Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ವನಿತೆ-ಮಮತೆ : ಪ್ರವಾಸ ಹೊರಡುವ ಮಹಿಳೆಯರಿಗೆ ನಟಿಯ ಟಿಪ್ಸ್

ಹರ್ಷಿಕಾ ಪೂಣಚ್ಚ ಹಿಮಾಚಲ ಪ್ರದೇಶ ಡೈರಿ; ಸುಂದರ ಅನುಭವಗಳ ಹೂರಣ

ಕೊಡಗಿನ ನಟಿ ಹರ್ಷಿಕಾ ಪೂಣಚ್ಚ ಮೊನ್ನೆ ಮೊನ್ನೆಯಷ್ಟೇ ಹಿಮಾಚಲ ಪ್ರದೇಶ ಸುತ್ತಾಡಿ ಬಂದಿದ್ದಾರೆ. ಟ್ರಕ್ಕಿಂಗ್, ಬೈಕ್ ರೈಡಿಂಗ್, ಜೀಪ್ ರೈಡಿಂಗ್‌ಗಳನ್ನೆಲ್ಲಾ ಮಾಡಿ ಸುಂದರ ಅನುಭವ ಪಡೆದುಕೊಂಡಿರುವ ಅವರು, ತಮ್ಮಂತೆಯೇ ಎಲ್ಲ ಹೆಣ್ಣು ಮಕ್ಕಳು ಸುತ್ತಾಡಬೇಕು, ಹೊಸತನಕ್ಕೆ ತೆರೆದುಕೊಳ್ಳಬೇಕು. ಕನಿಷ್ಠ ಪಕ್ಷ ತಮ್ಮ ಸುತ್ತಮುತ್ತಲೂ ಇರುವ ಜಾಗಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ. ತಾವು ಕಂಡುಕೊಂಡ ಅನುಭವಗಳನ್ನು ಇಲ್ಲಿ ದಾಖಲಿಸುವುದರ ಜೊತೆಗೆ ಉತ್ತರ ಭಾರತದ ಪ್ರವಾಸಕ್ಕೆ ಸಿದ್ಧತೆ ಹೇಗಿರಬೇಕು, ಮಹಿಳೆಯರ ಆದ್ಯತೆಗಳು ಏನಾಗಿರಬೇಕು ಎಂಬುದನ್ನು ಹರ್ಷಿಕಾ ಇಲ್ಲಿ ಹಂಚಿಕೊಂಡಿದ್ದಾರೆ.

ಭೋಜಪುರಿ ಭಾಷೆಯ ಸಿನಿಮಾ ಶೂಟಿಂಗ್‌ಗಾಗಿ ೨ ದಿನ ಹಿಮಾಚಲ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿನ ಪ್ರಕೃತಿ ಸೌಂದರ್ಯ ನಿಜಕ್ಕೂ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಇದೇ ಕಾರಣಕ್ಕಾಗಿ ನನ್ನ ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡು ೫ ದಿನಗಳ ಪ್ರವಾಸದ ಯೋಜನೆ ರೂಪಿಸಿಕೊಂಡೆ. ಅಲ್ಲಿಂದ ಮುಂದಿನದ್ದು ಸುಂದರ ಅನುಭವಗಳ ಗುಚ್ಛ.

ಹಿಮಾಚಲ ಪ್ರದೇಶದಲ್ಲಿ ಕುಲುಮನಾಲಿ, ಸಿಮ್ಲಾ ಸೇರಿ ಹಲವರು ಸ್ಥಳಗಳು ಮಾತ್ರವೇ ಪ್ರಸಿದ್ಧಿ ಪಡೆದಿವೆ. ಆದರೆ ಅದಕ್ಕಿಂತಲೂ ಸೊಗಸಾಗಿರುವ ಸ್ಥಳಗಳು ಇಲ್ಲಿವೆ. ಅವುಗಳನ್ನು ನಾವು ಕೇಂದ್ರವಾಗಿರಿಸಿಕೊಂಡು ನಾವು ಪ್ರವಾಸಕ್ಕೆ ಅಣಿಯಾಗಿ ಕಸೋಲ್, ಪಾರ್ವತಿ ರ್ಯಾಲಿ, ಜಿಸ್ಪಾ, ಮಲನಾ ಪ್ರದೇಶಗಳಲ್ಲಿ ಸುತ್ತಾಡಿದೆವು. ನಾನೊಬ್ಬಳು ನಟಿಯಾಗಿ, ಪ್ರವಾಸಿ ಪ್ರಿಯೆಯಾಗಿ, ಹೆಣ್ಣಾಗಿ ಅಲ್ಲಿ ಕಂಡ ಜಗತ್ತು, ಗಳಿಸಿದ ಅನುಭವ ತುಂಬಾ ರೋಚಕವಾದವು.


