ಸಿ.ಆರ್.ಪ್ರಸನ್ನ ಕುಮಾರ್
ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಅದು ಪರೀಕ್ಷೆಗಳ ತಿಂಗಳು ಎಂಬುದು ಎಲ್ಲರಿಗೂ ಅರ್ಥವಾಗಿ ಬಿಡುತ್ತದೆ. ಈ ತಿಂಗಳಿನಲ್ಲಿ ಮುಖ್ಯವಾಗಿ ಎಸ್‌ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯುವುದರಿಂದ ವಿದ್ಯಾರ್ಥಿಗಳ ಮುಖದಲ್ಲಿ ಆತಂಕ, ಪರೀಕ್ಷೆಯ ಭಯ ತುಂಬಿರುತ್ತದೆ.
ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಅಂಜದೆ ಧೈರ್ಯವಾಗಿ ಎದುರಿಸುತ್ತೇವೆ ಎಂದುಕೊಂಡರೆ ಸವಾಲಿನ ಮೊದಲ
ಮೆಟ್ಟಿಲು ಹತ್ತಿದಂತೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಮಾರ್ಚ್ ̄24 ರಿಂದ ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭಗೊಳ್ಳಲಿವೆ. ಈ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ತಯಾರಾಗಬೇಕು.
ಓದುವುದು ಹೇಗೆ?
ಎಲ್ಲ ವಿಷಯಗಳಲ್ಲಿಯೂ ಪರಿಣತರಾಗಿ ಪರೀಕ್ಷೆ ಬರೆಯಲು ಎಲ್ಲ ವಿದ್ಯಾರ್ಥಿಗಳಿಗೂ ಸಾಧ್ಯವಾಗುವುದಿಲ್ಲ.
ಕೆಲವರಿಗೆ ಕೆಲವು ವಿಷಯ ಕಷ್ಟವಾಗಬಹುದು. ಕಷ್ಟವಾದ ವಿಷಯಗಳನ್ನು ಮುಂಜಾನೆಯೇ ಎದ್ದು ಓದುವುದು ಒಳಿತು. ಅದರಲ್ಲಿಯೂ ಅವುಗಳನ್ನು ಬರೆದು ಅಭ್ಯಾಸ ಮಾಡುವುದು ಮತ್ತಷ್ಟು ಉತ್ತಮ. ವಿದ್ಯಾರ್ಥಿಗಳು ಕಷ್ಟದ ವಿಷಯಗಳಿಗೆ ಹೆಚ್ಚು ಸಮಯ ಮೀಸಲಿಡಬೇಕು. ಎಲ್ಲ ವಿಷಯಗಳಿಗೂ ಕೀ ಪಾಯಿಂಟ್ಸ್ ಮಾಡಿಟ್ಟುಕೊಂಡು ಪರೀಕ್ಷೆಯ ಸಮಯದಲ್ಲಿ ತಿರುವು ಹಾಕಿನೋಡಿದರೆ ಸಾಕು. ವಿಷಯ ಬಹುಬೇಗ ತಲೆಗೆ ಹೋಗುವ ಜತೆಗೆ ನೆನಪಿನಲ್ಲಿ ಉಳಿಯುತ್ತದೆ. ಈ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಆತಂಕ ಬೇಡ
ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗುತ್ತದೆ. ಆದರೆ ಇದು ಆತಂಕಪಡುವ ಸಮಯವಲ್ಲ. ಜೀವನದ ಗುರಿ ಸಾಧಿಸುವ ಸಮಯ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟ. ಆದ್ದರಿಂದ ಈ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಬೇಕು. ಯಾವುದಾದರೂ ವಿಷಯ ಕಷ್ಟವಾಗುತ್ತಿದರೆ ಆತಂಕದಿಂದ ಕುಳಿತುಕೊಳ್ಳುವ ಬದಲು ಸಂಬಂಧಪಟ್ಟ
ಶಿಕ್ಷಕರು ಅಥವಾ ಹಿರಿಯ ವಿದ್ಯಾರ್ಥಿಗಳ ಬಳಿ ಕೇಳಿ ಮಾಹಿತಿಗಳನ್ನು ಪಡೆದುಕೊಂಡು ಪರೀಕ್ಷೆಗೆ
ತಯಾರಾಗಬೇಕು. ಬರೆದು ಅಭ್ಯಾಸ ಮಾಡುವುದು ಉತ್ತಮ. ಪೋಷಕರೂ ಮಕ್ಕಳಿಗೆ ಪ್ರೋತ್ಸಾಹ ತುಂಬಬೇಕು. ಅವರ ಓದಲು ಹೆಚ್ಚು ಸಮಯ ನೀಡಿ, ಮನೆಯಲ್ಲಿ ಟಿವಿಗಳನ್ನು ಪರೀಕ್ಷೆ ಮುಗಿಯುವವರೆಗೂ ಬಂದ್ ಮಾಡಬೇಕು.
