Mysore
26
light rain

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಬರಹ-ಬದುಕು : ಕಣ್ಣಿನ ಕಪ್ಪು ವೃತ್ತದೊಳಗೇ ಸುತ್ತುವ ನಮ್ಮಿಬ್ಬರ ಸಾಂಗತ್ಯ

ಅಭಿಷೇಕ್ ವೈ.ಎಸ್.

abhishek.nenapu@gmail.com

ಸಂಬಂಧಗಳೇ ಹಾಗೆ ಎಲ್ಲಿ ಯಾರೊಂದಿಗೆ ಬೆಸೆದುಕೊಂಡುಬಿಡುತ್ತವೆಯೋ ಗೊತ್ತೇ ಆಗುವುದಿಲ್ಲ. ಗಂಗೋತ್ರಿಯ ಮಣ್ಣಿನ ಗುಣವೇ ಅಂತಹದ್ದು. ಎಲ್ಲಿಂದಲೋ ಬಂದವರು ನೆನಪುಗಳನ್ನುಳಿ ಮತ್ತೆ ದೂರಕ್ಕೆ ಹೊರಟುಬಿಟ್ಟಿರುತ್ತಾರೆ, ಮತ್ತೆ ಸಿಗಲಾರದಂತೆ. ಆಶ್ಚರ್ಯವೆಂದರೆ ಇಲ್ಲಿ ಮರಗಳೂ ಮಾತಾಡುತ್ತವೆ. ಕಲ್ಲುಬೆಂಚುಗಳೂ ಕಥೆ ಹೇಳುತ್ತವೆ. ಕ್ಯಾಂಟೀನಿನ ಗೋಡೆಗಳೂ ಸಲ್ಲಾಪಕ್ಕೆ ಸಾಕ್ಷಿಯಾಗಿವೆ. ಈಗ ಗಂಗೋತ್ರಿಯ ದೊಡ್ಡ ಗಡಿಯಾರವೂ ನಿಂತಿದೆ. ಆದರೆ ‘ಕಾಲ’ ನಿಂತೇ ಇಲ್ಲ. ಯಾರಿಗೂ ಕಾಯುವುದಿಲ್ಲ.
ಅವತ್ತು ಕಾರಣವಿಲ್ಲದೇ ನನ್ನೊಡನೆ ದೂರ ನಿಂತಿದ್ದೆ. ಹೀಗೇ ದಿನಗಳುರುಳುವಾಗ ಮಾತು-ಕಥೆಗಳು ಔಪಚಾರಿಕವಾಗಿ ನಡೆಯುತ್ತಿದ್ದವಷ್ಟೆ ಯಾವುದೂ ಮನಸಿನಾಳದಿಂದ ಬರುತ್ತಿರಲಿಲ್ಲ. ನನಗಾಗ ಅರ್ಥವೇ ಆಗಿರಲಿಲ್ಲ ನಮ್ಮಿಬ್ಬರ ನಡುವೆ ಏಕಿಂಥಾ ‘ಗೋಡೆ’ಯೆದ್ದಿದೆ ಎಂದು. ಒಡೆದುಹಾಕುವ ಗೋಡೆಯಾಗಿದ್ದರೆ ಯಾವತ್ತೋ ಅದಕ್ಕೊಂದು ಗತಿ ಕಾಣಿಸಿರುತ್ತಿದ್ದೆ. ಆದರೆ ಇದು ಸುಲಭಕ್ಕೆ ಒಡೆಯುವ ‘ಗೋಡೆ’ಯಾಗಿರಲಿಲ್ಲ. ಗೋಡೆ ಗೋಡೆಯಾಗಿಯೇ ಉಳಿದದ್ದು ಈಗ ಇತಿಹಾಸ ಮತ್ತು ವಾಸ್ತವವೂ ಹೌದು. ‘ಎಲ್ಲವನ್ನೂ ಪ್ರಾಕ್ಟಿಕಲ್ ಆಗಿ ನೋಡುತ್ತೀಯ ನಮ್ಮಂಥ ಬಡಪಾಯಿ ಸಾಹಿತ್ಯದ ವಿದ್ಯಾರ್ಥಿಗಳಾದ ನಾವು ತುಸು ಹೆಚ್ಚೇ ಎಮೋಷನಲ್’ ಎಂಬುದನ್ನು ಅವಳಿಗೆ ಅರ್ಥ ಮಾಡಿಸಲು ಹೋಗಿ ದುರಂತ ನಾಯಕನಹಾಗೆ ಉಪದೇಶ ಕೊಟ್ಟಿದ್ದೆ. ಒಮ್ಮೆಯೂ ಅವಳು ಇಷ್ಟು ಪ್ರಬುದ್ಧವಾಗಿ ಮಾತನಾಡಿದ್ದನ್ನು ಕಂಡಿರಲಿಲ್ಲ. ಆಶ್ಚರ್ಯವೆನಿಸಿತು. ‘ಎಷ್ಟು ಸುಲಭ ಹೇಳ್ತಿಯೋ ನಿನ್ ಮೇಲೆ ನಂಗೆ ಭಾವನೆಗಳೇ ಇಲ್ಲ ಅಂತ? ಅದನ್ನ ನಿನ್ ಮುಂದೆ ಪ್ರದರ್ಶನ ಮಾಡ್ಬೇಕಾಗಿಲ್ಲ ಕಣೋ. You just came like a butterfly in to my life.. U come sit , ಹಿಡ್ಕೋಬೇಕು ಅಂದ್ರೂ ನೀನ್ ಸಿಗಲ್ಲ, and I already know that if expect also it’s not gonna come to me, u say ನಿಂಗೆ ಭಾವನೆಗಳೇ ಇಲ್ಲ, ಪ್ರಾಕ್ಟಿಕಲ್ ಅಂತ. But I’m human and that too a girl, I just wanna keep u as a beautiful portrait ಅಷ್ಟೆ ಕಣೋ’ ಅಂತ ಮಳೆಯಲ್ಲೇ ಅಳುತ್ತಾ ಹಾಸ್ಟೆಲಿನತ್ತ ಓಡಿಹೋದ ಘಟನೆ ಇನ್ನೂ ಕಣ್ಣೊಳಗೇ ಹಸಿಯಾಗಿದೆ. ನಮ್ಮಿಬ್ಬರ ನಡುವೆ ಮಾತುಕಥೆಗಳು ತುಸು ಬೇರೆಯದ್ದೇ ತಿರುವು ಪಡೆದು ನೀನು ಹೋದಾಗ ತುಂಬಾಹೊತ್ತು ನಾನೂ ನೆನೆದಿದ್ದೆ. ನಿನ್ನ ಹೆಜ್ಜೆಗುರುತುಗಳನ್ನೂ ನಿಶ್ಕರುಣಿ ಮಳೆಹನಿಗಳು ಕೊಚ್ಚಿಕೊಂಡು ಹೋಗಿದ್ದವು. ತಲೆಬಗ್ಗಿಸಿಕೊಂಡು ಹಳದಿ ಬೆಳಕನ್ನು ಚೆಲ್ಲುತ್ತಾ ಆ ಘಟನೆಗೆ ಸಾಕ್ಷಿಯಾದ ಮುಸ್ಸಂಜೆಯ ಚಿತ್ರವಷ್ಟೆ ನನ್ನ ನೆನಪಿನಲ್ಲುಳಿದಿದೆ. ಅದಾದನಂತರ ಬದುಕಿನ ನೆಲೆ ಕಂಡುಕೊಳ್ಳುವ ಭರದಲ್ಲಿ ಇಬ್ಬರೂ ಸಂಧಿಸಲೇ ಇಲ್ಲ. ಹಾಗೆ ನೋಡುವುದಾದರೆ ಇಬ್ಬರೂ ಅಪ್ಪಿತಪ್ಪಿಯೂ ಗೆರೆ ದಾಟಿರಲಿಲ್ಲ. ನಮ್ಮ ಸಂಬಂಧವೂ ಗಟ್ಟಿಯಾಗಿತ್ತು. ಅದಕ್ಕೆ ಹೆಸರೇನಿಡಬಹದೆಂದು ಒಮ್ಮೆ ನೀನು ಕೇಳಿದ್ದಾಗ ನಾನು ತಡವರಿಸಿದ್ದೆ.
