ಜಿ. ತಂಗಂ ಗೋಪಿನಾಥಂ
ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಬೇಕು ಎಂಬುದು ನನ್ನ ಹೆಬ್ಬಯಕೆ. ಇದು ನನ್ನ ಕನಸು ಮಾತ್ರವಲ್ಲ, ನನ್ನ ತಂದೆ-ತಾಯಿಯ ಕನಸು ಕೂಡ. . . ಹೀಗೆಂದವರು ಇದೇ ಡಿಸೆಂಬರ್ ತಿಂಗಳಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುವ ಮೈಸೂರಿನ ಪ್ರತಿಭೆ ಎಂ. ಬಿ. ಡೀನ್ ಅರ್ಜುನ್.
ಮೈಸೂರಿನ ಕುವೆಂಪುನಗರದ ಎಂ ಬ್ಲಾಕ್‌ನ ನಿವಾಸಿಗಳಾದ ಪೈಲ್ವಾನ್ ಕೆ. ಎಸ್. ಭರತ್ ಕುಮಾರ್ ಮತ್ತು ಲಕ್ಷ್ಮಿ ದಂಪತಿಯ ದ್ವಿತೀಯ ಪುತ್ರ ಡೀನ್ ಅರ್ಜುನ್. ಪ್ರಸ್ತುತ ಮೈಸೂರಿನ ಜ್ಯೋತಿ ಪ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಜುನ್ ನ. ೨೬ರಂದು ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ೨೦೨೪-೨೫ನೇ ಸಾಲಿನ ೧೭ವರ್ಷ ವಯೋಮಿತಿಯ ೫೮ ಕೆ. ಜಿ. ವಿಭಾಗದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಅರ್ಜುನ್ ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ತಮ್ಮ ಕಠಿಣ ಪರಿಶ್ರಮ ಮತ್ತು ಕುಟುಂಬಸ್ಥರು, ಸ್ನೇಹಿತರು, ಗುರುಗಳ ಪ್ರೋತ್ಸಾಹ ಮತ್ತು ರಾಷ್ಟ್ರೀಯ ಪಂದ್ಯಾವಳಿ ತಯಾರಿಯ ಕುರಿತು ಅನುಭವ ಹಂಚಿಕೊಂಡರು. ನಾನು ೧ನೇ ತರಗತಿಯಲ್ಲಿದ್ದಾಗ ಆಟವಾಡುವ ಸಮಯದಲ್ಲಿ ನನ್ನ ಸ್ನೇಹಿತನೊಬ್ಬ ನಿನಗೆ ಯಾವ ಕ್ರೀಡೆ ಇಷ್ಟ ಅಂತ ಕೇಳಿದ. ಅದಕ್ಕೆ ನಾನು ಕರಾಟೆ ನನಗೆ ತುಂಬಾ ಇಷ್ಟ ಅಂದೆ. ಕರಾಟೆ ಕಲಿಯಬೇಕು ಎಂದು ನನ್ನ ತಂದೆ ಬಳಿ ಹೇಳಿದೆ. ಅವರು ಕೂಡ ನನ್ನನ್ನು ಹುರುದುಂಬಿಸಿ ತರಬೇತಿಗೆ ಸೇರಿಸಿದರು.
