ಸ್ಮಿತಾ ಅಮೃತರಾಜ್ ಸಂಪಾಜೆ
ಒಂದು ಹಸಿ ಬೆಳಗು; ಹಾಗೇ ಆಲಾಪಿಸುತ್ತಾ ಸುರಿಯುವ ಮುಗಿಲು. ಕವಿತೆ ಸಣ್ಣಗೆ ಗುನುಗುತ್ತಾ ಎದೆಗಿಳಿಯುವ ಹೊತ್ತಿನ ನೀರವ ಮೌನವನ್ನು ಕಲಕಿ ಭೂಮಿ ಗುಡುಗಿ, ಗಡಗಡ ಅರೆಕ್ಷಣ ಅದುರಿದಾಗ ಇದು ಭೂಕಂಪನ ಅಂತ ಅಂದಾಜಿಸಿಕೊಳ್ಳಲು ಕ್ಷಣ ಕಾಲ ಹಿಡಿಯಿತು. ಎಲ್ಲವೂ ಸುಸ್ಥಿತಿಗೆ ಬಂದರೂ ಎದೆೊಂಳಗೊಂದು ಭೀತಿ ಹುಟ್ಟುಹಾಕಿ ಮತ್ತೆ ನಾನೇನೂ ಅಲುಗಿೆುೀಂ ಇಲ್ಲ ಅನ್ನುವಂತೆ ಭಯದ ಬಿತ್ತೊಂದು ಬಿತ್ತಿ, ಭೂಮಿ ಎಂದಿನಂತೆ ಮಗುಮ್ಮಾಗಿ ಕುಳಿತಿದೆ.
ಕವಿತೆೊಂಂದು ಎದೆಯ ಪಡಸಾಲೆಗೆ ಬಂದು ಮಳೆ ಹನಿ ನೋಡುತ್ತಾ ಪದ ಸಾಲಿನೊಳಗೆ ಕುಳಿತುಕೊಳ್ಳಲು ಹವಣಿಸುವ ಹೊತ್ತಿನಲ್ಲಿ ಇಂತಹ ಆತಂಕವೊಂದು ಸಂಭವಿಸಿದ ಮೇಲೆ ಕವಿತೆ ಬೆದರಿ ನಾಪತ್ತೆಯಾಗಿದೆ. ನಾನು ಕಂಗಾಲಾಗಿ ಕುಳಿತ್ತಿರುವೆ. ಕವಿತೆ ಇರದ ಜಾಗದಲ್ಲಿ ಬದುಕಲು ಸಾಧ್ಯವೇ?
ಕವಿತೆ ಎದೆಯ ದನಿಯಾದ ಹೊತ್ತಿನಿಂದ ಯಾವೊತ್ತೂ ಹೀಗೆ ಏಕಾಏಕಿ ಬಿಟ್ಟು ಹೋದ ನೆನಪೇ ಇಲ್ಲ. ಸಣ್ಣಗೆ ಮಳೆ ಹನಿಯುವಾಗ, ಹೂಬಿಸಿಲು ಟಿಸಿಲೊಡೆಯುವಾಗ ಅದಕೆ ಪದ ಹೊಸೆಯುವ ಹುಚ್ಚು ಆಸೆ. ಅಲ್ಲೆಲ್ಲೋ ಭೂಕುಸಿತ,ಭೂಕಂಪ,ಸುನಾಮಿ,ಜಲಸ್ಪೋಟ ಏನೇ ಸಂಭವಿಸಲಿ, ಪದ ಕಟ್ಟಿ ಸಾಂತ್ವಾನ ಹೇಳುತ್ತದೆ. ಭಯದ ಭಾವಕ್ಕೆ ಅಭಯ ನೀಡುವಂತೆ ಕವಿತೆ ಹೆಗಲ ತಬ್ಬುತ್ತದೆ. ಇಂತಿಪ್ಪ ಕವಿತೆ, ಭೂಮಿ ಕಂಪಿಸಿದ ಆ ಮುಂಜಾವಿನಿಂದ ತಪ್ಪಿಸಿಕೊಂಡು ಎತ್ತ ಹೋಗಿದೆ ಅಂತ ನಾನು ತಲೆಕೆಡಿಸಿಕೊಂಡು ಹೈರಾಣಾಗಿರುವೆ. ಈಗ ಪದೇ ಪದೇ ಭೂಮಿ ಕಂಪಿಸುವ ಸದ್ದು ಕೇಳಿಸುತ್ತಿದೆ. ಅಂತಹ ಅಪಾಯವೇನೂ ಇಲ್ಲ ಅಂತ ಭೂ ವಿಜ್ಞಾನಿಗಳು ಕಣಿ ಹೇಳಿದರೂ ಎದೆಯ ನಡುಕ ನಿಲ್ಲುತ್ತಿಲ್ಲ. ಭಯಪೀಡಿತರಾಗಿ ಜನರು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆಯಂತೆ. ಗುರುತು ಪರಿಚಯದವರೆಲ್ಲಾ ಫೋನಾಯಿಸಿ ,ನಿಮ್ಮಲ್ಲಿ ಭೂಕಂಪನವಂತೆ,ನಮ್ಮೂರಿಗೆ ಬಂದು ಬಿಡಿ ಅಂತ ಕಾಳಜಿ ತೋರಿಸುತ್ತಿದ್ದಾರೆ. ಆಗ ನಿಜಕ್ಕೂ ಈ ತನಕ ಇಲ್ಲದ ಭಯ ಶುರುವಾಗಿ ,ಈ ನಶ್ವರ ಬದುಕಿಗೂ ಅದೆಷ್ಟು ವ್ಯಾಮೋಹ ಅನ್ನುವ ವೇದಾಂತ ಒಳ ಹೊಕ್ಕು ಮನಸು ಮ್ಲಾನವಾಗುತ್ತದೆ.
