Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕಾಂಗ್ರೆಸ್‌ನ ಗ್ಯಾರಂಟಿ ಪ್ರಣಾಳಿಕೆ ಬಿಡುಗಡೆ:‌ ಉದ್ಯೋಗ ಸೃಷ್ಠಿ, ಸಮಾನತೆಗೆ ಒತ್ತು

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆ ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಬೇಕೆಂಬ ಗುರಿಯೊಂದಿಗೆ ಕಣಕ್ಕಿಳಿದಿರುವ ಕಾಂಗ್ರೆಸ್‌ ಶುಕ್ರವಾರ(ಏಪ್ರಿಲ್‌ 5) ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನ್ಯಾಯ ಪತ್ರದ ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಕಾಂಗ್ರೆಸ್‌ ವರಿಷ್ಟೆ ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್‌ ಗಾಂಧಿ ಹಾಗೂ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಚಿದಂಬರ ಹಾಗೂ ವೇಣುಗೋಪಾಲ್‌ ಉಪಸ್ಥಿತರಿದ್ದರು.

ಪ್ರಣಾಳಿಕೆಯಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಅಲ್ಪ ಸಂಖ್ಯಾತರ ವೈಯಕ್ತಿಕ ಕಾನೂನುಗಳ ಸುಧಾರಣೆ, ಹಿರಿಯ ನಾಯರಿಕರು, ಅಂಗವಿಕಲರ ಅಭ್ಯುದಯಕ್ಕೆ ಒತ್ತು ನೀಡಲಾಡುವುದು ಎಂದು ಉಲ್ಲೇಖಿಸಿದ್ದಾರೆ. ದೇಶವ್ಯಾಪ್ತಿ ಜಾತಿ ಗಣತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗಿರುವ ಶೇ‌. 50ರ ಮೀಸಲಾತಿಯನ್ನು ಏರಿಕೆ ಮಾಡಲು ಸಾಂವಿಧಾನಿಕ ತಿದ್ದುಪಡಿ ತರಲಾಗುವುದು ಎಂದು ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಪಂಚ ನ್ಯಾಯ ಅಥವಾ ನ್ಯಾಯದ ಸ್ತಂಭಗಳ ಭರವಸೆಯು ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಸಹಭಾಗಿತ್ವ ನ್ಯಾಯವನ್ನು ಒಳಗೊಂಡಿದೆ. ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ನೀಡಲಾಗಿರುವ ಶೇ. 10ರಷ್ಟು ಮೀಸಲಾತಿಯನ್ನು ಯಾವುದೇ ತಾರತಮ್ಯವಿಲ್ಲದೆ, ಎಲ್ಲ ಜಾತಿ, ಜನಾಂಗಗಳ ದುರ್ಬಲರಿಗೂ ಹಂಚಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಹುದ್ದೆಗಳಲ್ಲಿನ ಬ್ಯಾಕ್‌ ಲಾಗ್ ಹುದ್ದೆಗಳನ್ನು ಒಂದು ವರ್ಷದ ಅವಧಿಯೊಳಗೆ ಭರ್ತಿ ಮಾಡಲಾಗುವುದು ಎಂದು ಕಾಂಗ್ರೆಸ್‌ ಭರವಸೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ, ಅಗ್ನಿಪಥ್ ಯೋಜನೆ ರದ್ದು, ವಿವಿಧ ಹಂತಗಳಲ್ಲಿ 30 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದೆ. ಸರ್ಕಾರಿ ಹಾಗೂ ಸಾರ್ವಜನಿಕ ಉದ್ಯಮಗಳಲ್ಲಿನ ನಿಯಮಿತ ಉದ್ಯೋಗಗಳಿಗೆ ಗುತ್ತಿಗೆ ಆಧಾರದ ನೇಮಕಾತಿಯನ್ನು ನಿಷೇಧಿಸಲಾಗುವುದು ಹಾಗೂ ಅಂತಹ ಉದ್ಯೋಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂಗೊಳಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.

ಕಾಂಗ್ರೆಸ್‌ ಪಕ್ಷವು ಈಗಾಗಲೇ ಪಂಚ ನ್ಯಾಯ ‘25 ಗ್ಯಾರಂಟಿ’ಗಳನ್ನು ಘೋಷಿಸಿದೆ. ಮನೆ ಮನೆ ಗ್ಯಾರಂಟಿ ಅಭಿಯಾನವು ಆರಂಭವಾಗಿದೆ. ದೇಶದಾದ್ಯಂತ ಸಮಾಲೋಚನೆಗಳನ್ನು ನಡೆಸಿ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಇ –ಮೇಲ್‌ ಹಾಗೂ ಆವಾಜ್‌ ಭಾರತ್‌ ಕಿ ವೆಬ್‌ಸೈಟ್‌ ಮೂಲಕ ಕಾಂಗ್ರೆಸ್‌ ಪ್ರಾಣಾಳಿಕೆಗೆ ಸಾವಿರಾರು ಸಲಹೆಗಳು ಬಂದಿದ್ದವು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Tags: