ಸಂಸತ್ ಭವನಕ್ಕೆ ನುಗ್ಗಿ ಬಣ್ಣದ ಹೊಗೆ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೈಸೂರಿನ ಮನೋರಂಜನ್, ಸಾಗರ್ ಶರ್ಮಾ, ಅಮೋಲ್ ಶಿಂಧೆ, ನೀಲಮ್ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಈ ಪೈಕಿ ನೀಲಮ್ ತಾಯಿ ನೀಡಿರುವ ಮಾಹಿತಿ ಪ್ರಕಾರ ನೀಲಮ್ ನಿರುದ್ಯೋಗದ ಬಗ್ಗೆ ಚಿಂತಿತಳಾಗಿದ್ದಳು. ಒಳ್ಳೆಯ ವಿದ್ಯಾಭ್ಯಾಸ ಪಡೆದರೂ ಕೆಲಸ ಸಿಗುತ್ತಿಲ್ಲ, ಇದಕ್ಕಿಂತ ಸಾಯುವುದೇ ಒಳ್ಳೆಯದು ಎಂದು ತನ್ನ ತಾಯಿಯ ಬಳಿ ನೀಲಮ್ ಹೇಳಿದ್ದಳಂತೆ. ಇನ್ನು ಹರಿಯಾಣದ ಜಿಂದ್ ಮೂಲದ ನೀಲಮ್ 30 ವರ್ಷ ವಯಸ್ಸಿನವಳಾಗಿದ್ದು ಬಿಎ, ಎಂಎ, ಬಿಎಡ್, ಎಂಎಡ್ ಹಾಗೂ ನೀಟ್ ಪದವಿಗಳನ್ನು ಹೊಂದಿದ್ದಾಳೆ. ಇದಾದ ಬಳಿಕ ಹಲವಾರು ದಿನಗಳ ಕಾಲ ನಿರುದ್ಯೋಗಿಯಾಗಿದ್ದ ನೀಲಮ್ ಹರಿಯಾಣ ನಾಗರೀಕ ಸೇವೆಗಳ ಪರೀಕ್ಷೆಗೂ ಸಹ ಸಿದ್ಧತೆಪಡಿಸಿಕೊಳ್ಳುತ್ತಿದ್ದಳಂತೆ.
ಈಕೆಯ ಕುರಿತು ಮಾತನಾಡಿರುವ ಕುಟುಂಬಸ್ಥರು ಈಕೆಗೆ ಯಾವುದೇ ಸಂಘಟನೆಗಳ ಜತೆ ಹಾಗೂ ಪಕ್ಷಗಳ ಜತೆ ನಂಟಿಲ್ಲ ಎಂದು ಹೇಳಿದ್ದು ಈ ಹಿಂದೆ 2020-2021ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಳು ಹಾಗೂ ಇದೇ ವರ್ಷ ನಡೆದಿದ್ದ ರೆಸ್ಲರ್ಸ್ ಪ್ರತಿಭಟನೆಯಲ್ಲಿಯೂ ಸಹ ಭಾಗವಹಿಸಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಎರಡೂ ಪ್ರತಿಭಟನೆಯಲ್ಲಿಯೂ ನೀಲಮ್ ಬಂಧನಕ್ಕೊಳಗಾಗಿದ್ದಳು.