ಇನ್ನು ಕೆಲವರಂತೂ ಈ ಹೊತ್ತಿನಲ್ಲಿ ,ಅದೇನು ಬರೆದ್ರಿ? ನಿಮಗೆ ಕವಿತೆ ಬರೆಯಲು ಹೊಸತೊಂದು ವಸ್ತು ಸಿಕ್ಕಿತ್ತಲ್ಲ ಅಂತ ಹೇಳುವುದು ಯಾವ ಅರ್ಥದಲ್ಲಿ ಅಂತ ಅರ್ಥಕ್ಕೆ ದಕ್ಕದಿದ್ದಾಗ ಇಲ್ಲಿ ಎಲ್ಲವೂ ಅರ್ಥವಿಲ್ಲದ್ದು ಅಂತ ಅರ್ಥಕ್ಕೆ ದಕ್ಕದಿದ್ದಾಗ ಇಲ್ಲಿ ಎಲ್ಲವೂ ಅರ್ಥವಿಲ್ಲದ್ದು ಅಂತ ಅನ್ನಿಸೋಕೆ ಶುರುವಾಗಿ ಶೂನ್ಯ ಆವರಿಸಿಕೊಳ್ಖುತ್ತದೆ.
ಒಂದರ್ಥದಲ್ಲಿ ಅವರು ಹೇಳುವುದರಲ್ಲೂ ಹುರುಳಿದೆ ತಾನೇ? ಭೂಮಿ ಕಂಪಿಸಿತು ಅಂದ ಮಾತ್ರಕ್ಕೆ ನಾವೇನೂ ಊಟ ತಿಂಡಿ ಬಿಟ್ಟು ಕೂರುತ್ತೇವೆಯಾ? ಹೌದಲ್ಲವಾ! ನಾನೂ ಕವಿತೆ ಬರೆಯದೇ ಇರಬಲ್ಲೆನೇ? ಕವಿತೆ ಉಸುರುವ ಉಸಿರು ತಾನೇ? ಆದರೆ ನನ್ನೊಳಗಿನ ಕವಿತೆ ಕಾಣೆಯಾಗಿದೆ ಅಂತ ಹೇಗೆ ಹೇಳಲಿ?
ಮತ್ತೆ ಭೂಮಿ ಕಂಪಿಸುತ್ತಿದೆ. ನಡುರಾತ್ರೆ ಧಿಗ್ಗನೆದ್ದು ಕುಳಿತರೆ..ಪಕ್ಕಕ್ಕೆ ಕುಳಿತು ಕವಿತೆ ಸಮಾಧಾನಿಸುತ್ತಿದೆ. ಹೆದರದಿರು, ಕಂಪಿಸಿದ್ದು ಭೂಮಿಯಲ್ಲ, ನಿನ್ನ ಒಡಲು!
ನೋಡಿ..ಕವಿತೆಯ ಮಾತನ್ನ ವಿಜ್ಞಾನ ತಳ್ಳಿ ಹಾಕುತ್ತದೆ. ಬಿಡಿ, ಸತ್ಯ ಕವಿತೆಗಷ್ಟೇ ಗೊತ್ತಿರಲು ಸಾಧ್ಯ.