ಕಣ್ಣೂರು : ಕೇರಳದ ಕಣ್ಣೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಎಲ್ಲಾ ಹಂದಿಗಳನ್ನು ಕೊಂದು ಹೂತು ಹಾಕಲು ಆದೇಶಿಸಿದೆ.
ಕಣ್ಣೂರು ಜಿಲ್ಲೆಯ ಕಣಿಚಾರ್ ಎಂಬ ಹಳ್ಳಿಯ ಸಮೀಪದ ಮಲೆಯಂಪಾದಿ ಎಂಬಲ್ಲಿರುವ ಖಾಸಗಿ ಹಂದಿ ಫಾರಂನಲ್ಲಿ ಆಫ್ರಿಕನ್ ಹಂದಿ ಜ್ವರದ ಸೋಂಕು ಪತ್ತೆಯಾಗಿದ್ದು, ಫಾರಂನ 10 ಕಿ.ಮೀ. ಸುತ್ತಳತೆಯಲ್ಲಿರುವ ಮತ್ತೊಂದು ಫಾರಂನಲ್ಲಿರುವ ಹಂದಿಗಳನ್ನು ಹೂತು ಹಾಕಲು ಜಿಲ್ಲಾಡಳಿತ ಆದೇಶಿಸಿದೆ.
ಹಂದಿ ಜ್ವರ ಮಾದರಿಗಳನ್ನು ಪರೀಕ್ಷಿಸಿದ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಸೋಂಕನ್ನು ಖಚಿತಪಡಿಸಿದ್ದು, ಫಾರಂನ ಒಂದು ಕಿ.ಮೀ. ಸುತ್ತಮುತ್ತಲ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿ ಅಲ್ಲಿಂದ ಹಂದಿ ಮಾಂಸವನ್ನು ಹೊರಗಿನ ಪ್ರದೇಶಗಳಿಗೆ ಸಾಗಿಸುವುದನ್ನು ಮೂರು ತಿಂಗಳ ಕಾಲ ನಿಷೇಧಿಸಲಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಸುತ್ತಮುತ್ತಲಿನ ಯಾವುದೇ ಫಾರಂನಲ್ಲಿ ಹಂದಿಗಳಿಗೆ ಜ್ವರ ಬಂದಿದ್ದರೆ ಇಲಾಖೆ ಗಮನಕ್ಕೆ ತರಬೇಕೆಂದು ಸೂಚನೆ ನೀಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸ ರೋಗದ ಪ್ರಕರಣಗಳು ಪತ್ತೆಯಾದರೆ ವಿಪತ್ತು ನಿರ್ವಹಣಾಧಿಕಾರಿಗಳಿಗೆ ಆದಷ್ಟು ಬೇಗ ಮಾಹಿತಿ ನೀಡಬೇಕು. ಇದರಿಂದ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.