-ಭಾರತಿ ನಾಗರಮಠ
ನಿಂಬೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ‘ಸಿ’ ಇರುತ್ತದೆ. ಇದು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಂಬೆ ರಸ ದೇಹದ ವಿಷಕಾರಕಗಳನ್ನು ಹೊರ ಹಾಕಲು ನೆರವಾಗುತ್ತದ್ದಲ್ಲದೇ ಜೀರ್ಣ ಕ್ರಿಯೆ ಸುಲಭಗೊಳಿಸುತ್ತದೆ. ಬೇಸಿಗೆಯಲ್ಲಿ ವಾರಕ್ಕೆ ಮೂರು ಸಲ ನಿಂಬೆಸಾರು ಮಾಡಿ ಸವಿದರೆ ದೇಹವನ್ನು ತಂಪಾಗಿಡಲು ಸಹಕಾರಿ.
ಬೇಕಾಗುವ ಪದಾರ್ಥಗಳು:
* ಎರಡು ಕಪ್ ನೀರು
* ಒಂದು ಮಧ್ಯಮ ಗಾತ್ರದ ಲಿಂಬೆಹಣ್ಣು
* ರುಚಿಗೆ ತಕ್ಕಷ್ಟು ಉಪ್ಪು
* ಮೂರು ಚಮಚ ಬೆಲ್ಲ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ಒಂದು ಚಮಚದಷ್ಟು ಸಾಸಿವೆ, ಜೀರಿಗೆ ಮತ್ತು ಮೆಂತ್ಯಕಾಳು
ಮೂರು ಹಸಿಮೆಣಸಿನ ಕಾಯಿ
ಒಂದು ಚಿಟಿಕೆ ಇಂಗು
ಒಂದು ಚಿಕ್ಕ ಚಮಚ ಅರಿಶಿಣಪುಡಿ
ಎರಡು ಗರಿ ಕರಿಬೇವಿನ ಎಲೆ
ಎರಡು ಚಮಚದಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು.
ಒಂದು ಟೇಬಲ್ ಚಮಚ ಅಡುಗೆ ಎಣ್ಣೆ
ನಿಂಬೆಹಣ್ಣಿನ ಸಾರು ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ 2 ಕಪ್ ನೀರು ಕುದಿಯಲು ಇಟ್ಟು, ಅದಕ್ಕೆ ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ಲಿಂಬೆ ಹಣ್ಣಿನ ರಸ ಬೆರೆಸಿ ಒಂದು ಕುದಿ ಕುದಿಸಿ ಗ್ಯಾಸ್ ಆಫ್ ಮಾಡಬೇಕು.
ಒಗ್ಗರಣೆಗಾಗಿ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯ್ದ ನಂತರ ಅದಕ್ಕೆ ಒಂದು ಚಮಚದಷ್ಟು ಸಾಸಿವೆ, ಜೀರಿಗೆ, ಮೆಂತ್ಯಕಾಳು ಹಾಕಿ ಅದು ಚಟಪಟ ಶಬ್ಧ ಬಂದ ಮೇಲೆ ಅದಕ್ಕೆ ಹೆಚ್ಚಿಟ್ಟುಕೊಂಡ ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೊಪ್ಪು ಹಾಕಬೇಕು. ಕೊನೆಯದಾಗಿ ಇಂಗು ಮತ್ತು ಅರಿಸಿಣಪುಡಿ ಬೆರೆಸಿ ಗ್ಯಾಸ್ ಆಫ್ ಮಾಡಬೇಕು. ನಂತರ ಅದಕ್ಕೆ ಕುದಿಸಿಟ್ಟ ಲಿಂಬೆ ಹಣ್ಣಿನ ಮಿಶ್ರಣ ಸೇರಿಸಿ ಅದರ ಮೇಲೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಲಿಂಬೆಸಾರು ಸಿದ್ಧ.