Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸ್ನಾತಕೋತ್ತರ ಕನಸಿನಲ್ಲಿ ಹೋಂ ಗಾರ್ಡ್ ರೂಪಾ

• ಕೀರ್ತಿ ಎಸ್.ಬೈಂದೂರು

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯ ಆದೇಶವೊಂದನ್ನು ಹೊರಡಿಸಿತ್ತು. ವರ್ಷಗಳ ಹಿಂದೆ ಪಾಸಾಗದೆ ಬಾಕಿ ಉಳಿಸಿಕೊಂಡಿರುವ ವಿಷಯಗಳನ್ನು ಮರುಪರೀಕ್ಷೆಯಲ್ಲಿ ಬರೆದು ಪಾಸ್ ಮಾಡಿಕೊಳ್ಳುವ ಆದೇಶ. ಅದನ್ನು ತಿಳಿಯುತ್ತಿದ್ದಂತೆ ಯಾರಿಗೆಷ್ಟು ಸಂತಸವಾಯೊ, ಇವರಿಗೆ ಮಾತ್ರ ಸಂಭ್ರಮ. ಇವರು ಯಾರೆಂದರೆ ಬೆಳಗಾದರೆ ಗೃಹರಕ್ಷಕ ದಳದಲ್ಲಿ ಕಾರ್ಯನಿರ್ವಹಿಸಿ, ಸಂಜೆಯ ಹೊತ್ತಿಗೆ ಉದ್ಯೋಗಸ್ಥ ಮಹಿಳಾ ವಸತಿನಿಲಯದಲ್ಲಿ ರಾತ್ರಿ ಪಾಳಿಯ ಮೇಲ್ವಿಚಾರಕರಾಗಿ ದುಡಿಯುತ್ತಿರುವ ಡಿ.ಎಂ.ರೂಪಾ.

ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದರೂ, ಕಿರಿಯವರಾದ ರೂಪ ಎಂದರೆ ಮನೆ ಜನರಿಗೆಲ್ಲ ವಿಶೇಷ ಪ್ರೀತಿ. ಮನೆ ಜನರ ಮಾತಿಗೆ ಒಪ್ಪಿ, ಚಿಕ್ಕ ವಯಸ್ಸಿಗೆ ಮದುವೆಯಾದರು. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಮದುವೆಗೆ ಅನಿವಾರ್ಯವಾಗಿ ಒಪ್ಪಲೇಬೇಕಾಯಿತು.

ಮದುವೆಯ ಬಳಿಕ ‘ನಾನು ಹತ್ತನೇ ತರಗತಿ ಪಾಸ್ ಆಗಿದ್ದೇನೆ, ಮತ್ತೆ ನಾನ್ಯಾಕೆ ಪಿಯುಸಿ ಓದಬಾರದು?? ಎಂದು ಕೆಲ ಕಾಲೇಜುಗಳಲ್ಲಿ ವಿಚಾರಿಸಿದರು. ವಯಸ್ಸಾಗಿದೆ ಎಂಬ ಕಾರಣವೊಡ್ಡಿ ಪ್ರಾಂಶುಪಾಲರು ದಾಖಲಾತಿ ನೀಡಲು ಒಪ್ಪಲಿಲ್ಲ. ಸಂಬಂಧಿಕರೊಬ್ಬರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು, ಪ್ರವೇಶಾತಿ ಪಡೆಯಲು ಸಹಾಯ ಮಾಡಿದರು. ಆಶ್ಚರ್ಯ ಎನಿಸಬಹುದು; ಮೊದಲ ಮಗಳು ಒಂದನೇ ತರಗತಿಗೆ ದಾಖಲಾಗಿದ್ದರೆ, ಇವರು ಹನ್ನೊಂದನೇ ತರಗತಿಗೆ!

