ಎನ್. ಪಿ. ಪರಶಿವಮೂರ್ತಿ
ವನ, ಜಲಸಿರಿಯ ನಾಡೆಂದು ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು ವ್ಯಾಪ್ತಿಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಪ್ರದೇಶದ ಹೆಡಿಯಾಲ ವನ್ಯಜೀವಿ ತಾಣದ ದಟ್ಟ ಕಾನನದ ನಡುವಿನ ಪ್ರಕೃತಿ ಸೌಂದರ್ಯದ ರಮಣೀಯ ತಾಣದಲ್ಲಿ , ನೂರಾರು ವರ್ಷಗಳ ಐತಿಹ್ಯ ಹೊಂದಿರುವ ಬೇಲದಕುಪ್ಪೆ ಶ್ರೀಮಹದೇಶ್ವರ ಸ್ವಾಮಿ ದೇವಸ್ಥಾನ ನೆಲೆನಿಂತಿದೆ. ಸೋಮವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯ ದಿನಗಳಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಜನರು ಕುಟುಂಬ, ಸ್ನೇಹಿತರು, ಬಂಧು ಬಾಂಧವರೊಂದಿಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಮಹದೇಶ್ವರರ ೭೭ ಮಲೆಗಳಲ್ಲಿ ಈ ಕ್ಷೇತ್ರವೂ ಒಂದಾಗಿದ್ದು, ಶ್ರೀ ಮಲೆ ಮಹದೇಶ್ವರ ಬೆಟ್ಟದಷ್ಟೇ ಮಹತ್ವ ಹೊಂದಿದೆ ಎಂದು ಜನರು ಇಂದಿಗೂ ನಂಬಿದ್ದಾರೆ.
ಕ್ಷೇತ್ರದ ಐತಿಹಾಸಿಕ ಹಿನ್ನೆಲೆ: ಅನೇಕ ವರ್ಷಗಳ ಹಿಂದೆ ಈ ಭಾಗದ ಶಿವಶರಣರಾದ ಹಲಗೇಗೌಡ ಮತ್ತು ಲಿಂಗಮ್ಮ ದಂಪತಿ ಇಲ್ಲಿ ಗುಡಿ ನಿರ್ಮಿಸಿದರು. ಇಂದು ಆ ಕ್ಷೇತ್ರವೇ ಬೇಲದಕುಪ್ಪೆ ಶ್ರೀಮಹದೇಶ್ವರರ ಸನ್ನಿಧಿಯಾಗಿ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ.
ಇಲ್ಲಿ ಮೊದಲು ಅನೇಕ ಬೇಲದ ಮರಗಳು ಬೆಳೆದದ್ದರಿಂದ ಮುಂದಿನ ದಿನಗಳಲ್ಲಿ ಬೇಲದಕುಪ್ಪೆ ಎಂದು ಹೆಸರಾಯಿತು. ಗರ್ಭಗುಡಿಯ ಸುತ್ತಲೂ 108 ಶಿವಲಿಂಗಗಳನ್ನು ಒಳಗೊಂಡಿದೆ. ಹಕ್ಕಿಗಳ ಸುಮಧುರ ಚಿಲಿಪಿಲಿ ಕಲರವ, ಗಂಟೆಗಳ ನಾದವಂತೂ ಮನಸ್ಸಿಗೆ ಶಾಂತಿ, ನೆಮ್ಮದಿ, ಹಿತವನ್ನು ನೀಡುತ್ತದೆ. ಹಸಿರು ಹುಲ್ಲು, ಸುತ್ತಲೂ ಬೆಟ್ಟ ಗುಡ್ಡ, ಪ್ರಕಾಶಮಾನವಾದ ಆಕಾಶ ಮತ್ತು ನೀಲಿ ಮೋಡಗಳು, ಹಿತಕರವಾದ ವಾತಾವರಣ, ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳು, ಸೂರ್ಯನ ಮಹಾ ಬೆಳಕು. ಬಣ್ಣ ಬಣ್ಣದ ಸೂರ್ಯನ ಕಿರಣಗಳು, ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾಣಸಿಗುವ ಕಾಡು ಪ್ರಾಣಿಗಳು ಈ ಸ್ಥಳಕ್ಕೆ ಸ್ವರ್ಗಿಯ ಮಾಂತ್ರಿಕ ಸ್ಪರ್ಶವನ್ನು ನೀಡುತ್ತದೆ. ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜಾ ಕೈಂಕರ್ಯಗಳು, ಅಮಾವಾಸ್ಯೆಯ ದಿನದಂದು ವಿಶೇಷ ಪೂಜೆ ಇರುತ್ತದೆ. ಹಾಗೂ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗುತ್ತದೆ.