೨೦೧೫ರಿಂದ ಕರಾಟೆ ಕಲಿಯಲು ಆರಂಭಿಸಿದೆ. ಮೊದಲ ಬಾರಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಬಹುಮಾನ ಗೆಲ್ಲಲು ಸಾಧ್ಯವಾಗಲಿಲ್ಲ. ಆಗ ನಮ್ಮ ತಂದೆ ಸ್ಪರ್ಧೆಯಲ್ಲಿ ಸೋತೆ ಅಂತ ತಲೆ ಕೆಡಿಸಿಕೊಳ್ಳಬೇಡ. ಮುಂದಿನ ಬಾರಿ ಖಂಡಿತ ಗೆದ್ದೇ ಗೆಲ್ಲುತ್ತೀಯಾ ಎಂದು ಆತ್ಮಸ್ಥೈರ್ಯ ತುಂಬಿದರು. ಅವರ ಪ್ರೋತ್ಸಾಹದಿಂದಲೇ ಇಂದು ನಾನು ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯವಾಗಿದೆ. ಸದ್ಯ ನಾನು ಮೈಸೂರು ಓಪನ್ ಕರಾಟೆ ಸ್ಪರ್ಧೆಯಲ್ಲಿ ೫ ಬಾರಿ ಪ್ರಥಮ, ೨ ಬಾರಿ ದ್ವಿತೀಯ, ೧ ಬಾರಿ ತೃತೀಯ ಸ್ಥಾನ ಪಡೆದಿದ್ದೇನೆ. ದಕ್ಷಿಣ ವಲಯ ಕರಾಟೆ ಸ್ಪರ್ಧೆಯಲ್ಲಿ ೧೧ ಬಾರಿ ಪ್ರಥಮ, ೫ ಬಾರಿ ದ್ವಿತೀಯ, ೨ ಬಾರಿ ತೃತೀಯ ಸ್ಥಾನ, ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ೫ ಬಾರಿ ಪ್ರಥಮ, ೩ ಬಾರಿ ದ್ವಿತೀಯ, ೧ ಬಾರಿ ತೃತೀಯ ಸ್ಥಾನ, ೨೦೨೧ರಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದೇನೆ ಎಂದು ಹೇಳಿದರು.
ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ೨ ಬಾರಿ ಪ್ರಥಮ, ೧ ಬಾರಿ ದ್ವಿತೀಯ ಸ್ಥಾನ ಗಳಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಅರ್ಜುನ್.
ನನ್ನ ಮಗ ಉತ್ತಮ ಕರಾಟೆ ಪಟುವಾಗಲಿ ಎಂದು ಇಷ್ಟಪಟ್ಟು ಅವನಿಗೆ ಕರಾಟೆ ತರಬೇತಿ ಕೊಡಿಸಿದೆ. ಈಗ ಅವನು ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಈ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ಮೈಸೂರು, ಕರ್ನಾಟಕ, ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬುದು ನನ್ನ ಬಯಕೆ. -ಪೈಲ್ವಾನ್ ಕೆ. ಎಸ್. ಭರತ್ ಕುಮಾರ್, ಡೀನ್ ಅರ್ಜುನ್ ತಂದೆ.
ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆ ಆಗಿರುವುದು ನನಗೆ ತುಂಬಾ ಖುಷಿ ನೀಡಿದೆ. ನಾನು ಈ ಹಂತಕ್ಕೆ ಬರಲು ನನ್ನ ತಂದೆ, ತಾಯಿ ಬಹಳ ಶ್ರಮಪಟ್ಟಿದ್ದಾರೆ. ನಾನು ಉತ್ತಮ ಕರಾಟೆ ಪಟು ಆಗಬೇಕೆನ್ನುವುದು ಪೋಷಕರ ಕನಸು. -ಎಂ. ಬಿ. ಡೀನ್ ಅರ್ಜುನ್,
ನಿತ್ಯ ಅಭ್ಯಾಸ
ನಾನು ೨೦೧೫ರಿಂದ ಮೈಸೂರಿನ ನಿಮಿಷಾಂಬ ಲೇಔಟ್ ನಲ್ಲಿರುವ ಗೊಜು ರಿಯು ಕರಾಟೆ-ಡು ಅಕಾಡೆಮಿಯಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದೇನೆ. ತರಬೇತುದಾರ ಮಹೇಶ್ ಅವರ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ೬. ೩೦ ರಿಂದ ೮ರವರೆಗೆ, ಸಂಜೆ ೫. ೩೦ ರಾತ್ರಿ ೮ರವರೆಗೆ ತರಬೇತಿ ಪಡೆಯುತ್ತಿದ್ದೇನೆ ಎನ್ನುತ್ತಾರೆ ಅರ್ಜುನ್.