ಇವರ ಹೆಸರು ಲಲಿತಾ ಮೊದಲಿಯಾರ್.ಇರುವುದು ಮೈಸೂರಿನ ರಾಜೀವ ನಗರದಲ್ಲಿ. ಇವರ ತಂದೆ ಅರಮನೆಗೆ ಹತ್ತಿರವಿದ್ದ ಮೈಸೂರಿನ ಒಂದು ಕಾಲದ ವರ್ತಕರು.
ಜೀವನದ ಹಲವು ಜಂಜಡಗಳಿಗೆ ಸಿಲುಕಿ ಜರ್ಜರಿತರಾಗಿದ್ದ ಲಲಿತಾ ಅದರಿಂದ ಹೊರಬರಲು ಕಂಡುಕೊಂಡ ದಾರಿ ಕನ್ನಡ ತಾಯಿ ಭುವನೇಶ್ವರಿಯ ದಿರಿಸು ಧರಿಸಿ ನವಂಬರ್ ತಿಂಗಳು ಪೂರ್ತಿ ಮೈಸೂರು ನಗರದ ರಾಜ್ಯೋತ್ಸವದ ಸಮಾರಂಭಗಳಲ್ಲಿ ಪ್ರತ್ಯಕ್ಷರಾಗುವುದು ಮತ್ತು ಆಗಸ್ಟ್ ಹದಿನೈದರಂದು ಭಾರತ ಮಾತೆಯ ವೇಷ ಧರಿಸಿ ಸ್ವಾತಂತ್ರೋತ್ಸವದಲ್ಲಿ ಪಾಲುಗೊಳ್ಳುವುದು.
ಕಳೆದ ಹಲವು ಹತ್ತು ವರ್ಷಗಳಿಂದ ಚಾಚೂ ತಪ್ಪದೆ ಈ ಕೈಂಕರ್ಯದಲ್ಲಿ ತೊಡಗಿರುವ ಲಲಿತಾ ಮೊದಲಿಯಾರ್ ಎಂಬ ಈ ತಾಯಿಗೆ ಬದುಕಲ್ಲಿ ಬೇರೆ ಯಾವುದೂ ಮಹಾತ್ವಾಕಾಂಕ್ಷೆಗಳಿಲ್ಲ. ಕನ್ನಡ ನಾಡಿನ ಈ ಮಣ್ಣು ಮತ್ತು ಮೈಸೂರಿನ ಬದುಕು ತನಗೆ ಕೊಟ್ಟ ಸುಖ ಸಂತೋಷಗಳಿಗೆ ತಾನು ತೋರಿಸುವ ಕೃತಜ್ಞತೆ ತನ್ನ ಈ ಕಾಯಕ ಎಂದು ವಿನೀತಳಾಗಿ ಹೇಳುತ್ತಾರೆ. ತನ್ನ ಬದುಕಿನ ಕುರಿತು ಹೇಳಹೋದರೆ ದೊಡ್ಡ ಕಾದಂಬರಿಯೇ ಸಾಕಾಗಲಾರದು ಎಂದು ವಿಷಾಧದಿಂದ ನಗುತ್ತಾರೆ.





