-ಅಂಜಲಿ ರಾಮಣ್ಣ
ಅತುಲ್ ಸುಭಾಷ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ತಂದೆ-ತಾಯಿ ಕೊಡುತ್ತಿರುವ ಕಾಟವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾ ನೂರಕ್ಕೂ ಹೆಚ್ಚು ಪುಟಗಳ ವಿವರವಾದ ಡೆಟ್‌ನೋಟ್ ಬರೆದಿಟ್ಟು, ಅದರ ವೀಡಿಯೋ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡ. ಈ ವಿಷಯ ಇನ್ನೂ ಜನಮಾನಸದಲ್ಲಿ ಉಳಿದಿದೆ. ಮೇಲ್ನೋಟಕ್ಕೆ ಆತನ ಪತ್ನಿ ಅಪರಾಧಿಯಂತೆ ಕಾಣುತ್ತಿದ್ದಾಳೆ. ಹಾಗಾಗಿ ತನಿಖೆ ಆಗಬೇಕು ಎಂದು ಉಚ್ಚ ನ್ಯಾಯಾಲವೂ ಹೇಳಿತ್ತು. ಈಗ ಆಕೆಗೆ ಜಾಮೀನು ಸಿಕ್ಕಿದೆ.
ಈ ಘಟನೆಯ ನಂತರ ನೊಂದ ಗಂಡ ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿಯೂ ಆತ್ಮಹತ್ಯೆ ಮಾಡಿಕೊಂಡ. ವಿಷಾದವೆಂದರೆ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆಂಡತಿಯರನ್ನು ಬೆದರಿಸಲು ಗಂಡಂದಿರು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ರೇವಮ್ಮನ ಅಣ್ಣನ ಮಗ ಜೈಲಿನಲ್ಲಿದ್ದಾನೆ. ಅವನ ಹೆಂಡತಿ ಜಾಮೀನು ಕೊಡಿಸಲು ಇವಳ ಬೆನ್ನು ಬಿದ್ದಿದ್ದಾಳೆ. ಆಗುವುದಿಲ್ಲ ಎಂದವಳಿಗೆ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಒತ್ತಡ ಹಾಕುತ್ತಿದ್ದಾಳೆ. ಇದರಿಂದ ಹೆದರಿದ ರೇವಮ್ಮ ಆಳುತ್ತಾ ಆಫೀಸಿಗೆ ಬಂದಿದ್ದಳು.
ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ, ಬಾಡಿಗೆ ಮನೆ ಬಿಡಿಸಿದರೆ, ಕೆಲಸ ಕೊಡದಿದ್ದರೆ ಹೀಗೆ ಯಾವುದೇ ಕಾರಣಗಳನ್ನು ಕೊಟ್ಟು ‘ನಾನು ನಿನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವ ಬೆದರಿಕೆಗೆ ಬಗ್ಗುವ, ಹೆದರುವ ಅವಶ್ಯಕತೆ ಇಲ್ಲ.
ಕರ್ನಾಟಕ ಉಚ್ಚ ನ್ಯಾಯಾಲಯವು, ಕ್ರಿಮಿನಲ್ ಪಿಟಿಷನ್ ಸಂಖ್ಯೆ:7001/2019 ನೌಷಾದ್ ಅಹಮದ್ v/s ಕರ್ನಾಟಕ ರಾಜ್ಯ ಕಂಟೋನ್ಮೆಂಟ್ ಪೊಲೀಸ್ ಠಾಣೆ ಈ ಪ್ರಕರಣದಲ್ಲಿ, ಆತ್ಮಹತ್ಯೆ ಮಾಡಿಕೊಂಡವನು, ಹೆಸರು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ತಪ್ಪಿತಸ್ಥ ಎಂದಲ್ಲ. ಹಾಗೆಯೇ ಅವನನ್ನು ಅರೆಸ್ಟ್ ಮಾಡುವ ಅಗತ್ಯವೂ ಇಲ್ಲ ಆದರೆ ತನಿಖೆ ಮಾಡಬಹುದು ಅಷ್ಟೇ ಎನ್ನುವ ತೀರ್ಪು ಕೊಟ್ಟಿದೆ. ಸರಿಸುಮಾರು ಇದೆ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಅಪೀಲ್ ಸಂಖ್ಯೆ : 1388/2014 ಪಟೇಲ್ ಬಾಬುಬಾಯ್ ಮನೋಹರದಾಸ್ v/s ಗುಜರಾತ್ ಪ್ರಕರಣದಲ್ಲಿ ವ್ಯಕ್ತಪಡಿಸಿದೆ. ಹಾಗಾಗಿ ತಪ್ಪು ಮಾಡದೆ
ಇದ್ದಾಗ, ಪ್ರಚೋದನೆಯನ್ನೂ ನೀಡದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಬೆದರಿಕೆಗೆ ಹೆದರುವ ಅವಶ್ಯಕತೆ ಇಲ್ಲ ಮತ್ತು ಹಾಗೆ ಒತ್ತಡ ಹೇರುವವರ ಮೇಲೆ ಭಾರತೀಯ ನ್ಯಾಯ ಸಂಹಿತೆ 2023 ಇದರ ಸೆಕ್ಷನ್ 351ರ ಅಡಿಯಲ್ಲಿ FIR ಹಾಕಬಹುದಿರುತ್ತದೆ. ಈ ಅಪರಾಧಕ್ಕೆ 2ರಿಂದ 7 ವರ್ಷಗಳ ಜೈಲು ಶಿಕ್ಷೆ ಇರುತ್ತದೆ.
(ಲೇಖಕರು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರಾಗಿದ್ದಾರೆ)