ಹೆಣ್ಣು ಮಕ್ಕಳು ಹೀಗೆ ಹೊರಡಿ

ಪ್ರವಾಸ ಎಲ್ಲರಿಗೂ ಪ್ರಿಯವೇ. ಅದರಲ್ಲೂ ಮಹಿಳೆಯರ ಪ್ರವಾಸ ಹೆಚ್ಚಾಗಿ ಧಾರ್ಮಿಕ ಕ್ಷೇತ್ರಗಳಿಗೆ ಸೀಮಿತವಾಗಿರುತ್ತದೆ. ಹಿಮಾಚಲ ಪ್ರದೇಶ, ಉತ್ತರ ಭಾರತದತ್ತ ಹೆಣ್ಣು ಮಕ್ಕಳು ತಂಡವಾಗಿ, ಕುಟುಂಬದ ಜೊತೆಗೆ ಪ್ರವಾಸವನ್ನು ಯೋಜಿಸಿಕೊಂಡರೆ ಅದ್ಭುತ ಜಗತ್ತನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಯೂ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿದ್ದು, ಅದರೊಂದಿಗೆ ಪ್ರಕೃತಿ ಸೌಂದರ್ಯ, ಆಧ್ಯಾತ್ಮಿಕ ಅನುಭೂತಿಯೂ ಸಿಗುವುದು ಪಕ್ಕ.

ನಾನು ಕಂಡುಕೊಂಡ ಹಿಮಾಲಚ ಪ್ರದೇಶ ಸುತ್ತಾಟದ ಅನುಭವದ ಪ್ರಕಾರ ಇಲ್ಲಿನ ಕೆಲವಾರು ಸ್ಥಳಗಳಿಗೆ ಹೆಣ್ಣು ಮಕ್ಕಳು ಸೋಲೊ ಟ್ರಿಪ್ ಹೊರಡುವುದು ತರವಲ್ಲ. ಅದಕ್ಕೆ ಬದಲಾಗಿ ತಂಡವಾಗಿ, ಕುಟುಂಬದ ಜೊತೆಗೆ ಹೊರಡುವುದು ಸೂಕ್ತ. ಎಲ್ಲ ಕಡೆಗಳಲ್ಲಿಯೂ ಮೂಲ ಸೌಕರ್ಯಗಳಿವೆ. ಹೀಗಿದ್ದರೂ ಒಂದಷ್ಟು ಬೇಸಿಕ್ ನೀಡ್ಸ್‌ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಉತ್ತಮ. ಅದೂ ಹೆಚ್ಚು ಹೊರೆಯಾಗದಂತೆ.


