Mysore
19
overcast clouds
Light
Dark

ಹಿಮಾಚಲ, ಉತ್ತರಾಖಂಡದಲ್ಲಿ ವರುಣನ ಆರ್ಭಟಕ್ಕೆ 54 ಮಂದಿ ಸಾವು

ನವದೆಹಲಿ : ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈವರೆಗೂ 54 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶ ಒಂದರಲ್ಲಿ 51 ಜನ ಸಾವನ್ನಪ್ಪಿದ್ದು, ಉತ್ತರಾಖಂಡದಲ್ಲಿ 3 ಜನ ಮೃತಪಟ್ಟಿದ್ದಾರೆ.

ಶಿಮ್ಲಾದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೂ ಕುಸಿತದಲ್ಲಿ ಈವರೆಗೂ 14 ಶವಗಳನ್ನು ಹೊರತೆಗೆಯಲಾಗಿದೆ. ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯದ ಅವಶೇಷಗಳ ಅಡಿಯಲ್ಲಿ ಇನ್ನೂ ಹೆಚ್ಚಿನ ಜನರು ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮಂಡಿ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಸೋಲನ್ ಜಿಲ್ಲೆಯಲ್ಲಿ ಒಂದು ಕುಟುಂಬದ ಏಳು ಸದಸ್ಯರು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಕುಲು, ಕಿನ್ನೌರ್, ಲಾಹೌಲ್ ಮತ್ತು ಸ್ಪಿತಿ ಹೊರತುಪಡಿಸಿ ರಾಜ್ಯದ 12 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ತಿಳಿಸಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆಯ ಶಿಮ್ಲಾ-ಕಲ್ಕಾ ರೈಲು ಮಾರ್ಗವು ಶಿಮ್ಲಾದ ಸಮ್ಮರ್ ಹಿಲ್ ಬಳಿ 50 ಮೀಟರ್ ಸೇತುವೆ, ಭೂಕುಸಿತದಿಂದ ಹಾನಿಗೊಳಗಾಗಿದೆ. ಟ್ರ್ಯಾಕ್‍ನ ಒಂದು ಭಾಗ ನೇತಾಡುತ್ತಿದೆ. ಈ ಭಾಗದಲ್ಲಿ ಸೇನೆ, ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್, ಐಟಿಬಿಪಿ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