ಎಂ.ಜೆ ಇಂದುಮತಿ
ನಾವು ೨೧ನೇ ಶತಮಾನಕ್ಕೆ ಕಾಲಿಟ್ಟಿದ್ದರೂ ನಮ್ಮ ಪ್ರಮುಖ ಕಾಳಜಿಗಳಲ್ಲಿ ಒಂದಾಗಬೇಕಾಗಿದ್ದ ಮಹಿಳಾ ಸಬಲೀಕರಣವು ವಾಸ್ತವದ ಭ್ರಮೆಯಾಗಿಯೇ ಉಳಿದಿದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಳ್ಳುವುದೇ ಮಹಿಳಾ ಸಬಲೀಕರಣವಾಗಿದ್ದು, ಮಹಿಳೆ ಸಬಲೀಕರಣವಾದಷ್ಟೂ ಮಹಿಳೆಯರ ಸಂರಕ್ಷಣೆ ಸಾಧ್ಯವಾಗಲಿದೆ.
ಇಂದು ಸಂವಿಧಾನ ದಿನಾಚರಣೆ, ಈ ಸುಸಂದರ್ಭದಲ್ಲಿ ನಾವು ಮಹಿಳಾ ಸಬಲೀಕರಣದ ಅಗತ್ಯವೇನು? ಮಹಿಳೆಯರ ಆರ್ಥಿಕ ಸಬಲೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳೇನು? ಮಹಿಳಾ ಸಬಲೀಕರಣಕ್ಕೆ ಸರ್ಕಾರ ನೀಡುವ ಯೋಜನೆಗಳಾವುವು? ಅವುಗಳ ಅನುಷ್ಠಾನದ ಹಾದಿಯಲ್ಲಿರುವ ಅಡೆತಡೆಗಳೇನು? ಎಂಬುದರ ಬಗ್ಗೆ ಅರಿಯ ಬೇಕಾಗಿದೆ.
ಪ್ರಸ್ತುತದ ದಿನಮಾನಗಳಲ್ಲಿ ಮಹಿಳಾ ಸಬಲೀಕರಣ ಎಂಬುದು ಸರ್ಕಾರದ ಆಶ್ವಾಸನೆಗಳಾಗಿ ಉಳಿದಿವೆಯೇ ಹೊರತು, ಮಹಿಳೆ ಸಬಲೆಯಾಗಿದ್ದಾಳೆ ಎಂದು ಹೇಳಲು ಉಸಿರು ಬಿಗಿಯುತ್ತದೆ. ಪ್ರಸ್ತುತದಲ್ಲಿ ಮಹಿಳೆಯು ಲಿಂಗ ತಾರತಮ್ಯ, ಶೈಕ್ಷಣಿಕ ಕೊರತೆ, ಹೆಣ್ಣು ಭ್ರೂಣ ಹತ್ಯೆ, ಹಣಕಾಸಿನ ನಿರ್ಬಂಧಗಳು, ಕುಟುಂಬದ ಜವಾಬ್ದಾರಿ, ಅಪಾಯವನ್ನು ತಡೆದುಕೊಳ್ಳುವ ಕಡಿಮೆ ಸಾಮರ್ಥ್ಯ, ಸಾಧನೆಗಾಗಿ ಮಹತ್ವಾಕಾಂಕ್ಷೆ ಇಲ್ಲದಿರುವುದು ಇಂತಹ ಹತ್ತು ಹಲವು ಸಮಸ್ಯೆಗಳನ್ನು ನಿತ್ಯವೂ ಎದುರಿಸುತ್ತಿದ್ದಾಳೆ.
ನಾವು ೨೧ನೇ ಶತಮಾನದಲ್ಲಿದ್ದರೂ ಮಹಿಳೆಯರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದೇ ಹೇಳಬಹುದು, ಶೈಕ್ಷಣಿಕ ಕೊರತೆ, ಕೌಟುಂಬಿಕ ಹಿಂಸಾಚಾರದಂತಹ ಹಲವು ಸಮಸ್ಯೆಗಳಿಂದ ಮಹಿಳೆಯರು ನರಳುತ್ತಿದ್ದು, ಇವುಗಳಿಂದ ಮುಕ್ತವಾಗಿ ಸಮಾಜದಲ್ಲಿ ಸಮಾನವಾಗಿ ಬದುಕಲು ಮಹಿಳಾ ಸಬಲೀಕರಣ ಅತ್ಯವಶ್ಯವಾಗಿದೆ.
