Mysore
24
broken clouds

Social Media

ಗುರುವಾರ, 10 ಏಪ್ರಿಲ 2025
Light
Dark

ನನ್ನ ಪ್ರೀತಿಯ ಮೇಷ್ಟ್ರು: ಜೊತೆಗಿರದ ಜೀವ ಎಂದಿಗೂ ಜೀವಂತ

-ಶಿವಕುಮಾರ್ ಎಂ.ವಿ. ಗ್ರಾಮಲೆಕ್ಕಿಗ, ಮಾದಳ್ಳಿ 

ತಂದೆ, ತಾಯಿಗೆ ಸಮಾನವಾದ ಪ್ರೀತಿ, ಗೌರವ ಪಡೆಯುವ ಯಾರಾದರೂ ಇದ್ದರೆ ಅದು ಶಿಕ್ಷಕರು. ಅದಕ್ಕಾಗಿಯೇ ಅವರನ್ನು ಗುರು ದೇವೋಭವ ಎನ್ನುವುದು.

ನನ್ನ ಪಾಲಿಗೆ ಡಿ. ವಿಜಯಶ್ರೀ (ಡಿವಿಎಸ್) ದೇವರಂತಹ ಗುರು. ಕಾಣುವ ಪ್ರತಿಭೆಯನ್ನು ಯಾರು ಬೇಕಾದರೂ ಗುರುತಿಸಬಹುದು. ಆದರೆ ವಿದ್ಯಾರ್ಥಿಯ ಒಳಗಿರುವ ಸುಪ್ತ ಪ್ರತಿಭೆಯನ್ನು ಪತ್ತೆ ಮಾಡಿದ ಅದಕ್ಕೆ ನೀರೆರೆದು ಪೋಷಿಸುವ ಗುಣ ಇರುವ ಶಿಕ್ಷಕರು ವಿರಳ. ಆದರೆ ನನ್ನ ಪಾಲಿಗೆ ಡಿವಿಎಸ್ ಮೇಡಂ ಬಹು ದೊಡ್ಡ ವರ.

ನನ್ನೊಳಗೆ ಇದ್ದ ಪ್ರತಿಭೆಯನ್ನು ಪ್ರತಿ ಹಂತದಲ್ಲಿಯೂ ಗುರುತಿಸಿದರು. ನಾನು ಭಾಷಣ, ಚರ್ಚಾ ಸ್ಪರ್ಧೆ, ವಿಜ್ಞಾನ ರಸಪ್ರಶ್ನೆಯಲ್ಲಿ ರಾಜ್ಯ ಮಟ್ಟಕ್ಕೆ ಹೋಗಲು ಅವರ ಮಾತುಗಳೇ ಪ್ರೇರಣೆ.

ನಾನಾಗ ೮ನೇ ತರಗತಿಯಲ್ಲಿದ್ದೆ. ಅವರು ಆಗಷ್ಟೇ ಶಿಕ್ಷಕರಾಗಿ ಆಯ್ಕೆಯಾಗಿದ್ದರು. ಅವರಿಗೆ ನಮ್ಮದೇ ಮೊದಲ ಬ್ಯಾಚ್. ಸಹ ಶಿಕ್ಷರಾಗಿದ್ದ ಎಚ್‌ಎಂಎಲ್ ಅವರು ನಮ್ಮ ತರಗತಿಗೆ ಬಂದು ಡಿವಿಎಸ್ ಮೇಡಂ ಅವರನ್ನು ಪರಿಚಯಿಸಿದರು. ಅಲ್ಲಿಂದ ಶುರುವಾದ ನಮ್ಮ ಗುರು-ಶಿಷ್ಯರ ಸಂಬಂಧ ಇನ್ನೂ ಮುಂದುವರಿದಿದೆ. ಅವರೀಗ ನಮ್ಮೊಂದಿಗೆ ಇಲ್ಲದೇ ಇದ್ದರೂ.

ಹೌದು ಪ್ರೀತಿಯ ಡಿವಿಎಸ್ ಮೇಡಂ ಈಗ ನಮ್ಮೊಂದಿಗೆ ಇಲ್ಲ. ಅಕಾಲಿಕವಾಗಿ ಮೃತಪಟ್ಟರು. ಇದು ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಆದ ನಷ್ಟ. ಒಮ್ಮೆ ನನಗೆ ಭಾಷಣ ಸ್ಪರ್ಧೆಯಲ್ಲಿ ಬಹುಮಾನವಾಗಿ ಟಿಫನ್ ಬಾಕ್ಸ್ ಬಂದಿತ್ತು. ತೆರೆದು ನೋಡಿದರೆ ಅದರೊಳಗೆ ಕೇಸರಿ ಬಾತ್ ಇತ್ತು. ಅದನ್ನು ಕೊಟ್ಟಿದ್ದವರು ಡಿವಿಎಸ್ ಮೇಡಂ. ನನ್ನ ಅಚ್ಚರಿಯ ಮುಖ ನೋಡಿ ತಿನ್ನು ಎಂದಿದ್ದರು. ಆಗ ನನಗೆ ನನ್ನ ತಾಯಿಯೇ ನೆನಪಾಗಿದ್ದರು.

೧೦ನೇ ತರಗತಿ ಮುಗಿಸಿಕೊಂಡು ಹೈಸ್ಕೂಲ್‌ನಿಂದ ಹೊರ ಬಂದ ಬಳಿಕವೂ ಅವರ ಸಂಪರ್ಕ ಇತ್ತು. ಪ್ರತಿ ಹಂತದಲ್ಲಿಯೂ ಮಾರ್ಗದರ್ಶನ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಕೆಲಸಕ್ಕೆ ಸೇರಲು, ಈಗ ಗ್ರಾಮಲೆಕ್ಕಿಗ ಹುದ್ದೆ ಅಲಂಕರಿಸಿರುವುದರ ಹಿಂದೆ ಅವರ ಮಾರ್ಗದರ್ಶನ ಇದೆ. ಅವರು ಕನ್ನಡದ ಬಗ್ಗೆ ಹೊಂದಿದ್ದ ಹಿಡಿತ, ವ್ಯಾಕರಣವನ್ನು ಸರಳವಾಗಿ ಹೇಳಿಕೊಡುತ್ತಿದ್ದ ರೀತಿ, ಅವರ ಕನ್ನಡ ಪಾಠ ಎಲ್ಲವೂ ಈಗಲೂ ಕಣ್ಣ ಮುಂದಿದೆ. ಮಿಸ್ ಯೂ ಡಿವಿಎಸ್ ಮೇಡಂ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