Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯೋಗ ಕ್ಷೇಮ : ಪೌಷ್ಠಿಕ ಆಹಾರದ ಕಡೆಗಿರಲಿ ಚಿತ್ತ

ಅ. 16 ವಿಶ್ವ ಆಹಾರ ದಿನ; ‘ಯಾರನ್ನೂ ಹಿಂದೆ ಬಿಡಬೇಡಿ’ ಈ ವರ್ಷದ ಥೀಮ್

1945ರ ಅ.೧೬ರಂದು ವಿಶ್ವಸಂಸ್ಥೆಯು ಅಮೆರಿಕಾದಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಪ್ರಾರಂಭಿಸಿತು. ಜಾಗತಿಕವಾಗಿ ಆಹಾರ ಮತ್ತು ಕೃಷಿಯ ಸಕಾರಾತ್ಮಕ ಬೆಳವಣಿಗೆ, ಆಹಾರ ಕೊರತೆ ನೀಗಿಸುವುದು, ಎಲ್ಲರಿಗೂ ಪೌಷ್ಠಕಾಂಶಯುಕ್ತ ಆಹಾರ ದೊರೆಯಬೇಕು ಎನ್ನುವ ಸದಾಶಯದಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ನೆನಪಿನಲ್ಲಿ ಪ್ರತಿ ವರ್ಷವೂ ಅ.೧೬ರನ್ನು ಅಂತಾರಾಷ್ಟ್ರೀಯ ಆಹಾರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ‘ಯಾರನ್ನೂ ಹಿಂದೆ ಬಿಡಬೇಡಿ’ ಎನ್ನುವುದು ಈ ವರ್ಷದ ವಿಶ್ವ ಆಹಾರ ದಿನದ ಥೀಮ್.

ಇಂದು ಕೆಲವು ದೇಶಗಳಲ್ಲಿ ಆಹಾರದ ಕೊರತೆ ಕಂಡುಬರುತ್ತಿರುವುದು ನಿಜ. ಆದರೆ ಹಲವಾರು ದೇಶಗಳಲ್ಲಿ ಕಳಪೆ, ರಾಸಾಯನಿಕಯುಕ್ತ ಆಹಾರದ್ದೇ ಸಮಸ್ಯೆ. ಭಾರತದಂತಹ ದೇಶಗಳಲ್ಲಿ ಇಂದು ಗುಣಮಟ್ಟ ರಹಿತ, ರಾಸಾಯನಿಕಯುಕ್ತ, ಆರೋಗ್ಯಕ್ಕೆ ಪೂರಕವಲ್ಲದ ಆಹಾರಗಳ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲದೇ ೨೦೨೧ರ ಜಾಗತಿಕ ಹಸಿವು ಸೂಚ್ಯಾಂಕದಲ್ಲಿ ಭಾರತ ೧೦೧ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಆಹಾರ ಪದಾರ್ಥಗಳ ವ್ಯರ್ಥವಾಗದಂತೆ ನೋಡಿಕೊಳ್ಳುವುದು, ಎಲ್ಲರಿಗೂ ಆಹಾರ ಭದ್ರತೆ ಒದಗಿಸುವುದು ಇಂದಿನ ತುರ್ತು.

ಆಹಾರ ಪದಾರ್ಥಗಳ ಸಮರ್ಥ ಬಳಕೆ ಹೇಗೆ?

* ಇಂದು ಸಭೆ, ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದ ಆಹಾರ ವ್ಯರ್ಥವಾಗುತ್ತಿರುವುದು ಸಾಮಾನ್ಯವಾಗಿದೆ. ಉಳಿದ ಆಹಾರವನ್ನು ಹಸಿದವರಿಗೆ ನೀಡಲು ಕೆಲವಾರು ಎನ್‌ಜಿಒಗಳು, ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಅವುಗಳೊಂದಿಗೆ ನಾಗರಿಕ ಸಮಾಜ ಕೈಜೋಡಿಸಬೇಕಿದೆ.

* ಕೊಳ್ಳುವಾಗಲೇ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೊಳ್ಳುವುದು, ಅವುಗಳು ಕೆಡದಂತೆ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡುವುದು.

* ಪ್ಯಾಕೇಜಿಂಗ್ ಉತ್ಪನ್ನಗಳನ್ನು ಕೊಳ್ಳುವಾಗ ಅದರ ಉತ್ಪಾದನಾ ದಿನಾಂಕ, ಬಳಸಿರುವ ಪದಾರ್ಥಗಳು, ಕಡೆಯ ಬಳಕೆಯ ದಿನಾಂಕ ಇವುಗಳನ್ನೆಲ್ಲಾ ಗಮನಿಸಿ ಕೊಳ್ಳುವುದು.

