-ಪ್ರದೀಪ್ ಎನ್. ಸಹ ಶಿಕ್ಷಕರು, ಹಿರೇಹಡ್ಲಿಗಿ, ಬಳ್ಳಾರಿ
ಹುಟ್ಟಿ ಬೆಳೆದಿದ್ದು, ಕಲಿತದ್ದೆಲ್ಲವೂ ಮೈಸೂರು. ಶಿಕ್ಷಕ ವೃತ್ತಿಯನ್ನು ಹರಸಿ ಹೊರಟಿದ್ದು ದೂರದ ಬಳ್ಳಾರಿ. ಎತ್ತಣಿಂದೆತ್ತ ನಂಟು. ಆದರೆ ಪ್ರವಾಸ ಎನ್ನುವ ಬಂಧವೊಂದು ದಿನಗಳ ಮಟ್ಟಿಗಾದರೂ ಇವೆರಡನ್ನೂ ಒಂದು ಮಾಡಿತ್ತು. ಮಕ್ಕಳು, ಮನೆಯವರು, ಸಹೋದ್ಯೋಗಿಗಳೆಲ್ಲರಿಗೂ ಸಂತೋಷವನ್ನುಣಬಡಿಸಿತ್ತು. ನನ್ನೊಳಗೂ ಖುಷಿಯ ರೇಖೆ ಗಡಿ ದಾಟಿತ್ತು. ಇದೊಂದು ಅತ್ಯಪರೂಪದ ಹೆಸರಿಸಲಾಗದ ಚೆಂದದ ಅನುಭವ.
ಬಳ್ಳಾರಿ ಜಿಲ್ಲೆ, ಹಿರೇಹಡ್ಲಿಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಾನು. ಪ್ರತಿ ವರ್ಷದ ಶೈಕ್ಷಣಿಕ ಚಟುವಟಿಕೆಯ ಭಾಗವಾದ ಪ್ರವಾಸಕ್ಕೆ ಮಕ್ಕಳನ್ನು ಅಣಿಗೊಳಿಸಿ ಮೈಸೂರು ಕಡೆಗೆ ಮೂರು ಪ್ರವಾಸ ಎಂದು ನಿರ್ಧಾರವಾದಾಗ ಮೈಸೂರಿಗನೇ ಆದ ನನಗೆ ಅತೀವ ಸಂತಸ ಮತ್ತು ಜವಾಬ್ದಾರಿಯ ಹೆಮ್ಮೆ.
ಸಾಂಸ್ಕೃತಿಕ ನಗರಿ, ಅದರ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು ನಮ್ಮ ರೂಟ್ ಮ್ಯಾಪ್‌ನಲ್ಲಿ ಸೇರಿದ್ದವು. ಅದರಂತೆ ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ಮೇಲುಕೋಟೆ, ಚಾಮುಂಡಿ ಬೆಟ್ಟ, ಮೈಸೂರು ಝೂ, ಅರಮನೆ, ಚರ್ಚ್, ತಲಕಾಡು, ಶಿವನಸಮುದ್ರ, ಶ್ರೀರಂಗಪಟ್ಟಣ ಹೀಗೆ ಪಟ್ಟಿ ಬೆಳೆಯುತ್ತಾ ಹೋಗಿತ್ತು. ಸುತ್ತಾಟವೂ ಮುಗಿದಿತ್ತು. ಇದರ ಜೊತೆಗೆ ನನಗೆ ನಮ್ಮ ಮನೆಯ ಭೇಟಿಯೂ ಸೇರಿ ಪ್ರವಾಸ ನನ್ನ ಮತ್ತು ಮಕ್ಕಳ ಪಾಲಿಗೆ ಮಧುರವಾಗಿತ್ತು, ಮರೆಯದಾಗಿತ್ತು.
ಮನೆಗೆ ಬಂದ ಮಕ್ಕಳು
ಮೈಸೂರಿಗನಾದ ನನಗೆ ಪ್ರವಾಸವನ್ನು ಅಚ್ಚುಕಟ್ಟಾಗಿ ರೂಪಿಸುವ ಜವಾಬ್ದಾರಿಯಲ್ಲಿ ಹೆಚ್ಚಿನ ಪಾಲಿತ್ತು. ಜೊತೆಗೆ ಮಕ್ಕಳು ನಮ್ಮೂರಿಗೆ ಬಂದಿರುವಾಗ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು ಆತಿಥ್ಯವನ್ನೂ ನೀಡಬೇಕು ಎನ್ನುವ ಹಂಬಲವಿತ್ತು. ಇದಕ್ಕೆ ಕುಟುಂಬಸ್ಥರು, ಬಂಧುಗಳು, ಸಹೋದ್ಯೋಗಿಗಳೆಲ್ಲರೂ ಸ್ಪಂದಿಸಿದರು. ಆ ಮೂಲಕ ಚೆಂದದ ಅನುಭವವೊಂದು ನನ್ನ ಬದುಕಲ್ಲಿ ಅಚ್ಚೊತ್ತಿ ನಿಂತಿತು.
ಮೇಷ್ಟ್ರು ಮನೆ ಊಟ
ಬಳ್ಳಾರಿ ಮಕ್ಕಳಿಗೆ ಮೈಸೂರು ಎಂದರೆ ಅಚ್ಚರಿ, ಪ್ರೀತಿ. ನಾನು ಅಲ್ಲಿಗೆ ಹೋದಾಗ ಸರ್ ನಿಮ್ಮೂರಿನಲ್ಲಿ ಅರಮನೆ ಇದೆ ಅಲ್ವಾ? ಅಲ್ಲಿ ಮಹಾರಾಜರು ಇದ್ದಾರಾ? ನಿಮ್ಮೂರು ತುಂಬಾ ನೀಟಾಗಿರುತ್ತಂತೆ ಎಂದೆಲ್ಲಾ ಪ್ರಶ್ನೆ ಕೇಳುತ್ತಿದ್ದರು. ನಿಮ್ಮ ಊರು, ನಿಮ್ಮ ಮನೆಯನ್ನು ತೋರಿಸಿ ಸರ್ ಎನ್ನುತ್ತಿದ್ದರು. ಅದು ಶೈಕ್ಷಣಿಕ ಪ್ರವಾಸದಿಂದ ಕೂಡಿ ಬಂದಿತ್ತು. ಇದೇ ಅವಕಾಶ ಬಳಸಿಕೊಂಡು ನಮ್ಮ ಶಾಲೆಯ ಮಕ್ಕಳಿಗೆ ಮೈಸೂರು ಶೈಲಿಯ ಊಟವನ್ನು ಮನೆಯಲ್ಲೇ ಮಾಡಿಸಿ ಹಾಕಿಸಿದೆ. ಮೈಸೂರು ಅರಮನೆ ನೋಡಲು ಬಂದ ನಮ್ಮ ಮಕ್ಕಳು ನಮ್ಮ ಮನೆಯನ್ನೂ ನೋಡಿ ಖುಷಿ ಪಟ್ಟರು, ಊಟ ಸವಿದು ಸಂತಸಗೊಂಡರು. ಅವರ ಸಂತಸದಲ್ಲಿಯೇ ನನ್ನ ಮನ ಅರಳಿತ್ತು.