ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಈಗಾಗಲೇ ಉಚಿತ ವೈಫೈ ಸೌಲಭ್ಯ ಒದಗಿಸುತ್ತಿರುವ ಭಾರತ ಸರ್ಕಾರ, ಈಗ ಅದನ್ನು ಇನ್ನಷ್ಟು ವೇಗಗೊಳಿಸುವ ಮೂಲಕ ದೇಶದ ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.
ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಿರುವ ಉಚಿತ ವೈಫೈಗೆ ಸಂಪರ್ಕ ಸಾಧಿಸುವ ಮೂಲಕ ಹೈ ಸ್ಪೀಡ್ ಇಂಟರ್‌ನೆಟ್ ಪಡೆಯಬಹುದು. ಈ ವೈಫೈ ಬಳಸಿ ಪ್ರಯಾಣಿಕರು ತಮಗೆಬೇಕಾದ ಎಲ್ಲಾ ಚಲನಚಿತ್ರಗಳು, ಗೇಮ್ಸ್, ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕ್ರಿಕೆಟ್ ಪಂದ್ಯವನ್ನು ಕೂಡ ಆನ್ ಲೈನ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.
ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಬಹಿರಂಗಪಡಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಇನ್ನು ಮುಂದೆ ದೇಶಾದ್ಯಂತ ಸುಮಾರು ೬,೧೧೫ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅತ್ಯಂತ ವೇಗದ ಹೈಸ್ಪೀಡ್ ವೈಫೈ ಸೌಲಭ್ಯ ದೊರೆಯಲಿದೆ ಎಂದು ಹೇಳಿದ್ದಾರೆ.
ಉಚಿತ ವೈಫೈ ಪಡೆಯುವುದು ಹೇಗೆ: ಮೊದಲು ನಿಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ವೈಫೈ ಮೋಡ್ ಅನ್ನು ಆನ್ ಮಾಡಿ, ನೀವು ವೈಫೈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ನಿಮಗೆ ರೈಲ್‌ವೈರ್ ವೈಫೈ ನೆಟ್‌ವರ್ಕ್ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಿ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಲು ಕೇಳುತ್ತದೆ.
ಅಲ್ಲಿ ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿದಾಗ ನಿಮ್ಮ ಮೊಬೈಲ್ಗೆ ಬರುವ ಒಟಿಪಿಯ ಆರು ಅಂಕಿಗಳನ್ನು ನಮೂದಿಸಿದ ಕೂಡಲೇ ನೀವು ಹೈಸ್ಪೀಡ್ ಉಚಿತ ವೈಫೈಗೆ ಸಂಪರ್ಕ ಸಾಧ್ಯವಾಗುತ್ತದೆ.





