ನವದೆಹಲಿ: 1984 ರ ಸಿಖ್ ವಿರೋಧಿ ದಂಗೆ ವೇಳೆ ವ್ಯಕ್ತಿಯೊಬ್ಬನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಬುಧವಾರ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು, ಇತರ ಇಬ್ಬರು ಆರೋಪಿಗಳಾದ ವೇದ್ ಪ್ರಕಾಶ್ ಪಿಯಾಲ್ ಮತ್ತು ಬ್ರಹ್ಮಾನಂದ್ ಗುಪ್ತಾ ಅವರನ್ನು ಸಹ ಖುಲಾಸೆಗೊಳಿಸಿದ್ದು, ಮಾಜಿ ಕಾಂಗ್ರೆಸ್ ನಾಯಕ ಸೇರಿದಂತೆ ಮೂವರ ವಿರುದ್ಧದ ಕೊಲೆ ಮತ್ತು ಗಲಭೆ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ.
ಸುಲ್ತಾನ್‌ಪುರಿಯಲ್ಲಿ ನಡೆದ ಘಟನೆಯಲ್ಲಿ ಸಿಖ್ ವ್ಯಕ್ತಿ ಸುರ್ಜಿತ್ ಸಿಂಗ್ ಮೃತಪಟ್ಟಿದ್ದರು.
ಆರೋಪಿ ಸಜ್ಜನ್ ಕುಮಾರ್‌ಗೆ ಕೇವಲ ಅನುಮಾನದ ಮೇಲೆ ಶಿಕ್ಷ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕೋರ್ಟ್ ಖುಲಾಸೆಗೊಳಿಸಿದೆ.
ಅಕ್ಟೋಬರ್ 31, 1984 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ನಂತರ ಗಲಭೆಗಳು ಭುಗಿಲೆದ್ದವು.
ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ ಕುಮಾರ್ ಅವರು ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.