ಅರಣ್ಯ ಇಲಾಖೆಯಿಂದ ಅತಿಯಾದ ನಿರ್ಬಂಧ . . .
ಇತ್ತೀಚೆಗೆ ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಅರಣ್ಯ ಇಲಾಖೆ ಹರಳಹಳ್ಳಿ ಮುಖ್ಯದ್ವಾರದ ಚೈನ್‌ಗೇಟ್ ಬಳಿಯಲ್ಲಿಯೇ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿದೆ. ಇಲ್ಲಿಯೇ ವಾಹನಗಳನ್ನು ನಿಲ್ಲಿಸಿ, ಸರ್ಕಾರಿ ಬಸ್ಸಿನಲ್ಲಿ ದುಬಾರಿ ಹಣವನ್ನು ಕೊಟ್ಟು ೪ ಕಿ. ಮೀ ಪ್ರಯಾಣ ಬೆಳೆಸಬೇಕಾಗುತ್ತದೆ. ಸೋಮವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯ ದಿನ ದಂದು ಮಾತ್ರ ಬೆಳಿಗ್ಗೆ ೧೦ ರಿಂದ ೪ ಗಂಟೆವರೆಗೆ ದೇವ ಸ್ಥಾನಕ್ಕೆ ತೆರಳಲು ಅನುಮತಿ ಇದೆ. ಇನ್ನುಳಿದ ದಿನಗಳು ಅವಕಾಶವಿರುವುದಿಲ್ಲ. ಈ ನಿಯಮಗಳು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ದೇವಸ್ಥಾನಗಳಿಗೆ ಇಲ್ಲದ ನಿಯಮ ಇಲ್ಲೇಕೆ ಎಂದು ಜನರು ಪ್ರಶ್ನಿಸುತ್ತಾರೆ. ಕಾಡಂಚಿನಲ್ಲೇ ಅಕ್ರಮವಾಗಿ ಹೋಂ ಸ್ಟೇ, ಐಷಾರಾಮಿ ಹೋಟೆಲ್, ಅತಿಥಿ ಗೃಹಗಳ ನಿರ್ಮಾಣ ಹಾಗೂ ಬಂಡೀಪುರ ಅರಣ್ಯದಿಂದ ಕೇರಳಕ್ಕೆ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶವಿದೆ. ಆದರೆ ದೇವಸ್ಥಾನಕ್ಕೆ ತೆರಳಲು ಇನ್ನಿಲ್ಲದ ನಿಯಮಗಳೇಕೆ ಎಂದು ಭಕ್ತರು ಪ್ರಶ್ನಿಸುತ್ತಾರೆ. ಅತಿಯಾದ ನಿಯಮಗಳಿಂದ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರುವುದು ಕಳವಳಕಾರಿ ಸಂಗತಿ.
ಮೊದಲಿನಂತೆ ದೇವಸ್ಥಾನಕ್ಕೆ ತೆರಳಲು ಮುಕ್ತವಾಗಿ ವಾರದ ಎಲ್ಲಾ ದಿನಗಳು ಹಾಗೂ ಅದ್ಧೂರಿ ಜಾತ್ರೆಯನ್ನು ನಡೆಸಲು ಅವಕಾಶವನ್ನು ಮಾಡಿಕೊಡ ಬೇಕೆಂದು ಸಾರ್ವಜನಿಕರು ಸಂಬಂಧಪಟ್ಟವರಿಗೆ ಜನರು ವಿನಂತಿಸುತ್ತಾರೆ. ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದುರವರು ಕೂಡ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರವಾಗಿ ಸರ್ಕಾರದ ಗಮನ ಸೆಳೆದಿದ್ದು, ಯಾವಾಗ ಜಾರಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಕ್ಷೇತ್ರಕ್ಕೆ ಮೈಸೂರಿನಿಂದ ಹ್ಯಾಂಡ್‌ಪೋಸ್ಟ್, ಸರಗೂರು, ಹೆಡಿಯಾಲ ಮಾರ್ಗವಾಗಿ ತೆರಳಬಹುದು. ಮತ್ತೊಂದು ಮಾರ್ಗವೆಂದರೆ ಮೈಸೂರಿನಿಂದ ನಂಜನಗೂಡು, ಬೇಗೂರು, ಹೆಡಿಯಾಲ ಮಾರ್ಗವಾಗಿ ತೆರಳಬಹುದು. ಒಂದು ದಿನದ ಪ್ರವಾಸದ ಪ್ಲಾನ್ ಮಾಡಿಕೊಂಡರೆ ಒತ್ತಡದ ಬದುಕಿನಿಂದ ಮುಕ್ತಿ ಹೊಂದಲು ಮನಸ್ಸಿಗೆ ಚೇತೋಹಾರಿ ಅನುಭವಕ್ಕೆ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನ, ಶ್ರೀಕ್ಷೇತ್ರ ಚಿಕ್ಕದೇವಮ್ಮ ಬೆಟ್ಟ, ನುಗು ಜಲಾಶಯ, ಕಬಿನಿ ಅಣೆಕಟ್ಟೆ ಇವೆಲ್ಲವನ್ನು ವೀಕ್ಷಿಸಿ ಮನಮೋಹಕವಾದ ಹಸಿರು ಸೀರೆಯನ್ನುಟ್ಟು ನಲಿಯುವ ಕಾಡಿನ ಸೌಂದರ್ಯ ವನ್ನು ವೀಕ್ಷಿಸಿ ಹೃನ್ಮನವನ್ನು ತಣಿಸಿ ಆನಂದಮಯವಾಗಿ ತೆರಳಬಹುದಾಗಿದೆ.
