ಅಕ್ಷತಾ ಕೃಷ್ಣಮೂರ್ತಿ
‘ಇಸ್ಕೂಲು’ ಬಿಡುಗಡೆಯಾಗಿರುವ ಈ ಹೊತ್ತಲ್ಲಿ ಇಡೀ ಜೋಯಿಡಾದ ಕನ್ನಡ ಶಾಲೆಗಳ ಬಾಗಿಲುಗಳು ಏಕಕಾಲಕ್ಕೆ ತೆರೆದುಕೊಳ್ಳುತ್ತವೆ ಎಂದೇ ಅನಿಸುತ್ತದೆ. ಮೂಲಭೂತ ಸೌಕರ್ಯಗಳ ಕೊರತೆಯಿರುವ ಜೋಯಿಡಾದ ಅಣಶಿಯಲ್ಲಿ ಈ ಹೊತ್ತು ಮೈ ಕೊರೆಯುವಷ್ಟು ಚಳಿ. ಆಯಾ ಕಾಲದ ಬದಲಾವಣೆ ಕಂಡ ನನ್ನ ಮನಸ್ಸಿನಲ್ಲಿ ಅಣಶಿಯ ಕಾಡು ಹಾಗೆ ಅಚ್ಚೊತ್ತಿದೆ. ಅಲ್ಲಿನ ಪ್ರತಿ ಮರಗಳ ಎಲೆಗಳು ಅಲಗುವ ಸದ್ದು ನನ್ನೊಳಗೆ ಇದ್ದಂತೆ.
ಇಸ್ಕೂಲು ಪುಸ್ತಕ ರೂಪಗೊಂಡದ್ದು ಅಣಶಿಯಲ್ಲಿ ಮರ ಹೂ ಬಿಟ್ಟಷ್ಟೆ ಸಲೀಸಾಗಿ. ಅಷ್ಟೇ ಆಕಸ್ಮಿಕವಾಗಿ. ದೂರದೂರಿನಿಂದ ನಡೆದು ಬರುತ್ತಿದ್ದ ಶಾಲೆಯ ಮಕ್ಕಳ ಪುಟ್ಟ ಪಾರಿಜಾತದ ಪಾದಗಳು, ಕೊರೆಯುವ ಚಳಿಯಲ್ಲಿ ಸ್ವೆಟರ್ ಇಲ್ಲದೆ ಗಾಳಿಗೊಡ್ಡಿ ತಂಪನ್ನೆದುರಿಸುವ ಅವರ ಪುಟ್ಟ ದೇಹ, ಬೆನ್ನಿಗೊಂದು ದೊಡ್ಡ ಬ್ಯಾಗು ಏರಿಸಿಕೊಂಡು ಬೆಟ್ಟ ಹತ್ತಿಳಿಯುತ್ತ ಬರುವ ಶಾಲೆಯ ಹಾದಿ, ಕಾಡು ಪ್ರಾಣಿಗಳ ಉಸಿರಾಟ, ಹೆಜ್ಜೆ ಗುರುತು ನೋಡಿಯೆ ಇಲ್ಲಿಂದ ಇಂತಹುದ್ದೆ ಪ್ರಾಣಿ ಹಾದುಹೋಗಿರಬಹುದು ಎಂದು ಕೂತೂಹಲ, ಭಯ ಆತಂಕಗಳಿಂದ ನೋಡುವ ಅವರ ಕಣ್ಣು, ಮನೆಯಿಂದ ಶಾಲೆಗೆ ಬರುವ ದಾರಿಯಲ್ಲಿಯೆ ಮಕ್ಕಳು ಮನೆಯಿಂದ ತಿಂದು ಬಂದ ರೊಟ್ಟಿ ಕರಗಿ, ಶಾಲೆಗೆ ಬಂದು ತಲುಪಿದಾಗ ಸಿಗುವ ಕ್ಷೀರಭಾಗ್ಯ ಯೋಜನೆಯಡಿ ಹಾಲು ಕುಡಿಯುವ ಅವರ ಸಂತೃಪ್ತ ನಗೆ, ಶಿಕ್ಷಣದ ಜೊತೆ ಶಿಕ್ಷಕರ ಪ್ರೀತಿ ಪಡೆದು ಅವರು ಹಂಚಿಕೊಳ್ಳುವ ಕೆಲವು ಅಪೂರ್ವ ಸಂಗತಿಗಳು, ಮಧ್ಯಾಹ್ನದ ಬಿಸಿಯೂಟ ಸವಿಯುವ ಅವರ ಶಾಂತ ಮನಸ್ಸು …
