Mysore
33
few clouds

Social Media

ಭಾನುವಾರ, 05 ಏಪ್ರಿಲ 2026
Light
Dark

ವನಿತೆ ಮಮತೆ: ನೆನಪುಗಳಿಗೆ ಜಾರಿಸಿದ ಶುಭಾಷಯ ಪತ್ರ

 

 ಎಂ.ಕೆ. ನಂದಿನಿ,

ಟೆಲಿಕಾಂ ಕಾಲೋನಿ, ಮೈಸೂರು

ಮನೆಯ ಬೀರುವನ್ನು ಶುಚಿಗೊಳಿಸುವಾಗ ಸಿಕ್ಕ ಶುಭಾಷಯ ಪತ್ರವೊಂದು ಮನಸ್ಸಲ್ಲಿ ಎಷ್ಟೆಲ್ಲಾ ಭಾವಗಳನ್ನು ಹುಟ್ಟಿಹಾಕಿತು. ಹಳೆಯ ನೆನಪುಗಳನ್ನು ಕೆದಕಿತು. ಅಂದು-ಇಂದುಗಳನ್ನು ಎದುರಾಬದುರ ಇಟ್ಟು ತುಲನೆ ಮಾಡುವಂತೆ ಮಾಡಿತು. ಅದೊಂದು ಶುಭಾಷಯ ಪತ್ರಕ್ಕೆ ಅಷ್ಟು ತಾಕತ್ತಿತ್ತು.

ಹೌದು, ೧೯೯೯ನೇ ವರ್ಷ ಅಂದರೆ ೧೯ನೇ ಶತಮಾನದ ಕಡೆ, ಇಪ್ಪತ್ತನೇ ಶತಮಾನದ ಹೊಸ್ತಿಲು. ಅದಕ್ಕೆ ಶುಭ ಕೋರಲು ನನ್ನ ಮೂರನೇ ಸಹೋದರಿಗೆ ಅವಳ ಗೆಳತಿ ನೀಡಿದ್ದ ಗ್ರೀಟಿಂಗ್ ಕಾರ್ಡ್ ಅದಾಗಿತ್ತು. ಬರೋಬ್ಬರಿ ೨೩ ವರ್ಷಗಳ ಹಿಂದಿನ ನೆನಪು.

ಪತ್ರ ನನ್ನ ಸಹೋದರಿಯದ್ದೇ ಆಗಿದ್ದರೂ ಅದೇ ರೀತಿಯ ಪತ್ರಗಳು ನನಗೂ ಬಂದಿದ್ದವು, ನಾನೂ ಬರೆದಿದ್ದೆ. ಬಹುಶ ನಮ್ಮ ತಲೆಮಾರಿನ ಎಲ್ಲರೂ ಇದೊಂದು ಚೆಂದದ ಅನುಭವವನ್ನು ಕಟ್ಟಿಕೊಂಡಿರುತ್ತಾರೆ. ಅವುಗಳು ಹೊರಗೆ ಬಂದು ಮೆಲುಕು ಹಾಕುವಂತೆ ಆಗಲು ಈ ರೀತಿಯ ಕಾರಣಗಳು ಸಿಗಬೇಕು ಅಷ್ಟೆ.

ಆಗೆಲ್ಲಾ ಹೊಸ ವರ್ಷ ಬಂತೆಂದರೆ ಶುಭಾಷಯ ಪತ್ರಗಳನ್ನು ಕೊಳ್ಳುವುದೇ ಕೆಲಸ. ಅತ್ಯಾಪ್ತರು, ಆಪ್ತರು, ಸಾಮಾನ್ಯ ಸ್ನೇಹಿತರೆಂದು ಗುರುತು ಮಾಡಿಕೊಂಡು ಬಗೆ ಬಗೆಯ ಬೆಲೆಯ ಕಾರ್ಡ್‌ಗಳನ್ನು ಕೊಂಡು ಅದರಲ್ಲಿ ಕವಿತೆಗಳನ್ನು ಬರೆದು ಕಳಿಸುವ ಖುಷಿಯೇ ಬೇರೆ. ಬರೆಯುವಾಗ ಮನಸ್ಸಲ್ಲಿ ಮೂಡುತ್ತಿದ್ದ ಭಾವ, ಪತ್ರದ ಜೊತೆಗೆ ಸೇರಿಸಿ ಕಳಿಸುತ್ತಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು.

ಬರೆದು ಮುಗಿಸಿದ ಮೇಲೆ ಸ್ಟಾಂಪ್ ಅಂಟಿಸಿ ಅಂಚೆ ಪೆಟ್ಟಿಗೆಗೆ ಹಾಕಿ ಬಂದ ಮೇಲೆ ಏನೋ ಒಂದು ರೀತಿಯ ಸಂತಸ ಮನಸ್ಸಿಗೆ. ಅದಾದ ಮೇಲೂ ಪತ್ರ ಅವರ ವಿಳಾಸಕ್ಕೆ ಸರಿಯಾಗಿ ತಲುಪಿದೆಯೇ? ಇಲ್ಲವೇ? ಎನ್ನುವ ಆತಂಕ ಮತ್ತೊಂದೆಡೆ.

ಶುಭಾಷಯ ಪತ್ರದಲ್ಲಿ ಬರೆಯುವಾಗ ಭಾವ ಲೋಕದಲ್ಲಿ ವಿಹರಿಸಿದಂತಾಗುತ್ತಿತ್ತು. ಗೆಳೆತನ ಗಟ್ಟಿಯಾಗುತ್ತಿದೆ ಎನ್ನುವ ಭಾವ ವ್ಯಕ್ತವಾಗುತ್ತಿತ್ತು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮೆಸೇಜ್‌ಗಳನ್ನು ದಬ್ಬಿ ಶುಭಾಷಯ ಹೇಳುವುದು ಜಾಲ್ತಿಗೆ ಬಂದಿದೆ. ಇಂದಿನವರಿಗೆ ಇದು ಇಷ್ಟವಾಗಿರಬಹುದು. ಅಥವಾ ಈಗಲೂ ಹಲವರು ಕಾರ್ಡ್‌ನಲ್ಲಿ ಬರೆದು ಶುಭಾಷಯ ಹಂಚಿಕೊಳ್ಳುತ್ತಿರಬಹುದು. ಆದರೆ ಇವೆಲ್ಲವೂ ಬದುಕಿನ ಘಟ್ಟದ ಸುಮಧುರ ಭಾವಗಳು. ಬದುಕಿನಲ್ಲಿ ಎಲ್ಲರ ಬುತ್ತಿಯಲ್ಲೂ ಇರಲೇಬೇಕಾದ ಸುಂದರ ತವಕಗಳು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!