ಸೈಕಲ್ಲಿನಲ್ಲಿ ಮಗಳನ್ನು ಶಾಲೆಗೆ ಬಿಟ್ಟು, ನಂತರ ಇವರು ತರಗತಿಗೆ ಹೋಗುತ್ತಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯ ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ರೂಪಾ ಅವರು ಪಾಸ್ ಆಗಿರಲಿಲ್ಲ. ಇವರಿಗಂತೂ ಬದುಕನ್ನು ಮುಂದುವರಿಸಲು ಹಿಡಿದಿದ್ದ ಶಿಕ್ಷಣದ ದಾರಿಯಲ್ಲಿ ಎಡವಿಬಿದ್ದೆನಲ್ಲಾ ಅನಿಸಿತು. ಆದರೆ, ಅಧ್ಯಾಪಕರಾದ ಶಶಿಕಲಾ ಮತ್ತು ಮರಿಯಾ ಜಾಯಿಸ್ ಅವರು ಮರುಪರೀಕ್ಷೆ ಕಟ್ಟುವಂತೆ ಆತ್ಮವಿಶ್ವಾಸ ತುಂಬಿದರು. ಅರ್ಥಶಾಸ್ತ್ರ ವಿಷಯದಲ್ಲಿ ಪಾಸ್ ಆದರೂ ಇಂಗ್ಲಿಷ್ ವಿಷಯದಲ್ಲಿ ಮತ್ತೆ ಅನುತ್ತೀರ್ಣರಾದರು. ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಹೊಣೆಗಾರಿಕೆಯನ್ನು ನಿಭಾಯಿಸುವ ಸಲುವಾಗಿ ಸ್ವಾಭಿಮಾನದಿಂದ ಬದುಕಬೇಕೆಂಬ ಉದ್ದೇಶದಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು.

2009-10ರ ಪಿಯುಸಿ ಮರುಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮಹಾರಾಣಿ ಕಲಾ ಕಾಲೇಜಿನಲ್ಲಿ ಪದವಿಗೆ ದಾಖಲಾದರು. ತನ್ನ ಓದಿಗೆ, ಮಕ್ಕಳು, ಮನೆ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವುದಕ್ಕೆ ಇವರಿಗೆ ನೆರವಾಗಿದ್ದು, ವಸತಿ ನಿಲಯದ ರಾತ್ರಿ ಪಾಳಿಯ ಮೇಲ್ವಿಚಾರಕರ ಉದ್ಯೋಗ, ಈ ಉದ್ಯೋಗಕ್ಕೆ ಸೇರಿ 15 ವರ್ಷಗಳಾಗಿವೆ.

ಒಂದು ದಿನ ಬೆಳಿಗ್ಗೆ ಪತ್ರಿಕೆ ಓದುತ್ತಿದ್ದಾಗ, ಗೃಹರಕ್ಷಕ ದಳಕ್ಕೆ ಹೊಸ ಸಿಬ್ಬಂದಿಗಳ ನೇಮಕಾತಿಗೆ ನೀಡಿದ ಜಾಹೀರಾತನ್ನು ಗಮನಿಸಿ, ಅರ್ಜಿ ಹಾಕಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕೆಲಸವೂ ಸಿಕ್ಕಿತೆನ್ನಿ. 11 ವರ್ಷಗಳಿಂದ ಮನೆಗೆ ಹಣಕಾಸಿನ ವ್ಯವಹಾರಕ್ಕೆ ಆಧಾರ ನೀಡಿದ ಈ ಉದ್ಯೋಗದ ಬಗ್ಗೆ ಇವರಿಗೆ ಎಲ್ಲಿಲ್ಲದ ಹೆಮ್ಮೆ.

ಬದುಕನ್ನು ಸವಾಲಾಗಿ ಸ್ವೀಕರಿಸಬೇಕು ಎಂಬುದು ಬರೀ ಬಾಯಿಮಾತಿನ ಉಪದೇಶವಾಗದೆ, ಅವರ ಬದುಕಿನ ಸಿದ್ಧಾಂತವೂ ಆಗಿದೆ. ‘ಜೀವನವೇ ಹೋರಾಟ. ಹಿಂದೆ ಏನಾದ್ರೂ ಆಗಿರ್ಲಿ, ಈಗಿನ ಬದುಕನ್ನು ಅನುಭವಿಸ್ಟೇಕು’ ಎನ್ನುವ ಯೋಚನೆ ಇವರದ್ದು.

ಇವತ್ತಿಗೂ ಅಷ್ಟೆ, ಬದುಕು ನೀಡಿದ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಎಷ್ಟೋ ಹಾಡುಗಳ ಸಾಲುಗಳು ಇವರ ದನಿಯಲ್ಲಿ ಆಗಾಗ ಗುನುಗುತ್ತಲೇ ಇರುತ್ತವೆ. ಅಂದ ಹಾಗೆ, ಇವರು ಪದವಿಯಲ್ಲಿ ಪಾಸಾಗದೆ ಉಳಿದಿದ್ದ, ಇಂಗ್ಲಿಷ್ ಪರೀಕ್ಷೆಗೆ ಪದವಿ ಓದುತ್ತಿರುವ ಎರಡನೇ ಮಗಳೊಂದಿಗೆ ತಯಾರಾಗುತ್ತಿದ್ದಾರೆ ಸ್ನಾತಕೋತ್ತರ ಅಧ್ಯಯನದ ಕನಸಿನೊಂದಿಗೆ

keerthisba2018@gmail.com

Tags: