ಟೆಲ್ ಅವಿವ್ : ಹಮಾಸ್ ಉಗ್ರರು ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ಆಕ್ರಮಣ ನಡೆಸಿ ಇಲ್ಲಿಗೆ 3 ದಿನ ಕಳೆದಿದೆ. ಇದರ ಬೆನ್ನಲ್ಲೇ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿದೆ. ಈ 3 ದಿನಗಳ ಸಂಘರ್ಷದಲ್ಲಿ ಎರಡೂ ಕಡೆಗಳಿಂದ ಬರೋಬ್ಬರಿ 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ. ಹಮಾಸ್ ಆಕ್ರಮಣದ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಾಗೂ ಉಗ್ರಗಾಮಿ ಗುಂಪುಗಳ ಅಡಗುತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಭಾನುವಾರ ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಇದರಲ್ಲಿ 413 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಹಮಾಸ್ ದಾಳಿಗೆ ಒಳಗಾದ ಸಂಗೀತ ಉತ್ಸವದ ಪ್ರದೇಶದಿಂದ ಸುಮಾರು 260 ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ರಕ್ಷಣಾ ಸೇವೆ ಝಾಕಾ ತಿಳಿಸಿದೆ.