ಕಡೆಯ ಕಾರ್ತಿಕ ಮಾಸದಲ್ಲಿ ವಿಜೃಂಭಣೆಯ ಜಾತ್ರೆ. . .
ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ನಾಲ್ಕು ದಿನಗಳು ಅಕ್ಕ ಪಕ್ಕದ ಗ್ರಾಮಗಳವರು, ಆಡಳಿತ ಮಂಡಳಿ ಸೇರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೇವರಿಗೆ ಬಿಲ್ವಾರ್ಚನೆ, ಅಭಿಷೇಕ, ಹೋಮ, ಹಾಲ್ಹರವಿ ಸೇವೆ, ಕೊಂಡೋತ್ಸವ, ರಾಸುಗಳ ಜಾತ್ರೆ, ರಥೋತ್ಸವ, ಛತ್ರಿ, ಚಾಮರ, ಸತ್ತಿಗೆ, ಬಿರುದು ಬಾವಲಿಗಳು, ಜಾನಪದ ಕಲಾತಂಡಗಳ ಮೂಲಕ ದೇವರ ಉತ್ಸವಗಳು, ರುದ್ರಾಕ್ಷಿ ಮಂಟಪ ಮೆರವಣಿಗೆ ಭಕ್ತಿ ಭಾವದೊಂದಿಗೆ ನೊಡುಗರು ನಿಬ್ಬೆರಗಾಗುವಂತೆ ನಡೆಯುತ್ತವೆ. ಜೊತೆಗೆ ನಾಡು, ಸಂಸ್ಕೃತಿ, ಸ್ವಾಮಿಯ ಕುರಿತು ಹರಿಕಥೆ, ಭಜನೆ, ಭಕ್ತಿಗೀತೆಗಳ ಲಹರಿ ಝೇಂಕರಿಸುತ್ತವೆ. ಇವುಗಳಲ್ಲದೆ ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಮನರಂಜನೆಯನ್ನು ನೀಡುತ್ತವೆ. ಧಾರ್ಮಿಕ ಹಿನ್ನೆಲೆಯುಳ್ಳ ಈ ಜಾತ್ರೆಗೆ ತಾಲ್ಲೂಕಿನ ಭಕ್ತರಷ್ಟೇ ಅಲ್ಲದೆ ನೆರೆಹೊರೆಯ ತಾಲ್ಲೂಕು, ಜಿಲ್ಲೆಗಳಿಂದ ಸುಮಾರು ೪೦೦ಕ್ಕೂ ಹೆಚ್ಚು ಎತ್ತಿನಗಾಡಿಗಳನ್ನು ಮಧುವಣೆಗಿತ್ತಿಯಂತೆ ಸಿಂಗರಿಸಿಕೊಂಡು ಬರುವ ಭಕ್ತರು ಸ್ವಾಮಿಗೆ ಜಯಘೋಷ ಮೊಳಗಿಸಿ ಜಾತ್ರೆಗೆ ಮೆರುಗನ್ನು ನೀಡುತ್ತಾರೆ. ಜಾತ್ರೆಗೆ ಆಗಮಿಸುವ ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗುತ್ತದೆ. ಈ ಎಲ್ಲಾ ವೈಭವಗಳನ್ನು ಭಕ್ತರು ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಾರೆ.





