Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಲಂಚ ಕೇಳಿದ ಪೊಲೀಸರ ಚಳಿ ಬಿಡಿಸಲು ಟವೆಲ್‌ ಸುತ್ತಿಕೊಂಡು ಠಾಣೆಗೆ ಬಂದ ವ್ಯಕ್ತಿ!

ರಾಯಪುರ : ಕಳ್ಳತನದ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದ ಮಗನನ್ನು ಬಿಡಿಸಿಕೊಂಡು ಬರಲು ತಂದೆ ಟವೆಲ್‌ ಕಟ್ಟಿಕೊಂಡು ಠಾಣೆಗೆ ಬಂದು, ನಡು ರಸ್ತೆಯಲ್ಲಿ ರಂಪಾಟ ನಡೆಸಿದ ವಿಚಿತ್ರ ಘಟನೆ ಛತ್ತೀಸ್‌ಗಢದ ಕೊರ್ಬಾದಲ್ಲಿ ನಡೆದಿದೆ. ವ್ಯಕ್ತಿಯ ಈ ವಿಚಿತ್ರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
ಕಳ್ಳತನ ಪ್ರಕರಣದಲ್ಲಿ 14 ವರ್ಷದ ಬಾಲಕನನ್ನು ವಶಕ್ಕೆ ಪಡೆದು ಪೊಲೀಸ್‌ ಠಾಣೆಯಲ್ಲಿ ಕೂಡಿಹಾಕಿದ್ದರು. ಇದರಿಂದ ರೊಚ್ಚಿಗೆದ್ದ ಬಾಲಕನ ತಂದೆ ರಾಜ್‌ ಕುಮಾರ್‌ ನೇತಮ್‌ ಬರೀ ಟವೆಲ್‌ ಕಟ್ಟಿಕೊಂಡು ಕಾರಿನಲ್ಲಿ ಠಾಣೆಗೆ ಬಂದರು. ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ, ಠಾಣೆಗೆ ನಡೆದುಕೊಂಡು ಹೋಗುತ್ತಿದ್ದರು. ನೋಡ ನೋಡುತ್ತಿದ್ದಂತೆಯೇ ಜನರು ಜಮಾಯಿಸಿದರು.
ರಾಜ್‌ ಕುಮಾರ್‌ ನೇತಮ್‌ ಟವೆಲ್‌ ಕಟ್ಟಿಕೊಂಡು ಬರುತ್ತಿದ್ದನ್ನು ಕಂಡು ಮುಜುಗರಕ್ಕೊಳಗಾದ ಸಿಎಸ್‌ಇಬಿ ಪೊಲೀಸ್‌ ಠಾಣಾಧಿಕಾರಿಗಳು, ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಮಗನನ್ನು ಬಿಡುಗಡೆ ಮಾಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಅವರು, ”ತಮ್ಮ ಮಗ ಅಪ್ರಾಪ್ತ ವಯಸ್ಸಿನವರಾಗಿದ್ದರೂ ವಶಕ್ಕೆ ಪಡೆದು ಠಾಣೆಯಲ್ಲಿ ಕೂಡಿ ಹಾಕಲಾಗಿದೆ. ಅಲ್ಲದೇ ಬಿಡುಗಡೆಗೆ ಪೊಲೀಸ್‌ ಅಧಿಕಾರಿಗಳು 30 ಸಾವಿರ ರೂ. ಲಂಚ ಕೇಳಿದ್ದರು. ಹಣ ತರುವವರೆಗೂ ಮಗನನ್ನು ಥಳಿಸುತ್ತಲೇ ಇರುತ್ತೇವೆ ಎಂದು ದೂರವಾಣಿಯಲ್ಲಿ ಬೆದರಿಕೆ ಹಾಕಿದ್ದರು,” ಎಂದು ಆರೋಪಿಸಿ ಗಲಾಟೆ ನಡೆಸಿದರು.
ಮಗ ವಾಪಸ್ ಮನೆಗೆ ಬರಬೇಕು ಎಂದರೆ, ಆದಷ್ಟು ಬೇಗನೇ ಹಣ ಹೊಂದಿಸಿ ಠಾಣೆಗೆ ತಂದು ಕೊಡಬೇಕು ಎಂದು ಪೊಲೀಸರು ಒತ್ತಾಯಿಸಿದ್ದಾರೆ. ಆತ ಇನ್ನೂ ಚಿಕ್ಕ ಹುಡುಗ ಹೀಗಿರುವಾಗ ಅಕ್ರಮವಾಗಿ ಬಂಧಿಸಿ, ಥಳಿಸುತ್ತಿದ್ದಾರೆ ಎಂದು ರಾಜ್ ಕುಮಾರ್ ಅವರು ಆರೋಪಿಸಿದರು.
ಏಪ್ರಿಲ್ 2ರ ಭಾನುವಾರ ಈ ಘಟನೆ ನಡೆದಿದೆ. ಆದರೆ ಪಟ್ಟಣ ಇನ್‌ಸ್ಪೆಕ್ಟರ್ ವಿವೇಕ್ ಶರ್ಮಾ ಅವರು ನೀಡಿರುವ ಹೇಳಿಕೆ ತದ್ವಿರುದ್ಧವಾಗಿದೆ. ಕಳವು ಪ್ರಕರಣದಲ್ಲಿ ಭಾಗಿಯಾದ ಕೆಲವು ಹುಡುಗರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು. ಆದರೆ ರಾಜ್ ಕುಮಾರ್ ಅವರು ಮಾತನಾಡುತ್ತಿರುವ ಹುಡುಗ ಅವರಲ್ಲಿ ಸೇರಿಲ್ಲ. ರಸ್ತೆಯ ಮಧ್ಯದಲ್ಲಿ ನಿಂತು ಗದ್ದಲ ಸೃಷ್ಟಿಸುವ ಬದಲು ಅವರು ನೇರವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡಲಿ ಎಂದು ಮಾಧ್ಯಮಗಳ ಮುಂದೆ ವಿವೇಕ್ ಶರ್ಮಾ ಹೇಳಿದ್ದಾರೆ. ಈ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