Mysore
25
overcast clouds

Social Media

ಭಾನುವಾರ, 05 ಜನವರಿ 2025
Light
Dark

ಮೈಸೂರಿನಲ್ಲಿ ಸೆಮಿ ಕಂಡಕ್ಟರ್‌ ಘಟಕ ಸ್ಥಾಪನೆಗೆ ಒಪ್ಪಂದ

ಬೆಂಗಳೂರು: ಮೈಸೂರಿನಲ್ಲಿ 3,200 ಉದ್ಯೋಗ ಸೃಷ್ಟಿ ಮಾಡುವ 3,750 ಕೋಟಿ ರೂ. ಹೂಡಿಕೆಯ ಅತ್ಯಾಧುನಿಕ ಸೆಮಿಕಂಡಕ್ಟರ್ ತಯಾರಿಕಾ ಘಟಕದ ಸ್ಥಾಪನೆ ಸಂಬಂಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕೇನ್ಸ್ ಟೆಕ್ನಾಲಜಿ ಸಂಸ್ಥೆಯು ಕರ್ನಾಟಕ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ ಒಡಂಬಡಿಕೆಗೆ (ಎಂಒಯು) ಗುರುವಾರ ಸಹಿ ಹಾಕಿದೆ.

ಕೇನ್ಸ್ ಟೆಕ್ನಾಲಜಿಯ ಮೈಸೂರಿನಲ್ಲಿ ಇಎಸ್‌ಡಿಎಂ ಸೆಮಿಕಾನ್ ಪರಿಸರ ವ್ಯವಸ್ಥೆಯ ಪ್ರಮುಖ ನಿರ್ವಹಣ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಈ ಒಡಂಬಡಿಕೆಯು ಮೈಸೂರು ನಗರವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸಲು ಸಹಾಯ ಮಾಡುತ್ತದೆ.

ಕೇನ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ (ಓಎಸ್‌ಎಟಿ) ಸೌಲಭ್ಯದ ಸಂಸ್ಥೆಯಾಗಿದ್ದು, ಬಹು-ಲೇಯರ್ಡ್ ಬೋರ್ಡ್‌ಗಳನ್ನು ಉತ್ಪಾದಿಸಲು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಯಾರಿಕಾ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಮಾಹಿತಿ ತಂತ್ರಜಾನ ಇಲಾಖೆಯ ನಿರ್ದೇಶಕರಾದ ದರ್ಶನ್‌, ಕೇನ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಗುಪ್ತಾ ಅವರು ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಹಾಜರಿದ್ದರು.

ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ
ಇದೇವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2023- 24 ನೇ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಅನುಷ್ಠಾನದ ಕುರಿತು ಚರ್ಚಿಸಲು ಇಂದು ಸಭೆ ಜರುಗಿತು.

ನರೇಗಾ ಯೋಜನೆಯಡಿ 5000 ಗೋಮಾಳ ಪ್ರದೇಶಗಳು, 50 ಸಾವಿರ ಎರಕೆ ಹುಲ್ಲುಗಾವಲು ಪ್ರದೇಶಗಳು, 2 ಲಕ್ಷ ಬರ ಪರಿಹಾರ ಕಾಮಗಾರಿ ಗಳು, 81 ಸಾವಿರ ಪ್ರವಾಹ ನಿಯಂತ್ರಣ ಕಾಮಗಾರಿ ಗಳು ಹಾಗೂ 4268 ಭೂ ಕುಸಿತ ತಡೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

27903 ಗ್ರಾಮಗಳಲ್ಲಿ ಸ್ಮಾಶಾನ ಭೂಮಿಯನ್ನು ಶಾಂತಿಧಾಮಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು.
5000 ಶಾಲಾ ಆರಣಗಳನ್ನು ವಿದ್ಯಾಧಾಮಗಳನ್ನಾಗಿ ಉನ್ನತೀಕರಿಸುವುದು, 750 ಗ್ರಾಮ ಸಂತೆಗಳನ್ನು ಹಾಗೂ 27 ಸಾವಿರ ಕೊಳವೆಬಾವಿ ಪುನಶ್ಚೇತನ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಸಚಿವ ಪ್ರಿಯಾಂಕಾ ಖರ್ಗೆ ವಿವರಿಸಿದರು.

ಕೂಸಿನ ಮನೆ

ಆಯವ್ಯಯದಲ್ಲಿ ಹೇಳಿರುವಂತೆ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ , ಪೌಷ್ಟಿಕತೆ ಮತ್ತು ಸುರಕ್ಷತೆಗಾಗಿ ಕೂಸಿನ ಮನೆ ಹೆಸರಿನಲ್ಲಿ ನಾಲ್ಕು ಸಾವಿರ ಕೂಸಿನ ಮನೆಗಳನ್ನು ತೆರೆಯುವ ಕೆಲಸವನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ಮುಖ್ಯಮಂತ್ರಿಗಳು ಸೂಚಿಸಿದರು.

ಮುಖ್ಯಮಂತ್ರಿಗಳ ಫೆಲೋಶಿಪ್ ಗಾಗಿ ಪ್ರತಿ ತಾಲ್ಲೂಕಿನ ಒಬ್ಬ ನುರಿತ ಯುವ ಪದವೀಧರರನ್ನು 24 ತಿಂಗಳ ಅವಧಿಗೆ ಆಯ್ಕೆ ಮಾಡುವುದು 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳನ್ನು ತಲಾ 25 ಲಕ್ಷ ಗಳ ವೆಚ್ಚದಲ್ಲಿ ನಿರ್ಮಾಣ ಕಾರ್ಯವನ್ನು ಆಧುನಿಕ ತಂತ್ರಜ್ಞಾನ ಬಳಸಿ ಕಾರ್ಯಗತ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದರು. ಜಲ್ ಜೀವನ್ ಮಿಷನ್ ಯೋಜನೆಯಡಿ 800 ಗ್ರಾಮಗಳಿಗೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಒಣ ತ್ಯಾಜ್ಯ ವಿಲೇವಾರಿಯಲ್ಲಿ ನಿರಂತರತೆ ಕಾಪಾಡಲು ಹಾಗೂ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು 27 ಜಿಲ್ಲೆಗಳಲ್ಲಿ ತಲಾ ಒಂದು ರಿಕವರಿ ಫೆಸಿಲಿಟಿಯನ್ನು ತಲಾ 2 ಕೋಟಿ ವೆಚ್ಚದಲ್ಲಿ ನಿರ್ಮಾಣ. 22 ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