ಮಹಿಳಾ ಸಬಲೀಕರಣ ಗುರಿ ಸಾಽಸುವಲ್ಲಿ ಹಲವು ಸಮಸ್ಯೆಗಳಿವೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಸಾಮಾಜಿಕ ನಿಯಮಗಳು, ಕುಟುಂಬ ರಚನೆ, ಶೈಕ್ಷಣಿಕ ಕೊರತೆ, ಗಂಡು ಮಗುವಿನ ಪರವಾಗಿ ಹೆಚ್ಚು ಪಕ್ಷಪಾತವನ್ನು ಮಾಡುವುದು, ಇದರ ಜೊತೆಗೆ ಮಹಿಳೆಯರು ಮತ್ತು ಪುರುಷರ ನಡುವಿನ ಸಾಕ್ಷರತಾ ಅಂತರವೂ ಹೆಚ್ಚಿದ್ದು, ಶೇ. ೮೨. ೧೪ರಷ್ಟು ವಯಸ್ಕ ಪುರುಷರು ವಿದ್ಯಾವಂತರಾಗಿದ್ದರೆ, ಶೇ. ೬೫. ೪೬ ವಯಸ್ಕ ಮಹಿಳೆಯರು ಮಾತ್ರ ವಿದ್ಯಾವಂತರಾಗಿದ್ದಾರೆ. ಇವುಗಳೊಂದಿಗೆ ವೃತ್ತಿಪರ ಅಸಮಾನತೆ, ಬಡ್ತಿಯಲ್ಲಿನ ತಾರತಮ್ಯದಂತಹ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ.
ಮಹಿಳೆಯರು ಜಾಗತೀಕರಣ, ಉದಾರೀಕರಣ ಹಾಗೂ ಇತರೆ ಆರ್ಥಿಕ ಕೇಂದ್ರಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದರೂ ಭಾರತದಲ್ಲಿ ಮಹಿಳಾ ಸಬಲೀಕರಣ ದೂರದ ಮಾತಾಗಿದೆ. ಮಹಿಳೆಯರು ಸಬಲೀಕರಣ ಹೊಂದಬೇಕು ಅಂದರೆ ದೇಶದ ಜನರ ಮನಸ್ಥಿತಿ ಬದಲಾಗಬೇಕು. ಮಹಿಳೆ ಸಬಲೀಕರಣ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರೆ, ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಮಹಿಳೆಯರಿಗೆ ಉದ್ಯೋಗ ಮಾಡುವ ಸ್ಥಳ ಹಾಗೂ ವಿದ್ಯಾಭ್ಯಾಸ ಮಾಡುವ ಸ್ಥಳಗಳಲ್ಲಿ ಸೂಕ್ತ ಭದ್ರತೆ ಒದಗಿಸಬೇಕು, ವೃತ್ತಿಯ ಬಡ್ತಿ ಮತ್ತು ವೇತನದಲ್ಲಿ ಯಾವುದೇ ತಾರತಮ್ಯ ಮಾಡಬಾರದು, ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಆಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾದೀತು.
ನಮ್ಮ ಭಾರತೀಯ ಸಂವಿಧಾನ ಮಹಿಳೆಯರಿಗಾಗಿ ಅನೇಕ ಅನುಚ್ಛೇದಗಳಡಿ ಹಕ್ಕುಗಳನ್ನು ನೀಡಿದೆ. ಅವು ಗಳಲ್ಲಿ ಪ್ರಮುಖವಾಗಿ ಅನುಚ್ಛೇದ ೧೪ ಸಮಾನತೆಯ ಹಕ್ಕನ್ನು ಬೋಽಸಿದರೆ, ಅನುಚ್ಛೇದ ೧೫(೧) ಧರ್ಮ, ಜಾತಿ, ಲಿಂಗ, ವರ್ಣ ಇವುಗಳ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂಬುದನ್ನು ಸೂಚಿಸುತ್ತದೆ. ಅನುಚ್ಛೇದ ೧೫(೩) ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಽಸಿದ ವಿಶೇಷ ಉಪಬಂಧವಾಗಿದೆ. ಅನುಚ್ಛೇದ ೩೯(ಎ) ಸಮಾನ ವೇತನದ ಹಕ್ಕನ್ನು ಬೋಧಿಸಿದರೆ, ಅನುಚ್ಛೇದ ೪೨ ಮಾತೃತ್ವದ ಪ್ರಯೋಜನ ಪಡೆಯುವ ಹಕ್ಕನ್ನು ಮಹಿಳೆಯರಿಗೆ ನೀಡಿದೆ.
ಇವುಗಳಲ್ಲದೆ ಸರ್ಕಾರವೂ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಮಹಿಳಾ ಕೋಶ್, ಮಹಿಳಾ ಸಮೃದ್ಧಿ ಯೋಜನಾ, ಇಂದಿರಾ ಮಹಿಳಾ ಯೋಜನಾ, ಸ್ವಾವಲಂಬನೆ, ಸ್ವಶಕ್ತಿ ಗುಂಪುಗಳ ರಚನೆ, ಎಸ್‌ಟಿಇಪಿ, ಸ್ವಾಧಾರ್, ಉಜ್ವಲಾ, ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆ, ಮಹಿಳಾ ಸಮಿತಿ ಯೋಜನಾ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಜತೆಗೆ ಮಹಿಳಾ ಹಕ್ಕುಗಳ ಬಗ್ಗೆಯೂ ಜಾಗೃತಿ ಮೂಡಿಸಿದಾಗ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ.





