Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬಾಳೆದಿಂಡಿನ ಆರೋಗ್ಯದ ಖಾದ್ಯಗಳು

* ರಮ್ಯ ಅರವಿಂದ್

ಸಾಮಾನ್ಯವಾಗಿ ಹಿರಿಯರು ರಾತ್ರಿ ಊಟವಾದ ನಂತರ ಒಂದು ಬಾಳೆಹಣ್ಣನ್ನು ಸೇವಿಸಬೇಕು ಎಂದು ಹೇಳುತ್ತಾರೆ. ಇದಕ್ಕೆ ಒಂದು ಪ್ರಮುಖವಾದ ಕಾರಣವೂ ಇದೆ. ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಬೇಕು ಮತ್ತು ಅದರಲ್ಲಿನ ಅನೇಕ ಸತ್ವಗಳು ದೇಹಕ್ಕೆ ಸೇರಬೇಕು. ಹಾಗಾಗಿ ಬಾಳೆಹಣ್ಣನ್ನು ಸೇವಿಸಲು ಹೇಳುತ್ತಾರೆ.

ಹೌದು ಬಾಳೆ ಗಿಡದ ಪ್ರತಿಯೊಂದು ಭಾಗವೂ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ. ಅದರಲ್ಲಿಯೂ ಬಾಳೆದಿಂಡು ಹೆಚ್ಚು ಪರಿಣಾಮಕಾರಿ. ಇದರಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ಜೀರ್ಣಶಕ್ತಿ ವೃದ್ಧಿಸಲು, ದೇಹದ ತೂಕ ಕಡಿಮೆಯಾ ಗಲು ಕಿಡ್ನಿಯಲ್ಲಿನ ಕಲ್ಲು, ಸಕ್ಕರೆ ಕಾಯಿಲೆ, ರಕ್ತದೊತ್ತಡದ ಸಮಸ್ಯೆಗಳಿಗೆ ಹಾಗೂ ದೇಹದ ಕಬ್ಬಿಣದ ಅಂಶ ಹೆಚ್ಚಿಸಲು ಸಹಾಯ ಮಾಡುತ್ತದೆ. ಬಹಳ ಮುಖ್ಯವಾಗಿ ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಶಕ್ತಿ ಬಾಳೆದಿಂಡಿಗಿದೆ ಎನ್ನುವ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತಿದ್ದೇವೆ. ಬಾಳೆದಿಂಡಿನಿಂದ ತಯಾರಿಸಿದ ಆಹಾರಗಳನ್ನು ಸೇವಿಸಿದರೆ ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಯಿಂದ ನಿವಾರಣೆ ಪಡೆಯಬಹುದು. ಬಾಳೆದಿಂಡಿನಿಂದ ಅನೇಕ ರುಚಿಕರವಾದ ಖಾದ್ಯಗಳನ್ನೂ ತಯಾರಿಸಬಹುದು.

ಅದು ಹೇಗೆ ಎಂಬುದನ್ನು ನೋಡೋಣ. ಬಾಳೆ ದಿಂಡನ್ನು ಕತ್ತರಿಸಿಕೊಳ್ಳುವಾಗ ದುಂಡನೆಯ ಆಕಾರದಲ್ಲಿ ಸಣ್ಣ ಸಣ್ಣ ಬಿಲ್ಲೆಗಳಾಗಿ ಕತ್ತರಿಸಿ ನಿಧಾನವಾಗಿ ನಾರನ್ನು ಬೆರಳಿನಿಂದ ಬೇರ್ಪಡಿಸಬೇಕು. ನಂತರ ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಕತ್ತರಿಸಿದ ಬಾಳೆದೆಂಡು ಬೇಗನೆ ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಅದನ್ನು ಒಂದು ಪಾತ್ರೆಗೆ ಮಜ್ಜಿಗೆಯ ನೀರಿನಲ್ಲಿ ಅಥವಾ ನಿಂಬೆರಸದ ನೀರಿನಲ್ಲಿ ಹಾಕಿದರೆ ಬಿಳಿಯಾಗಿಯೇ ಇರುತ್ತದೆ.

