Mysore
20
overcast clouds
Light
Dark

ನಮ್ಮೂರ ಕುಂತಿಗೆ ಹುಚ್ಚೆಳ್ಳು ಹೂವಿನ ಅಲಂಕಾರ

ಕರೋನಾ ಕಾಲದ ತಲ್ಲಣಗಳು, ಮರಳಿ ಹಳ್ಳಿ ಬದುಕಿನತ್ತ ಮತ್ತೆ ನಮ್ಮ ಕೈಬೀಸಿವೆ. ನಗರ ಬದುಕಿನ ಅನಾರೋಗ್ಯ, ಅಶಾಂತಿ, ಏಕಾಂಗಿತನ, ಆಹಾರ ಕಲಬೆರಕೆ, ಹವಾಮಾನ ವೈಪರೀತ್ಯ ಮತ್ತೆ ಹಳ್ಳಿ ಬದುಕಿನ ಆಸೆ ಚಿಗುರೊಡೆಸಿವೆ. ಬೆಳಕಿನ ಅಬ್ಬರದಲಿ ಕತ್ತಲ ತೆಗಳುತ್ತ ನಡೆದದ್ದು ಅಂಧಕಾರಕ್ಕೆ ಎಂದು ಅರಿವಾದಾಗ ಸರಳತೆಯ, ಸಹಬಾಳ್ವೆಯ ನೆಮ್ಮದಿಯ ಬದುಕೊಂದು ಎಲ್ಲರ ಎದೆಯೋಳಗೆ ಮೆಲ್ಲಗೆ ಮೊಳಕೆಯೊ ಡೆಯುತ್ತಿದೆ.  

ದೇವು ಶಿರಮಳ್ಳಿ

devushira@gmail.com

ಈ ಕತ್ತಲೆಗು ಬೆಳಕಿಗು ಯಾವಾಗಲೂ ಒಂದು ತಿಕ್ಕಾಟ. ಗೆದ್ದದ್ದು ಬೆಳಕೆಂದು ಎಲ್ಲರೂ ಬೆಳಕನ್ನೇ ಅಪ್ಪಿಕೊಂಡರು. ಕತ್ತಲೆಂದರೆ ಭುಂ, ದುಃಖ, ಕೆಡಕು, ಸೋಲು, ಅಜ್ಞಾನ ಎಂದು ಬಗೆದರೂ ಬೆಳಕ ಆಯ್ದುಕೊಂಡಿದ್ದು ಕತ್ತಲೆ ಗರ್ಭದಲ್ಲಿಯೇ ಅಲ್ಲವೆ? ಕತ್ತಲ ರುಚಿ ಕಂಡವರಿಗಷ್ಟೇ ಗೊತ್ತು. ಕತ್ತಲ ಬೀದಿಯಲಿ ಮಳೆ ಸುರಿವಾಗ ಮೌನದಲ್ಲಿ ಇಂಪನಾಲಿಸುವುದೆಷ್ಟು ಚೆಂದ. ಮಿಂಚುಹುಳ ಕಾಣಲೊಂದು ಕತ್ತಲು ಬೇಕು. ಗಂಟೆಗಟ್ಟಲೇ ಕರೆಂಟು ಹೋಗಿ ಆ ಕತ್ತಲೆ ಮನೆಯ ಹಜಾರದ ಮಧ್ಯೆ ಸಣ್ಣ ದೀಪವಿಟ್ಟು ಕತ್ತಲೆಯ ಮೂಲೆಗಳಲ್ಲಿ ಕೂತು ಹರಟುವ ಮಕ್ಕಳು, ಹೆಂಗಳೆಯರು ಎಷ್ಟು ಚಂದ! ಪ್ರಕೃತಿಯ ಚೆಲುವೊಂದು ಸೃಷ್ಟಿಗೊಳ್ಳುವುದು ಕತ್ತಲ ಗರ್ಭದಲ್ಲೇ ಅಲ್ಲವೇ? ಕತ್ತಲೆಂದರೆ ಅದೊಂದು ಮುಗಿಯದ ಪ್ರೀತಿ. ನಿರಾಕಾರ, ನಿಶ್ಕಲ್ಮಶ, ಎಲ್ಲ ಮೇಲು-ಕೀಳು ತರತಮಗಳ ಅಳಿಸಿ ಬಿಡುವ ವಾಯಾವಿ. ಯಾವುದನ್ನೂ ಜಗಕೆ ಸಾರದ ತಾನಾಗೇ ಉಳಿವ ಚೆಲುವಿನ ಪರಿ.