ಇವುಗಳು ಅಗತ್ಯವಾಗಿರಲಿ

ಹಿಮಾಚಲ ಪ್ರದೇಶದ ಹಲವಾರು ಕಡೆಗಳಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗೆ ಇಳಿದಿರುತ್ತದೆ. ಇಂತಹ ಕಡೆಗಳಿಗೆ ಹೋಗುವಾಗಿ ಮಹಿಳೆಯರು ಹೆಚ್ಚಾಗಿ ಉಡುಪಿನ ಕಡೆಗೆ ಹೆಚ್ಚು ಗಮನ ನೀಡಬೇಕು. ಸಾಂಪ್ರದಾಯಿಕ ಉಡುಗೆಗಳ ಬದಲಿಗೆ ಬೆಚ್ಚನೆಯ ಉಡುಪುಗಳು ಇರಲಿ. ಮುಖ್ಯವಾಗಿ ಜೀನ್ಸ್ ಪ್ಯಾಂಟ್ ಧರಿಸುವ ಬದಲು ಟ್ರಾಕ್ ಪ್ಯಾಂಟ್‌ಗಳು, ಟ್ರಕ್ಕಿಂಗ್‌ಗಾಗಿಯೇ ಸಿದ್ಧವಾಗುವ ಉಡುಗೆಗಳು ಸೂಕ್ತ. ಎಲ್ಲಕ್ಕಿಂತೂ ಹೆಚ್ಚಾಗಿ ಉತ್ತಮ ಗುಣಮಟ್ಟದ ಗ್ಲೌಸ್, ಶೂಗಳನ್ನು ಧರಿಸುವುದು ಹೆಣ್ಣು ಮಕ್ಕಳ ಪಾಲಿಗೆ ಅತ್ಯುಪಯುಕ್ತ.

ಇದರ ಜೊತೆಗೆ ನಿಮ್ಮ ನಿತ್ಯ ಬಳಕೆಯ ವಸ್ತುಗಳು, ಔಷಧ, ಪ್ರಥಮ ಚಿಕಿತ್ಸಾ ಉಪಕರಣಗಳು ಜೊತೆಗಿರಲಿ. ಕಡಿಮೆ ಪ್ರಮಾಣದ ವಸ್ತುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇಲ್ಲದೇ ಇದ್ದರೆ ಇವು ನಿಮ್ಮ ಪ್ರವಾಸದ ಅನುಭವವನ್ನು ಕೆಟ್ಟದಾಗಿಸುವ ಸಾಧ್ಯತೆ ಇರುತ್ತದೆ.

ನಾನು ಪ್ರವಾಸಕ್ಕೆ ಹೊರಡುವುದಕ್ಕಿಂತ ಮೊದಲು ಇಂಟರ್‌ನೆಟ್‌ನಲ್ಲಿ ಸಾಕಷ್ಟು ಅಧ್ಯಯನ ಮಾಡಿಕೊಂಡು, ಏನೇನು ಬೇಕು, ಹೆಣ್ಣು ಮಕ್ಕಳ ಸುರಕ್ಷತೆ ಹೇಗಿದೆ, ಹೆಣ್ಣು ಮಕ್ಕಳಿಗೆ ಯಾವೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ಖಾತ್ರಿ ಮಾಡಿಕೊಂಡಿದ್ದೆ. ಇದರ ಜೊತೆಗೆ ವಾಸ್ತವಕ್ಕೆ ಇಳಿದಾಗ ಜೊತೆಯಲ್ಲಿ ಶುದ್ಧವಾದ ಕುಡಿಯುವ ನೀರು ಇಟ್ಟುಕೊಳ್ಳುವುದು, ಹೆಡ್ ಟಾರ್ಚ್ ಇಟ್ಟುಕೊಳ್ಳುವುದು, ಮಹಿಳೆಯರಿಗೆ ಅಗತ್ಯವಾದ ವಸ್ತುಗಳನ್ನು ಕೊಂಡೊಯ್ಯುವುದು ಅತ್ಯಗತ್ಯ ಎನ್ನಿಸಿತು. ಇಲ್ಲದೇ ಇದ್ದರೆ ಒಂದು ವಸ್ತು ಬೇಕು ಎಂದರೂ ಹತ್ತಾರು ಕಿ.ಮೀ. ನಡೆದು ಸಾಗಬೇಕು. ಇಲ್ಲವೇ ಹೆಚ್ಚಿನ ಬೆಲೆ ತೆತ್ತು, ಶ್ರಮಪಟ್ಟು ಕೊಂಡುಕೊಳ್ಳಬೇಕು.