* ಮನೆಯಲ್ಲಿ ನಿತ್ಯಕ್ಕೆ ಎಷ್ಟು ಬೇಕೋ ಅಷ್ಟು ಆಹಾರವನ್ನು ತಯಾರು ಮಾಡಿಕೊಳ್ಳುವ ಅಭ್ಯಾಸ ಉತ್ತಮ. ಇಲ್ಲದೇ ಇದ್ದರೆ ಆಹಾರವೂ ನಷ್ಟ, ಜೇಬಿಗೂ ಹೊರೆ.

* ಆಹಾರ ಪದಾರ್ಥಗಳಾದ ತರಕಾರಿ, ಹಣ್ಣು, ಸೊಪ್ಪುಗಳನ್ನು ನಿಮ್ಮ ಮನೆಯ ಟೆರೆಸ್, ಅಕ್ಕ ಪಕ್ಕದಲ್ಲಿ ಅವಕಾಶ ಇರುವ ಕಡೆ ಬೆಳೆದುಕೊಳ್ಳುವುದು ಉತ್ತಮ. ಇದರಿಂದ ಆಹಾರ ಕೊರತೆ ನೀಗಿಸಿದಂತೆ ಆಗುತ್ತದೆ.

ಉತ್ತಮ ಆಹಾರ ಪದ್ಧತಿ ರೂಢಿ

* ಹಿಂದಿಗಿಂತಲೂ ಈಗ ಉತ್ತಮ ಆಹಾರ ಸೇವನೆಯ ರೂಢಿ ಜರೂರಾಗಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಚಾಕಲೇಟ್, ಜಂಕ್ ಫುಡ್, ಬಿಸ್ಕೆಟ್, ಬ್ರೆಡ್‌ಗಳನ್ನು ಅಭ್ಯಾಸ ಮಾಡುವುದನ್ನು ತಪ್ಪಿಸಿ, ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯಗಳ ಮಿಶ್ರಣ, ಹಣ್ಣು, ತರಕಾರಿಗಳ ಸೇವನೆ ಅಭ್ಯಾಸ ಮಾಡಿಸಬೇಕು.

* ನಾವು ಸೇವನೆ ಮಾಡುವ ಆಹಾರದಲ್ಲಿ ಪ್ರೋಟಿನ್, ವಿಟಮಿನ್, ಲವಣಾಂಶ, ಶರ್ಕರ ಪಿಷ್ಠ ಸೇರಿ ಎಲ್ಲ ರೀತಿಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ನಾರಿನಾಂಶ ಹೆಚ್ಚಿರುವ ಹಣ್ಣು, ತರಕಾರಿಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು.

* ಇಂದು ಆಹಾರ ಬೇಗನೇ ಕೆಡದಿರಲು, ತಕ್ಷಣಕ್ಕೆ ಹೆಚ್ಚು ರುಚಿಯನ್ನು ಹೊಂದಲು ರಾಸಾಯನಿಕಗಳ ಬಳಕೆ ಹೆಚ್ಚುತ್ತಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಮುಕ್ತ ಆಹಾರ ನಿತ್ಯದ ಆದ್ಯತೆಯಾಗಿರಬೇಕು.

* ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಅಂಶ ನಿತ್ಯವೂ ಸೇರುವಂತೆ ನೋಡಿಕೊಳ್ಳಬೇಕು. ಶುದ್ಧವಾದ ನೀರು, ಹಣ್ಣಿನ ರಸ, ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ಜ್ಯೂಸ್ ಸೇರಿದಂತೆ ಉತ್ತಮ ಪಾನೀಯಗಳ ನಿಯಮಿತ ಸೇವನೆ ಆರೋಗ್ಯಕ್ಕೆ ಪೂರಕ.

* ಎಲ್ಲ ಬಗೆಯ ಹಣ್ಣುಗಳ ಸೇವನೆಗೆ ಒತ್ತು ನೀಡಬೇಕು. ಜೊತೆಗೆ ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳ ಸೇವನೆಯಿಂದ ಲಾಲಾರಸದ ಉತ್ಪತ್ತಿ ಹೆಚ್ಚಾಗಿ ಇದು ಜೀರ್ಣಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