ನೀನು ಹೋದ ನಂತರ ರಾತ್ರಿಗಳು ಎಷ್ಟು ದೀರ್ಘವಾಗಿವೆಯೆಂದರೆ ಕಣ್ಣ ಸುತ್ತಲೂ ಎದ್ದಿರುವ ಕಪ್ಪು ವೃತ್ತ ದಿನದಿಂದ ದಿನಕ್ಕೆ ಪ್ರಖರವಾಗುತ್ತಿದೆ ಎನ್ನುತ್ತಾರೆ ಗೆಳೆಯರು. ಅದರ ಬಗ್ಗೆ ತಲೆಕೆಡಿಸಿಕೊಳ್ಳದ ನಾನು ಅದರ ನೆಪದಲ್ಲಾದರೂ ನಿನ್ನ ಧ್ಯಾನಿಸುತ್ತೇನೆ. ಕಪ್ಪು ವೃತ್ತದೊಳಗೇ ಸುತ್ತುವ ನಮ್ಮಿಬ್ಬರ ಸಾಂಗತ್ಯದ ಯುಗಗಳು.. ಉಫ್..! ಎದೆ ಝಲ್ಲೆನಿಸುತ್ತದೆ.. ಹ್ಞಾ..! ಕ್ಯಾಂಪಸ್ಸು ಈಗೀಗ ಹೊಸ ವೇಷ ತೊಡುತ್ತಿದೆ. ಆದರೆ ಅವೇ ಮರಗಳು, ಅದೇ ಮಣ್ಣು, ಸ್ಟೇಜಿನ ಪಕ್ಕದಲ್ಲಿ ಗಂಟೆಗಟ್ಟಲೇ ಇಬ್ಬರೂ ಬೆಚ್ಚಗಾಗಿಸುತ್ತಿದ್ದ ಕಲ್ಲುಬೆಂಚು, ವರ್ಷಕ್ಕೊಮ್ಮೆ ಬಿಡುವ ಟಬೇಬುಯಾ ರೋಸಿಯಾ ಮರಗಳ ದಗರಿಬಿಟ್ಟ ಕೊಂಬೆಗಳು, ಅವೇ ದಾರಿಗಳು ಎಲ್ಲವೂ ಹಳೆಯವೇ. ಈಗ ಬಂದವರಿಗೆ ಅವೆಲ್ಲ ಹೊಸತಾಗಿರಬಹುದು ನಾಳೆ ಅವರಿಗೂ ಅವೆಲ್ಲ ಹಳೆಯವೇ ಆಗುತ್ತವೆ. ಆಗಲೂ ಇಂಥ ಸಾವಿರ ಪ್ರೇಮದ ಕಥೆಗಳಲ್ಲಿ ಒಂದಾದರೂ ದಾಖಲಾಗಬಹುದು ಇಲ್ಲವೇ ಮೌನವಾಗಿ ಕರಗಿಬಿಡಬಹುದು ಗೊತ್ತಿಲ್ಲ. ಇಲ್ಲಿ ಅರಳುವ ಕವಿತೆಗಳಿಗಿಂತ ನೆನಪುಗಳನ್ನಿಟ್ಟುಕೊಂಡು ನರಳುವ ಕವಿತೆಗಳೇ ತುಸು ಹೆಚ್ಚು ಎನಿಸುತ್ತವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