ಸಾಲು ಸಾಲು ದೀಪಗಳೆಂದರೆ ಬೆಳಕಿನ ಹಬ್ಬವೇ? ಹಬ್ಬವೆಂದರೆ ಬರಿಯ ಆವರಣೆಯೆ ಚಂದದ ಪದ್ಯ ಬರೆದ ಕೈಗಳು, ಚಿತ್ರ ಬರೆದ, ಚೆಂದದ ಫೋಟೋ ಕ್ಲಿಕ್ಕಿಸುವ ಕಣ್ಣುಗಳು, ಮೂರ್ತಿಯೊಂದ ಕೆತ್ತಿ ನಿಲ್ಲಿಸಿದ ಚಿತ್ತ, ಹಾಡೊಂದ ಕಟ್ಟಿದ ಮುದ್ದು ಮನಸ್ಸು, ಶಿಖರವೇರಿ ನಿಂತವನೊಬ್ಬನು ಕಂಡ ಗೆಲುವು ಇವು ಬೆಳಕಲ್ಲವೇ, ಇಂತಹ ಬೆಳಕೊಂದು ಹಬ್ಬವಲ್ಲವೆ. ಕಂಡ ಪುಟ್ಟ ಪುಟ್ಟ ಕನಸುಗಳು ಕೈಗೆಟುಕಿದಾಗ ಕುಣಿದಾಡಿದ ಸಂಭ್ರಮದ ಬೆಳಕದು ಹಬ್ಬ.

ಆದರೂ ನಮಗೆ ಹಬ್ಬವೆಂದರೆ ಉಡುಗೆ-ತೊಡುಗೆ, ಮೃಷ್ಟಾನ್ನ ಭೋಜನ, ನೆಂಟರು, ಬಂಧುಬಳಗದವರ ಜೊತೆಗೆ ಸಂಭ್ರಮ, ಸಡಗರ. ಅಜ್ಜನ ಕಾಲದಲಿ ವರುಷಕೆ ಎರಡೇ ಬಾರಿ ಮನೆಮಂದಿಗೆಲ್ಲ ಬಟ್ಟೆ ತರುತ್ತಿದ್ದದ್ದು. ಹಾಗಾಗಿ ಆ ದಿನಗಳಿಗಾಗಿ ಎಲ್ಲರೂ ಕಾಯುತ್ತಿದ್ದರು. ಕಾದು ಟೈಲರನ ಅಂಗಡಿಗೆ ನಾಲ್ಕಾರು ಬಾರಿ ಅಲೆದು ಕೊನೆಗೆ ಬೆಳಗೆದ್ದು ಮಿಂದು ಹೊಸ ಬಟ್ಟೆ ತೊಟ್ಟರಲ್ಲವೇ ಹಬ್ಬದ ಸಂಭ್ರಮ. ಆ ಸಂಭ್ರಮದಲ್ಲಿ ಅಂದು ಕಂಡ ಬೆಳಕೆಲ್ಲಿ ಹೋಯಿತು? ಮಾರುಕಟ್ಟೆಗೆ ಈಗ ಹೋಗುವುದೇ ಬೇಡ, ಕುಂತಲ್ಲೇ ಮನೆಯಿಂದಲೋ, ಆಫೀಸಿನಿಂದಲೋ ಹಣ ಸಂದಾಯವಾಗಿ ಕಂಡ ಕಂಡ ಬಟ್ಟೆಗಳು ಮಗೆ ದಾಳಿ ಇಡುತ್ತಿವೆ. ಆದರೂ ಹಬ್ಬದ ಸಂಭ್ರಮವಿಲ್ಲ, ಸಡಗರವಿಲ್ಲ.

ಕಿಸೆತುಂಬಿ ತುಳುಕುವಾಗ ಬೇಕೆಂಬ ತಿನಿಸು ಕೈಬೆರಳ ತುದಿಗೆ ನಿಲುಕುವಾಗ ಹಬ್ಬಕ್ಕೆಂದೇ ಬರುವ ಕಜ್ಜಾಯ, ಹೋಳಿಗೆ, ಕರ್ಜಿಕಾಯಿ, ಕಡಬು, ಸಿಕ್ಕಿನುಂಡೆ, ಶಾವಿಗೆ ಈಗ ಮಾವು ಎಲ್ಲ ಋತುಗಳಿಗೂ ಸಿಕ್ಕಂತೆ ಸಿಕ್ಕರೇನು ಚೆಂದ? ಹಬ್ಬಕ್ಕೆಂದೇ ಕಳೆದ ಕತ್ತಲೆಗಳಲ್ಲಿ ಧ್ಯಾನದಲ್ಲಿ ಸಿದ್ಧಗೊಳ್ಳುತ್ತಿದ್ದ ತಿನಿಸುಗಳವು. ಹಬ್ಬದ ಅಡಿಗೆ ಅದು ಆ ಹಬ್ಬಕ್ಕೆಂದೇ ಹಬ್ಬಕ್ಕಷ್ಟೇ ವಿಶೇಷವಾಗಿ ವರುಷಕೊಮ್ಮೆ ಅದರ ಆಗಮನ. ಆಗಲೇ ಅದಕೆ ಅಷ್ಟೊಂದು ಕಾಯುವಿಕೆ, ಅಷ್ಟೊಂದು ರುಚಿ.