ಕುಟುಂಬ, ಮಕ್ಕಳು ಜೊತೆಗಿದ್ದಾಗ ಜೋಪಾನ

ಕುಟುಂಬದೊಂದಿಗೆ ಪ್ರವಾಸಕ್ಕೆಂದು ಬಂದಾಗ ಅಲ್ಲಿ ವಯಸ್ಸಾದವರು, ಮಕ್ಕಳೆಲ್ಲಾ ಇರುತ್ತಾರೆ. ಇವರ ಜೋಪಾನದ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರ ಮೇಲೆಯೇ ಇರುತ್ತದೆ. ನಾನು ಪಾರ್ವತಿ ವ್ಯಾಲಿಯಲ್ಲಿ ವಯಸ್ಸಾದ ದಂಪತಿಯನ್ನು ನೋಡಿದೆ. ಅವರಿಗೆ ಸುತ್ತಾಡುವ ಆಸೆ. ಆದರೆ ಆರೋಗ್ಯ ಸ್ಪಂದಿಸುತ್ತಿಲ್ಲ. ಹೀಗಾಗುವ ಸಾಧ್ಯತೆ ಹೆಚ್ಚಿನವರಿಗೆ ಇರುತ್ತದೆ. ಅದಕ್ಕಾಗಿ ಪ್ರವಾಸಕ್ಕೂ ಮೊದಲು ವಾಕಿಂಗ್ ಮಾಡಿ ತಯಾರಾಗಬೇಕು. ಏಕಾಏಕಿ ಪ್ರವಾಸಕ್ಕೆ ಬರುವುದು ಅಷ್ಟು ಸೂಕ್ತವಲ್ಲ. ಇನ್ನು ಮಕ್ಕಳ ವಿಚಾರದಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಅವರಲ್ಲಿ ಚಳಿಯನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಇದ್ದು, ಬೆಚ್ಚನೆಯ ಉಡುಪು, ಸೂಕ್ತವಾದ ಆಹಾರ ನೀಡುವುದು ಅವಶ್ಯಕ.


ಮಜಾ ನೀಡಿದ ಬೈಕ್ ರೈಡಿಂಗ್

ಜಿಸ್ಪಾದಲ್ಲಿ ಬೈಕ್ ರೈಡ್ ಮಾಡಿದೆವು. ಅಲ್ಲಿನ ವ್ಯೆವ್ ತುಂಬಾ ಸೂಪರ್. ಈ ರೀತಿ ಬೈಕ್ ರೈಡಿಂಗ್ ಮಾಡುವವರಲ್ಲಿ ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ಇದ್ದರು ಎನ್ನುವುದೇ ಖುಷಿ. ಸುತ್ತಲೂ ಕಾಡು, ಕಡಿದಾದ ರಸ್ತೆ, ಅಲ್ಲಲ್ಲಿ ಸಿಗುವ ಊರುಗಳು, ಕತ್ತೆಗಳ ಓಡಾಟ, ದಟ್ಟ ಹಸಿರು, ಹಿಮ, ಚಳಿ, ಅಲ್ಲಲ್ಲಿ ಸಿಗುವ ವಿಶೇಷ ಪ್ರಾಣಿ-ಪಕ್ಷಿಗಳು ಹೀಗೆ ಎಲ್ಲವೂ ಸೇರಿಕೊಂಡು ನಮ್ಮೊಳಗೆ ಹಿಮಾಚಲ ಪ್ರದೇಶ ಇಳಿದುಬಿಡುತ್ತದೆ.


ಹಿಮಾಚಲ ಪ್ರದೇಶದಲ್ಲಿ ಸುತ್ತಾಡಿದ ಜಾಗಗಳೆಲ್ಲಾ ನನ್ನೊಳಗೆ ಆಧ್ಯಾತ್ಮಕ ಭಾವ ಉಂಟು ಮಾಡಿವೆ. ಅಲ್ಲಿನ ಜಾಗಗಳನ್ನು ಮನಸಾರೆ ನೋಡಿದರೆ ಸ್ವರ್ಗವೇ ಎದುರಾದಂತೆ ಭಾಸವಾಗುತ್ತದೆ. ಬೆಳಿಗ್ಗೆ ಎದ್ದು ಬೆಟ್ಟಗಳನ್ನು ನೋಡುವುದು, ಮೌನವಾಗಿ ಮುಂದೆ ನಿಂತು ಕಣ್ತುಂಬಿಕೊಳ್ಳುವುದೆಲ್ಲವೂ ವಿಶೇಷ ಅನುಭೂತಿ.

– ಹರ್ಷಿಕಾ ಪೂಣಚ್ಚ, ನಟಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!