ಸಮಯ ನಿರ್ವಹಣೆ ಮುಖ್ಯ
ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಿಗೆ ಹೆಚ್ಚು ಆತಂಕ ಸೃಷ್ಟಿಸುವುದು ಸಮಯ. ಪರೀಕ್ಷೆಗೆ ನೀಡಿದ ನಿಗದಿತ
ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದು ಹೇಗೆ? ಪರೀಕ್ಷೆ ಆರಂಭಕ್ಕಿಂತ 10 ನಿಮಿಷಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಈ ವೇಳೆ ಸಮಾಧಾನದಿಂದ ಪ್ರಶ್ನೆ ಪತ್ರಿಕೆಯನ್ನು ಓದಬೇಕು. ಕೊಟ್ಟಿರುವ ಪ್ರಶ್ನೆಗಳನ್ನು ಮನವರಿಕೆ ಮಾಡಿಕೊಂಡು, ನಂತರ ಬರೆಯಲು ಆರಂಭಿಸಬೇಕು. ಯಾವ ಪ್ರಶ್ನೆಗೆ ತುಂಬ ಚೆನ್ನಾಗಿ ಉತ್ತರ ನೆನಪಾಗುತ್ತದೆಯೋ ಆ ಪ್ರಶ್ನೆಗಳಿಗೆ ಮೊದಲು
ಉತ್ತರಿಸಬೇಕು. ನೆನಪಾಗದ ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರಿಸಬೇಕು. ಆಗ ಸಮಯವನ್ನು ಸರಿದೂಗಿಸಿಕೊಂಡು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬಹುದು.
ಪರೀಕ್ಷೆ ಎಂದಾಗ ಆತಂಕ ಉಂಟಾಗಿ ಕೆಲ ಬಾರಿ ಗೊತ್ತಿರುವ ಉತ್ತರವೂ ಮರೆತುಹೋಗಿಬಿಡಬಹುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒಂದೆರಡು ನಿಮಿಷ ದೀರ್ಘವಾಗಿ ಉಸಿರಾಡುತ್ತಾ ಮನಸ್ಸನ್ನು ರಿಲಾಕ್ಸ್ ಮಾಡಿಕೊಳ್ಳಬೇಕು. ಕುಡಿಯುವ ನೀರನ್ನು ಮನೆಯಿಂದಲೇ ತೆಗೆದುಕೊಂಡು ಹೋಗುವುದು ಉತ್ತಮ.
ನೀರು ಕುಡಿದು ಸ್ಪಲ್ಪ ರಿಲಾಕ್ಸ್ ಮಾಡಿದರೆ ಆತಂಕ ದೂರಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಆತ್ಮ ವಿಶ್ವಾಸ
ಬೆಳೆಸಿಕೊಳ್ಳುವುದು ಮುಖ್ಯ.
ಕೊನೆಯದಾಗಿ ಪರೀಕ್ಷೆಯಲ್ಲಿ ಕೆಲವರು ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಾರೆ.
ಕೆಲವರು ಕಡಿಮೆ ಅಂಕಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡ
ಕಾರಣಕ್ಕಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ.
ಇದು ಸರಿಯಲ್ಲ. ಯಾರೇ ಆದರೂ ಗೆದ್ದಾಗ ಹಿಗ್ಗಬಾರದು ಸೋತಾಗ ಕುಗ್ಗಬಾರದು. ಫಲಿತಾಂಶ ಏನೇ ಬಂದರೂ ಅದನ್ನು ಸವಾಲಾಗಿ ಸ್ವೀಕರಿಸಬೇಕು. ‘ಓದಿದವನಿಗೆ ಒಂದು ಉದ್ಯೋಗವಾದರೆ ಓದದವನಿಗೆ ನೂರಾರು ಉದ್ಯೋಗ’ ಎಂಬ ಮಾತಿನಂತೆ ಬಂದ ಫಲಿತಾಂಶವನ್ನು ಧೈರ್ಯವಾಗಿ ಸ್ವೀಕರಿಸಿ ಬದುಕಿನಲ್ಲಿ ಛಲ ಬಿಡದೆ ಮುಂದೆ ಸಾಗಬೇಕು.
(ಲೇಖಕರು ಎಚ್.ಡಿ.ಕೋಟೆ ತಾಲ್ಲೂಕಿನ ತುಂಬಸೋಗೆ
ಗ್ರಾಮದ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ
ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದಾರೆ.)