ಬಂಧುಬಳಗವಿಲ್ಲದ ಹಬ್ಬವೊಂದು ಹಬ್ಬವೇ? ಬಡತನವೋ, ಸಿರಿತನವೋ, ಒಡಹುಟ್ಟಿದವರ, ಚಿಗುರೊಡೆದ ರೆಂಬೆ, ಕೊಂಬೆಯಂತಹ ನೆಂಟರಿಷ್ಟರ ಕರೆದು, ಕಷ್ಟ-ಸುಖಗಳ ನಾಲ್ಕು ಮಾತನಾಡಿ, ಜೊತೆಯಲ್ಲಿ ಕೂತುಂಡರಲ್ಲವೆ ಹಬ್ಬ. ಜನರೇ ಇಲ್ಲದ ಮನೆಯ ತುಂಬಾ ಶೃಂಗಾರಕ್ಕೆಂದೇ ಹಣತೆಗಳ ಇಟ್ಟರೆ ಬೆಳಕಾದೀತೆ?

ನಮ್ಮ ಹಳ್ಳಿಗರು ಇರುವ ಕಾಸಿಗೆ ಇನ್ನೊಂದಿಷ್ಟು ಕಾಸು ಕೊಡೆಂದು ಲಕ್ಷ್ಮೀ ಪೂಜೆ ಮಾಡಿದ್ದು ಕಾಣೆ. ದೀಪಾವಳಿಗೆ ನಮ್ಮಳ್ಳಿಯಲ್ಲಿ ಕೊಂತಿ ಪೂಜೆ (ಕುಂತಿ). ನಮ್ಮ ಕುಂತಿಗೆ ಪಟ್ಟಣಿಗರ ವರಲಕ್ಷ್ಮಿಯಂತೆ ನೋಟಿನ ಹಾರ, ಬಂಗಾರದ ನಾಣ್ಯ ಕೇಳುವುದಿಲ್ಲ. ಕುಂತಿಗೆ ಹುಚ್ಚೆಳ್ಳು ಹೂವಿನ ಚಂದದ ಅಲಂಕಾರ. ಕುಂತಿಯೊಂದು ಸುಂದರ ಮರದ ಬೊಂಬೆ. ಚಿನ್ನ, ಬೆಳ್ಳಿಯ ವಿಗ್ರಹವಲ್ಲ. ಅವಳು ತವರಿಗೆ ಬರುವುದು ದೀಪಾವಳಿಯಲ್ಲಿ. ಕುಂತಿ ತವರಿಗೆ ಬಂದಳೆಂದರೆ ನಮಗೆ ಸಡಗರ ಸಂಭ್ರಮ. ಕುಂತಿ ಸಿಂಗಾರಗೊಂಡು ಕೂತಿದ್ದು ಕತ್ತಲ ನಡುಬೀದಿಯಲ್ಲಿ. ಒಂದು ಮರದ ಪಟ್ಟ ಮಂಚದ ಮೇಲೆ ಸೀರೆಯುಟ್ಟು ಸಿಂಗಾರಗೊಂಡ ಕೊಂತಮ್ಮ. ಅವಳಿಗೆ ಮನೆ ಮನೆಯಿಂದ ಬರುವುದು ಒಂದೊಂದು ದೀಪ. ನಮ್ಮ ಬಾಲ್ಯದಲ್ಲಿ, ನನ್ನಜ್ಜಿ ಈ ಕುಂತಿ ಪೂಜೆಗೆ ಒಂದು ಕೈಲಿ ದೀಪವಿಡಿದು ಇನ್ನೊಂದು ಕೈ ಮೊಮ್ಮಕ್ಕಳ ಹಿಡಿದು ಕರೆದೊಯ್ಯುತ್ತಿದ್ದಳು. ಹೀಗೆ ಎಲ್ಲ ಮನೆಯ ಅಜ್ಜಿಯರು, ಮೊಮ್ಮಕ್ಕಳು ತಂದಿಟ್ಟ ಪುಟ್ಟ ಪುಟ್ಟ ದೀಪಗಳ ಬೆಳಕಲ್ಲಿ ಕೊಂತಮ್ಮ ಹುಚ್ಚೆಳ ಹೂ ಮುಡಿದು, ಎಷ್ಟು ಚೆಂದ ಕಾಣುತ್ತಿದ್ದಳು! ಯಾವ ನೈವೇದ್ಯದ ಆಡಂಬರವಿಲ್ಲ. ಎಲ್ಲರ ಮನೆಯ ದೀಪಗಳ ಬೆಳಕಿನಲಿ ಕೊಂತಮ್ಮನ ನೋಡೋದೇ ಚಂದ. ದಿನ ಕತ್ತಲಾದರೆ ಹೀಗೆ ಸಿಂಗಾರಗೊಂಡು ನಡುಬೀದಿಯಲಿ ಕುಂತ ಕೊಂತಮ್ಮಗೆ ಎಲ್ಲರೂ ಪದವ ಹಾಡುತ್ತಿದ್ದರು. ಹೀಗೆ ದೀಪಾವಳಿಗೆ ತವರಿಗೆ ಬಂದ ಕುಂತಿ ಷಷ್ಠಿಯ ಜೋರು ಪೂಜೆಯಲಿ ಕತ್ತಲೆ ಕುಂತಿಯಾಗಿ ಷಷ್ಠಿ ಹಬ್ಬದಂದು ಗಂಡನ ಮನೆಗೆ ಹೊರಡುತ್ತಾಳೆ. ಮತ್ತೆ ಮುಂದಿನ ದೀಪಾವಳಿಗೆ ಅವಳು ಬರುವುದನ್ನು ಕಾಯುವುದೊಂದು ಸಂಭ್ರಮ.