ಇವೆಲ್ಲ ಶಿಕ್ಷಕಿಯಾಗಿ ನನ್ನೊಳಗೆ ಆವರಿಸತೊಡಗಿದಾಗಲೆ ಇಸ್ಕೂಲು ಹುಟ್ಟಿದ್ದು. ನಾನು ಶಾಲೆಗೆ ಹೋದದ್ದು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ. ಜನರೆ ತುಂಬಿರುತ್ತಿದ್ದ ಹಳ್ಳಿಯಲ್ಲಿ. ಆದರೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವುದು ಮರಗಳು ತುಂಬಿರುವ ಕಾಡಿನ ಹಳ್ಳಿಯಲ್ಲಿ. ಪ್ರತಿ ಕಾಲದ ಋತುಗಳ ಬದಲಾವಣೆಯೊಂದಿಗೆ ಆಗಾಗ ಹಠಾತ್ತನೆ ಎದುರಾಗುವ ಸಮಸ್ಯೆಗಳಿಗೆಲ್ಲ ಸಾಕ್ಷಿಯಾಗಿ ನಾನು ಮತ್ತು ನನ್ನ ಮಕ್ಕಳು ಜೊತೆಯಾಗಿ ಹದಿನಾರು ವರ್ಷ ಕಳೆದು ಹೋಗುತ್ತಿದೆ. ದಿನವೂ ಶಾಲೆಗೆ ಸಾಗುವಾಗ ಬಿದ್ದ ಎಲೆಗಳಷ್ಟೇ ನಾಜೂಕಾಗಿ ದಿನ ಕಳೆದದ್ದು ನನಗೂ ಗೊತ್ತಾಗಲೇ ಇಲ್ಲ. ಇಸ್ಕೂಲು ಬರೆದು ಮುಗಿದ ನಂತರ ಪುಸ್ತಕದ ಕರಡುಪ್ರತಿ ತಿದ್ದುವಾಗ ಬದುಕು ಬಹಳ ಮುಂದೆ ಬಂದು ಬಿಟ್ಟಿದೆ ಎಂದು ಹೊರಳಿ ನೋಡಿದರೆ ಅಲ್ಲಿಕಂಡದ್ದು ರಾಶಿ ರಾಶಿ ನೆನಪುಗಳ ಬುತ್ತಿ ಹಾಗೂ ಮಕ್ಕಳ ಪ್ರೀತಿ. ಒಂದರ್ಥದಲ್ಲಿ ಇಸ್ಕೂಲು ನನ್ನ ಜೀವನ ಚರಿತ್ರೆಯ ಭಾಗ ಎನ್ನಬಹುದು. ಅಲ್ಲಿ ಖುಷಿಯಿದೆ, ಸಂತೃಪ್ತಿಯಿದೆ, ಅಸಹಾಯಕತೆ, ನಲಿವು, ಶ್ರದ್ಧೆ, ನೋವು, ಅಳು, ಹರಟೆ, ಬುದ್ಧಿವಾದ ಎಲ್ಲ ಭಾವಗಳೂ ರಾಧಕ್ಕೋರು ಎನ್ನುವ ಪಾತ್ರದ ಜೊತೆಯಾಗಿ ಅರಳುತ್ತದೆ. ನನ್ನ ಶಾಲೆಯ ಮಕ್ಕಳ ಅಲೋಚನೆಯ ದಾರಿ ತೆರೆಯುತ್ತದೆ. ಅವರ ಹೆಸರುಗಳು ದಾಖಲಾಗುತ್ತ ಅವರು ಪುಸ್ತಕ ಹಿಡಿದು ಓದುವ ಸಂಭ್ರಮ ಕಂಡಿದ್ದೇನೆ.
(ಪುಸ್ತಕದ ಪ್ರಕಾಶಕರು: ಬೆಂಗಳೂರಿನ ಜನ ಪ್ರಕಾಶನ.ದೂರವಾಣಿ:೯೪೪೮೩ ೨೪೭೨೭ )