ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜೈಲಿನಿಂದ ಹೊರ ಬಂದ ಮೇಲೆ, ಮಠ ಹಾಗೂ ವಿದ್ಯಾಪೀಠದ ಅಧಿಕಾರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಹೈಕೋರ್ಟ್ ನ ನಿರ್ದೇಶನದ ಮೇರೆಗೆ ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿ ಆಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಗೀತಾ ಅವರು ಶಿವಮೂರ್ತಿ ಮುರುಘಾ ಶರಣರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಶಿವಮೂರ್ತಿ ಶರಣರಿಗೆ ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಹೊರಗಿನಿಂದಲೇ ಆಡಳಿತ ನಡೆಸಲಿದ್ದಾರೆ.
ಮುರುಘಾ ಶರಣರಿಗೆ ಚಿತ್ರದುರ್ಗ ಜಿಲ್ಲಾ ಪ್ರವೇಶಕ್ಕೆ ಹೈಕೋರ್ಟ್ ನಿರ್ಬಂಧ ಹೇರಿದ್ದರೂ ಕೂಡ ಜಿಲ್ಲಾ ನ್ಯಾಯಾಲಾಯ ಅಧಿಕಾರವನ್ನು ಹಸ್ತಾಂತರಿಸಿರುವುದು ಅಚ್ಚರಿ ಮೂಡಿಸಿದೆ.
ಇನ್ನು ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತವನ್ನು ನ್ಯಾಯಾಧೀಶರು ಮಠದ ಪೀಠಾಧಿಪತಿಗಳಿಗೆ ಹಸ್ತಾಂತರಿಸಿದ್ದಾರೆ. ಮಠದ ಸದ್ಭಕ್ತರು ಸಹಕರಿಸಬೇಕು ಎಂದು ಶಿವಮೂರ್ತಿ ಶರಣರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಮುರುಘಾ ಮಠದ ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದರು ಹಾಗಾಗಿ ಮಠದ ಆಡಳಿತವನ್ನು ನೋಡಿಕೊಳ್ಳುವ ಜವಬ್ಧಾರಿಯನ್ನು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರಿಗೆ ನೀಡಿ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಮುರುಘಾ ಶರಣರು ಕೆಲದಿನಗಳ ಹಿಂದೆ ಬೇಲ್ ಮೇಲೆ ಹೊರ ಬಂದಿದ್ದರು. ಜೈಲಿನಿಂದ ಹರ ಬರುತ್ತಿದ್ದಂತೆಯೇ ಶರಣರಿಗೆ ಎರಡನೇ ಕೇಸ್ ನಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಇದೆಲ್ಲದರ ನಡುವೆ ಇದೀಗ ಮತ್ತೆ ಮಠದ ಆಡಳಿತ ಶಿವಮೂರ್ತಿ ಮುರುಘಾ ಶರಣರ ತೆಕ್ಕೆಗೆ ಬಿದ್ದಿದೆ.