ದೀಪಾವಳಿಯಲಿ ಊರ ಮುಂದಣ ಅರಳಿಮರಕ್ಕೆ ದೊಡ್ಡ ಏಣಿಗಳು ಜೋಕಾಲಿಗಳಾಗುತ್ತಿದ್ದವು. ಊರಿನ ಚಿಕ್ಕಮಕ್ಕಳಲ್ಲಿ ಏಣಿಯಂತಹ ಜೋಕಾಲಿಯಲಿ ಕುಳಿತು ಉಯ್ಯಾಲೆ ಆಡುತ್ತ ನಕ್ಕಿದ್ದು ಸಾವಿರ ದೀಪಗಳ ಬೆಳಗಿಸುತ್ತಿತ್ತು. ನೋಡುಗರ ಕಣ್ಣಿಗಬ್ಬದಂತಿತ್ತು.

ಹಳ್ಳಿಗರ ಗೋವು ಪೂಜೆ ಎಂದರೆ ಅವು ದೇವರು, ಧರ್ಮವೆಂದಲ್ಲ. ಎಲ್ಲ ಋತುಗಳಲ್ಲೂ ನಮ್ಮೊಟ್ಟಿಗೆ ಕಷ್ಟ ಸುಖಗಳಲ್ಲಿ ನಮ್ಮೊಟ್ಟಿಗೆ ನಡೆವರೆಂದು ಒಂದು ಕೃತಜ್ಞತೆಯ ನಮಸ್ಕಾರ. ಹಾಗಾಗಿ ಮನೆಯ ಎಲ್ಲ ಗೋವುಗಳಿಗೆ ಮೊದಲ ಪೂಜೆ. ತಾವು ಉಂಬುವ ಮೊದಲು ಹಬ್ಬದೂಟದ ಮೊದಲ ನೈವೇದ್ಯ. ಸಂಜೆ ಬೆಂಕಿ ಬೆಳಕಿನಲ್ಲಿ ಇವರೊಂದಿಗೆ ಜೋರು ಕುಣಿತ ಹುಡುಗರದ್ದು. ಎತ್ತುಗಳಿಗೆ, ಹಸುಗಳಿಗೆ ವಿಶೇಷವಾಗಿ ಬಣ್ಣಗಳಿಂದ ಅಲಂಕರಿಸಿ, ಕೆಲವು ಊರುಗಳಲ್ಲಿ ಸಂಕ್ರಾಂತಿಯಲಿ ಕಿಚ್ಚಾಯಿಸಿದಂತೆ ದೀಪಾವಳಿಯಲ್ಲೂ ಕಿಚ್ಚಾಯಿಸುತ್ತಾರೆ.

