ಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಭಾರೀ ಗಟ್ಟಿಯಾಗಿದ್ದು, ಅದೃಷ್ಟ ಒಲಿದು ಬಂದಾಗ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಈಗ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಇದ್ದಾರೆ. 138 ಸ್ಥಾನದಿಂದ ಕಾಂಗ್ರೆಸ್ ಸುಭದ್ರವಾಗಿದೆ. ಅದೃಷ್ಟ ಒಲಿದು ಬಂದಾಗ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ. 1996 ರಿಂದ 2004ರವರೆಗೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಅನ್ಕೊಂಡು ಬಂದ್ರು ಅದು ಆಗಲಿಲ್ಲ. ಈಗ ಡಿ.ಕೆ.ಶಿವಕುಮಾರ್ ನಡೆ ಬಗ್ಗೆ ನನಗೆ ಗೊತ್ತಿಲ್ಲ. ಆ ರಾಜಕೀಯದ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರ ಬಗ್ಗೆ ಡಿಕೆಶಿ ಜೊತೆಗೂ ಕೂಡ ನಾನು ಮಾತನಾಡಿಲ್ಲ ಎಂದರು,
ಇನ್ನು ಮಾರ್ಚ್.7ರಂದು ರಾಜ್ಯ ಬಜಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ಇಲಾಖೆಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ಮಾಡ್ತಿದೀನಿ. ಕುಡಿಯುವ ನೀರು, ನಗರಾಭಿವೃದ್ದಿ ಪ್ರಾಧಿಕಾರ ಸ್ಥಳೀಯ ಪಂಚಾಯತಿಗಳಿಗೆ ವರ್ಗಾವಣೆ ಆಗಿದೆ. ಆದ್ರೆ ಸ್ಥಳೀಯ ಆಡಳಿತದಲ್ಲಿ ಹಣವಿಲ್ಲ. ಹೀಗಾಗಿ ಈ ವಿಚಾರವನ್ನು ಸಿಎಂ ಗಮನಕ್ಕೆ ತರುತ್ತೇನೆ. ಅದಕ್ಕೂ ಮುನ್ನ ಸಭೆ ಮಾಡುತ್ತಿದ್ದೇನೆ ಎಂದರು.
ಇನ್ನು ರಾಜ್ಯ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕಬಿನಿಯಿಂದ 120 ಎಂ.ಎಲ್.ಡಿ ನೀರು ತರಬೇಕು. ಇದಕ್ಕೆ ಬಜೆಟ್‌ನಲ್ಲಿ ಹಣ ಕೇಳಿದ್ದೇವೆ. ನನ್ನ ಕ್ಷೇತ್ರದ ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ ಎಲ್ಲವನ್ನೂ ಸರಿ ಮಾಡಬೇಕು. ಪಟ್ಟಣ ಪಂಚಾಯತ್‌ಗಳನ್ನು ಸೇರಿಸಿ ಗ್ರೇಟರ್ ಮೈಸೂರು ಮಾಡಿ ಎಂದು ಹೇಳಿದ್ದೇನೆ. ಬಜೆಟ್‌ನಲ್ಲಿ ಇದನ್ನು ಸೇರಿಸಿ ಎಂದು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.