Mysore
25
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಮೈ ಶುಗರ್ಸ್ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ : 37 ಸಾವಿರ ಕಬ್ಬು ಬೆಳೆಗಾರರಿಗೆ ಚೈತನ್ಯ!

ಬೆಂಗಳೂರು :‌ ಮಹತ್ವದ ಬೆಳವಣಿಗೆಯಲ್ಲಿ ಮೈ ಶುಗರ್ಸ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಆರ್ಥಿಕ ಇಲಾಖೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈ ಶುಗರ್ಸ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಈ ಹಿಂದೆ ಭರವಸೆ ನೀಡಿದ್ದರು.

ಆ ಭರವಸೆಯಂತೆ ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಪುನಶ್ಚೇತನಕ್ಕೆ 15 ಕೋಟಿ ರೂ ಹಾಗೂ ಕಾರ್ಖಾನೆಯ ದುಡಿಯುವ ಬಂಡವಾಳಕ್ಕೆ 35 ಕೋಟಿ ರೂ ಬಿಡುಗಡೆಗೆ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು ಕಳೆದ ವಾರ ಅನುಮೋದನೆ ನೀಡಿದ್ದರು. ಈ ಪ್ರಕಾರ ಬುಧವಾರ ಆರ್ಥಿಕ ಇಲಾಖೆ 50 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ನೇತೃತ್ವದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಶಾಸಕರ ಮತ್ತು ಜನಪ್ರತಿನಿಧಿಗಳ ನಿಯೋಗ ಮೈ ಶುಗರ್ಸ್ ಪುನಶ್ಚೇತನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು.‌ 37 ಸಾವಿರ ಕಬ್ಬು ಬೆಳೆಗಾರ ರೈತರಿಂದ 5 ಲಕ್ಷ ಟನ್ ಕಬ್ಬು ಸರಬರಾಜು ಮಾಡುವ ಒಪ್ಪಂದವಾಗಿತ್ತು. ಈ ಒಪ್ಪಂದದಂತೆ ರೈತರಿಗೆ ಸಕಾಲದಲ್ಲಿ ಹಣ ಒದಗಿಸುವ ಅಗತ್ಯವಿದೆ ಎಂದು ನಿಯೋಗ ಮನವಿ ಮಾಡಿತ್ತು. ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮತ್ತೊಮ್ಮೆ ನುಡಿದಂತೆ ನಡೆದಿದ್ದು , ಕೊಟ್ಟ ಮಾತಿನಂತೆ ತಕ್ಷಣಕ್ಕೆ 50 ಕೋಟಿ ರೂ ಬಿಡುಗಡೆ ಆಗಿದೆ.

ಸಿಎಂ, ಡಿಸಿಎಂಗೆ ದಿನೇಶ್‌ ಗೂಳಿಗೌಡ ಅಭಿನಂದನೆ : ರಾಜ್ಯದಲ್ಲಿನ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಹಾಗೂ ದುಡಿಯುವ ಬಂಡವಾಳಕ್ಕಾಗಿ 50 ಕೋಟಿ ರೂಪಾಯಿಯನ್ನು ಜೂನ್ 14ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಿದ ಒಂದೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಣ ಬಿಡುಗಡೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮಂಡ್ಯ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.

2023-24 ನೇ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ತುರ್ತಾಗಿ ಧನ ಸಹಾಯ ನೀಡಬೇಕೆಂದು ತಾವು ಮಾಡಿದ್ದ ಮನವಿಗೆ ಸ್ಪಂದಿಸಿ ಸಿಎಂ ತಕ್ಷಣವೇ ಹಣ ಬಿಡುಗಡೆಗೆ ವ್ಯವಸ್ಥೆ ಮಾಡಿದ್ದಾರೆ. ಇದು ಈ ಭಾಗದ ರೈತರಿಗೆ ವರದಾನವಾಗಿದೆ. ರೈತರ ಹಿತದೃಷ್ಟಿಯಿಂದ ಕೂಡಲೇ ಹಣ ಮಂಜೂರಿ ಮಾಡಿರುವುದಕ್ಕೆ ರೈತರ ಪರವಾಗಿ ಹಾಗೂ ಮಂಡ್ಯ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಗ್ಯಾಂಗ್‌ಗಳಿಗೆ ನೀಡಲು ಹಣದ ಅವಶ್ಯಕತೆ ಇದೆ. ಯಂತ್ರಗಳ ದುರಸ್ತಿಗಳೂ ಇವೆ. ಅದಕ್ಕಾಗಿ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಹೀಗಾಗಿ ಕಾರ್ಖಾನೆ ಪ್ರಾರಂಭೋತ್ಸವ ಹಾಗೂ ಗ್ಯಾಂಗ್‌ಗಳಿಗೆ ನೀಡಲು 15 ಕೋಟಿ ರೂ. ಹಾಗೂ ಕಾರ್ಖಾನೆಯ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್ ) ಗಾಗಿ 35 ಕೋಟಿ ರೂ. ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿತ್ತು. ಈಗ ರಾಜ್ಯ ಸರ್ಕಾರ ಅನುದಾನವನ್ನೂ ಬಿಡುಗಡೆ ಮಾಡಿದೆ.

ಸರ್ಕಾರದ ಈ ಸಹಾಯದಿಂದ ಅವಧಿಗೆ ಸರಿಯಾಗಿ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಪ್ರಾರಂಭಿಸಲು ಅನುಕೂಲವಾಗಲಿದೆ. ರೈತರಿಗೆ ಸಕಾಲದಲ್ಲಿ ಕಬ್ಬು ಕಟಾವು ಹಾಗೂ ಹಣ ಬಿಡುಗಡೆಗೂ ಸಹಕಾರಿಯಾಗಲಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!