ದೀಪಾವಳಿ ಹಬ್ಬವೆಂದರೆ ಮೂರು ದಿನಗಳಲ್ಲೂ ಪಟಾಕಿ ಸುಡುವ ಹಬ್ಬವಲ್ಲ. ಮೊದಲ ದಿನ ತಮ್ಮ ತಮ್ಮ ಮನೆದೇವರ ನೆನೆದು ಅಥವಾ ಬೆಟ್ಟದ ಮಹದೇಶ್ವರನಿಗೆ ಅವಾವಾಸೆಯ ಪೂಜೆ, ಗೋಪೂಜೆ, ನಕ್ಷತ್ರದಂತೆ ಎಳ್ಳು ತುಂಬಿದ ಕಜ್ಜಾಯದ ಸಿಹಿ ಭೋಜನ. ಎರಡನೆಯ ದಿನ ನಾಡ ಅವಾವಾಸೆಯ ಹಬ್ಬ. ಶಾಸ್ತ್ರಕ್ಕಾದರೂ ದೋಸೆ ಕಲ್ಲಿನ ಮೇಲೆ ಒಂದು ದೋಸೆ ಬರೆದು, ಹೊರಳು ಕಲ್ಲೊಮ್ಮೆ ಮಗ್ಗುಲಾಗಿ ಹೊರಳಬೇಕೆಂಬ ಶಾಸ್ತ್ರ. ಮೂರನೆಯ ದಿನಕ್ಕೆ ದೀಪಾವಳಿಯ ಸಂಭ್ರಮ. ಮನೆಮುಂದಣ ಅಂಗಳ ಸಗಣಿಯಲಿ ಮಿಂದು ರಂಗೋಲಿಗಳ ಚಿತ್ತಾರ. ರಂಗೋಲಿಯ ಮೇಲೆ ರಾರಾಜಿಸುವ ಪೆಂಜು. ಮನೆಯ ಜಗುಲಿಯಲಿ ಮಿನುಗುವ ನಕ್ಷತ್ರಗಳಂತಹ ಎರಡು ಪುಟ್ಟ ದೀಪಗಳು ಸಣ್ಣ ಬೆಳಕಿನ ದೊಡ್ಡ ಕತ್ತಲೆಯಲ್ಲಿ ಮನನೊಂದು ಕಲಾಕೃತಿ ಎನಿಸದಿರದು.

ಇತ್ತಿತ್ತಲಾಗಿ ಹಳ್ಳಿಗಳ ಹಬ್ಬಗಳು ರಂಗು ಕಳೆದುಕೊಳ್ಳುತ್ತಿವೆ. ಮೊಬೈಲ್ ತುಂಬಾ ಸದ್ದು ಮಾಡುವ ದೀಪಾವಳಿ ಸಂದೇಶಗಳು, ಮಾಲಿನ್ಯ ಮರೆತು, ಪಂಜಿನ ಬೆಳಕು ಮರೆತು ನಗರದ ಜನರಿಗೇನು ಕಮ್ಮಿ ಇಲ್ಲ ಎಂಬಂತೆ ಮೂರು ದಿನಗಳು ಸದ್ದು ಮೊಳಗಿಸುವ ಪಟಾಕಿಗಳು, ಫೇಸ್ಬುಕ್, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ರಾರಾಜಿಸುವ ಸೆಲ್ಛಿಗಳು ಯಾವ ಸೆಲೆಬ್ರಿಟಿಗೂ ಕಡಿಮೆಯಿಲ್ಲ. ಹಬ್ಬಗಳಿಗೆ ನೆಂಟರಿಷ್ಟರಿಲ್ಲದೆ ಮನೆ ಹಜಾರದಲ್ಲಿ ಕುಳಿತ ಊರಗಲದ ಟಿವಿಯ ಜನರ ಸದ್ದು, ಹಬ್ಬಗಳನ್ನೇ ನುಂಗಿ ಬಿಟ್ಟಿದೆ. ಬೀದಿ ತುಂಬುತ್ತಿದ್ದ ಬಣ್ಣದ ರಂಗೋಲಿ, ಸಗಣಿಯ ಘಮಲು ಮಾಯವಾಗಿದೆ. ಅಂಗಡಿಯಿಂದ ತಂದ ಸಿಹಿ, ಖಾರ ತಿನಿಸುಗಳು ತಟ್ಟೆಗಳನ್ನು ಅಲಂಕರಿಸಿವೆ. ಎಲ್ಲ ಇದ್ದೂ ಏನೂ ಇಲ್ಲವೆಂಬ ಕೊರಗಿನಲಿ ಚೆಂದದ ಬದುಕೊಂದು ಸದ್ದಿಲ್ಲದೆ ಕರಗಿ ಹೋಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