ಬಿರುಬೇಸಿಗೆಗೆ ಕೂದಲ ಆರೈಕೆಯೆಡೆಗೆ ಗಮನಹರಿಸುವುದು ಮುಖ್ಯ. ಬೇಸಿಗೆಯ ದೂಳಿಗೆ ಸಿಕ್ಕ ಕೂದಲು ಶುಷ್ಕಗೊಳ್ಳುತ್ತದೆ. ಕೂದಲ ಆರೈಕೆಗೆ ನಿತ್ಯ ಬಳಸುವ ಈರುಳ್ಳಿ ಮತ್ತು ಮೆಂತ್ಯೆಯೇ ಸಾಕು. ಬಳಸುವ ವಿಧಾನವನ್ನು ತುಸು ತಿಳಿದುಕೊಳ್ಳೋಣ.
ದೊಡ್ಡ ಗಾತ್ರದ ಒಂದು ಈರುಳ್ಳಿ ಅಥವಾ ಎರಡು ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ, ನುಣ್ಣಗೆ ರುಬ್ಬಿ ರಸ ತೆಗೆದಿಟ್ಟುಕೊಳ್ಳಬೇಕು. ತಯಾರಿಸಿಟ್ಟುಕೊಂಡ ಈರುಳ್ಳಿ ರಸಕ್ಕೆ ಎರಡು ಚಮಚದಷ್ಟು ಮೆಂತ್ಯೆ ಪೇಸ್ಟ್ ಸೇರಿಸಬೇಕು. ಕೂದಲಿಗೆ ಒಗ್ಗುವ ಎಣ್ಣೆಯನ್ನು ತುಸು ಕಾಯಿಸಿ, ಅದಕ್ಕೆ ಮಾಡಿಟ್ಟುಕೊಂಡ ಈ ಮಿಶ್ರಣವನ್ನು ಸೇರಿಸಿ, ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಕುದಿಸಬೇಕು. ಎಣ್ಣೆ ಸ್ವಲ್ಪ ತಣ್ಣಗಾದ ನಂತರ, ಸೋಸಿ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು.
ವಾರಕ್ಕೊಮ್ಮೆಯಾದರೂ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು, ನೆತ್ತಿಗೆ ಹಾಕಿ ನಿಧಾನವಾಗಿ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಬೆಳಿಗ್ಗೆ ಎದ್ದು, ಕೂದಲನ್ನು ನಿಮಗೊಪ್ಪುವ ಶ್ಯಾಂಪೂವಿಂದ ತೊಳೆದುಕೊಳ್ಳುವುದರಿಂದ, ಕೂದಲ ಆರೈಕೆ ಸಾಧ್ಯ.
ಈರುಳ್ಳಿ ರಸ ಮತ್ತು ಮೆಂತ್ಯ ಬೀಜಗಳು ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಪೋಷಕಾಂಶಗಳನ್ನು ನೀಡುತ್ತದೆ. ಈರುಳ್ಳಿಯಲ್ಲಿರುವ ಸಲ್ಛರ್ ಕೂದಲನ್ನು ಬಲಪಡಿಸುತ್ತದೆ. ಕೂದಲು
ಟಿಸಿಲೊಡೆಯುವುದನ್ನು ಕಡಿಮೆ ಮಾಡುತ್ತದೆ. ಮೆಂತ್ಯದ ಹೆಚ್ಚಿನ ಪ್ರೋಟೀನ್ ಅಂಶವು ಕೂದಲು
ತೆಳುವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಕೂದಲಿಗೆ ಹೊಳಪು ನೀಡುತ್ತದೆ.