ಭೋಪಾಲ್ : ಮೇಲ್ಜಾತಿ ವ್ಯಕ್ತಿಯೊಬ್ಬ ದಲಿತ ವ್ಯಕ್ತಿಯ ಮುಖ ಹಾಗೂ ದೇಹಕ್ಕೆ ಮಲ ಮೆತ್ತಿಸಿ ವಿಕೃತಿ ಮೆರೆದ ಆರೋಪವೊಂದು ಮಧ್ಯಪ್ರದೇಶದ ಛತ್ತರ್‍ಪುರ ಜಿಲ್ಲೆಯಲ್ಲಿ ಕೇಳಿಬಂದಿದೆ.
ಆರೋಪಿಯನ್ನು ರಾಮಕೃಪಾಲ್ ಪಟೇಲ್ ಹಾಗೂ ಸಂತ್ರಸ್ತನನ್ನು ದಶರತ್ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಡೆದಿದ್ದೇನು : ಶುಕ್ರವಾರ ಛತ್ತರ್‍ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ಪಂಚಾಯತ್‍ಗೆ ಚರಂಡಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಹಿರ್ವಾರ್ ಹೇಳಿದ್ದಾರೆ.
ಘಟನೆ ಸಂಬಂಧ ಮಹಾರಾಜಪುರ ಪೊಲೀಸ್ ಠಾಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಹಿರ್ವಾರ್, ರಾಮಕೃಪಾಲ್ ಪಟೇಲ್ ಸಮೀಪದ ಹ್ಯಾಂಡ್ ಪಂಪ್‍ನಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ನಿರ್ಮಾಣ ಕಾರ್ಯದಲ್ಲಿ ಬಳಸುತ್ತಿದ್ದ ಗ್ರೀಸ್ ಅನ್ನು ತಪ್ಪಿ ಅವರು ಸ್ಪರ್ಶಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪಟೇಲ್, ಮಲವನ್ನು ತಂದು ನನ್ನ ತಲೆ ಮತ್ತು ಮುಖ ಸೇರಿದಂತೆ ಮೈಮೇಲೆ ಬಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಪಟೇಲ್ ನನ್ನ ಜಾತಿಯನ್ನು ನಿಂದಿಸಿದ್ದಾರೆ. ಈ ವಿಚಾರವನ್ನು ಪಂಚಾಯತ್‍ನವರ ಗಮನಕ್ಕೆ ಶುಕ್ರವಾರವೇ ತಂದಿದ್ದೇನೆ. ಆದರೆ ಪಂಚಾಯತ್ ಸಿಬ್ಬಂದಿ ಕೂಡ ನನಗೆ 600 ರೂಪಾಯಿ ದಂಡವನ್ನು ವಿಧಿಸಿದ್ದಾರೆ ಎಂದು ಅಹಿರ್ವಾರ್ ಬೇಸರ ಹೊರಹಾಕಿದ್ದಾರೆ.
ಈ ಸಂಬಂಧ ಶುಕ್ರವಾರವೇ ಯಾಕೆ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ಪ್ರಶ್ನಿಸಿದಾಗ, ಕೆಲಸವನ್ನು ಮಧ್ಯದಲ್ಲಿ ಬಿಡಲು ಸಾಧ್ಯವಿಲ್ಲ. ಹೀಗಾಗಿ ದೂರು ನೀಡಲು ಆಗಿಲ್ಲ ಎಂದು ಅಹಿರ್ವಾರ್ ತಿಳಿಸಿದ್ದಾರೆ.
ಸದ್ಯ ಆರೋಪಿ ರಾಮಕೃಪಾಲ್ ಪಟೇಲ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಮನ್ಮೋಹನ್ ಸಿಂಗ್ ಬಘೇಲ್ ತಿಳಿಸಿದ್ದಾರೆ.
ಅಹಿರ್ವಾರ್ ಕೆಲಸ ಮಾಡುತ್ತಿದ್ದಾಗ ಸಮೀಪದಲ್ಲಿ ಸ್ನಾನ ಮಾಡುತ್ತಿದ್ದ ಪಟೇಲ್ ಅವರೊಂದಿಗೆ ತಮಾಷೆಯ ಮಾತುಗಳನ್ನಾಡುತ್ತಿದ್ದರು. ಪಟೇಲ್ ಅವರ ಕೈಗೆ ಗ್ರೀಸ್ ತಾಗಿದಾಗ ತಮಾಷೆಯಾಗಿ ಪರಸ್ಪರ ವಸ್ತುಗಳನ್ನು ಎಸೆದುಕೊಂಡರು. ನಂತರ ಪಟೇಲ್, ಮಲವನ್ನು ತಂದು ಅಹಿರ್ವಾರ್ ಅವರ ಬೆನ್ನಿನ ಮೇಲೆ ಎಸೆದರು ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಇತ್ತೀಚೆಗೆ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಭಾರೀ ಆಕ್ರೋಶಕ್ಕೆ ಕಾರಣವಾಯಿತು.