ್ಮೂರು ಎಂಎಲ್‍ಎ ಅಂದಿದ್ದಾರೆ. ಅವರು ಸುಮಾರು 15 ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ರು. ಇದೊಂದು ಭದ್ರತಾ ಲೋಪ ಎಂದರೆ ತಪ್ಪಾಗಲಾರದು ಎಂದರು.

ಶಾಸಕರಲ್ಲದೇ ಇರುವವರು ಹೀಗೆ ಬಂದು ಕುಳಿತುಕೊಳ್ಳುತ್ತಾರೆ ಎಂದರೆ ನಿಜಕ್ಕೂ ಶಾಕ್ ಆಯಿತು. ಸದನದ ಒಳಗಡೆ ಯಾರನ್ನೂ ಒಳಗಡೆ ಬಿಡಲ್ಲ. ಅಂಥದ್ದರಲ್ಲಿ ಈ ವ್ಯಕ್ತಿ ಒಳಗೆ ಬರುತ್ತಾರೆ ಅಂದರೆ ನಿಜಕ್ಕೂ ಅಚ್ಚರಿಯೇ ಸರಿ. ವ್ಯಕ್ತಿ 15 ನಿಮಿಷ ಕುಳಿತುಕೊಂಡಿದ್ದಲ್ಲದೇ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿ ತೆರಳಿ ಹ್ಯಾಂಡ್ ಶೇಕ್ ಕೂಡ ಮಾಡಿದ್ದಾರೆ. ಆದರೆ ಡಿಸಿಎಂ ಅವರು ಬಜೆಟ್ ಬ್ಯುಸಿಯಲ್ಲಿ ಇದ್ದ ಕಾರಣ ವ್ಯಕ್ತಿ ಕಡೆ ಹೆಚ್ಚಿನ ಗಮನ ಕೊಡಲಿಲ್ಲ ಎಂದರು.

ಒಟ್ಟಿನಲ್ಲಿ ಈ ರೀತಿಯಾಗಿ ಅಪರಿಚಿತ ವ್ಯಕ್ತಿ ಸದನದ ಒಳಗಡೆ ಬಂದಿದ್ದು, ಸದನ ಹಾಗೂ ಶಾಸಕರಿಗೂ ಅಗೌರವ ತೋರಿದಂತಾಗಿದೆ. ಅಲ್ಲದೆ ಹೀಗೆ ಒಳಗಡೆ ಬಂದು ಯಾರಿಗಾದರೂ ಏನಾದರೂ ಅನಾಹುತ ಆದರೆ ಯರು ಜವಾಬ್ದಾರಿ ಎಂದು ಶಾಸಕರು ಪ್ರಶ್ನಿಸಿದರು.

ಸದ್ಯ ಈ ಸಂಬಂಧ ಸ್ಪೀಕರ್ ಗೆ ಶರಣ ಗೌಡ ಕಂದಕೂರು ದೂರು ನೀಡಿದ್ದು, ವ್ಯಕ್ತಿಯನ್ನು ವಿಧಾನಸೌಧ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