ಬಾಳೆದಿಂಡಿನ ಪಲ್ಯ

ಅರ್ಧ ಬಾಳೆದಿಂಡನ್ನು ಸಣ್ಣಗೆ ಕತ್ತರಿಸಿಕೊಂಡು, ನೆನೆಸಿದ ಹೆಸರು ಕಾಳು ಅಥವಾ ಕಡಲೆ ಕಾಳುಗಳ ಜತೆಗೆ ಕಾಯಿತುರಿ, ಸೂಜಿ ಮೆಣಸು ಅಥವಾ ಗಾಂಧಾರಿ ಮೆಣಸು, ಶುಂಠಿಯನ್ನು ರುಬ್ಬಿಕೊಂಡು ಬಳಿಕ ಒಂದು ಪಾತ್ರೆಯಲ್ಲಿ ಎರಡರಿಂದ ಮೂರು ಚಮಚ ಕಡಲೆ ಕಾಯಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಅರ್ಧ ಚಮಚದಷ್ಟು ಸಾಸಿವೆ ಹಾಕಿ ಒಂದೆರಡು ಒಣಮೆಣಸಿನಕಾಯಿ, ಇಂಗು ಸೇರಿಸಿ ಒಗ್ಗರಣೆ ಮಾಡಿಕೊಂಡು ತಣ್ಣಗೆ ಹಚ್ಚಿದ ಬಾಳೆದಿಂಡು ಹಾಗೂ ನೆನೆಸಿದ ಹಸಿರು ಕಾಳು ಹಾಕುವುದು. ಇದಕ್ಕೆ ಎರಡು ಲೋಟ ನೀರನ್ನು ಸೇರಿಸಿ ೧೦ ರಿಂದ ೧೫ ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ರುಬ್ಬಿದ ಮಸಾಲೆ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಹಾಕಿ ಒಂದೆರಡು ನಿಮಿಷ ಬೇಯಿಸುವುದು. ಹೀಗೆ ತಯಾರಿಸಿಕೊಂಡ ಪಲ್ಯವನ್ನು ಆಗಾಗ್ಗೆ ಸೇವಿಸುವುದರಿಂದ ದೇಹದಲ್ಲಿ ಕೊಬ್ಬನ್ನು ಕರಗಿಸಲು ಹೆಚ್ಚು ಸಹಕಾರಿಯಾಗುತ್ತದೆ.

ಬಾಳೆ ದಿಂಡಿನ ಚಟ್ನಿ

ಹಚ್ಚಿದ ಬಾಳೆದೆಂಡಿಗೆ ಕಾಯಿತುರಿ, ಒಣಮೆಣಸಿನ ಕಾಯಿ, ಶುಂಠಿ, ಉದ್ದಿನಬೇಳೆ, ಹುಣಸೆ ಹಣ್ಣನ್ನು ಸೇರಿಸಿಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಹಾಗೂ ಒಣಮೆಣಸಿನಕಾಯಿ ಹಾಕಿ ಎರಡು ನಿಮಿಷ ಹುರಿದುಕೊಂಡು ನಂತರ ಬಾಳೆದಿಂಡು, ಕಾಯಿತುರಿ, ಶುಂಠಿ ಹಾಗೂ ಉರಿದ ಪದಾರ್ಥವನ್ನು ಸೇರಿಸಿ ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳುವುದು. ನಂತರ ಒಂದು ಪಾತ್ರೆಯಲ್ಲಿ ಎರಡು ಚಮಚ ಕಡಲೆಕಾಯಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಜೀರಿಗೆ ಹಾಗೂ ಇಂಗನ್ನು ಒಗ್ಗರಣೆ ಮಾಡಿ ಹಾಕುವುದು. ಹೀಗೆ ತಯಾರಿಸಿದ ಬಾಳೆದಿಂಡಿನ ಚಟ್ನಿಯು ದೋಸೆ, ಚಪಾತಿ, ಅನ್ನದ ಜೊತೆಯಲ್ಲಿ ಸವಿಯಲು ರುಚಿಕರವಾಗಿರುತ್ತದೆ.

ಬಾಳೆ ದಿಂಡಿನ ಚಾಟ್ಸ್

ಸಣ್ಣಗೆ ಹಚ್ಚಿದ ಬಾಳೆದಿಂಡಿಗೆ ಒಂದು ಕಪ್ ಕ್ಯಾರೆಟ್ ತುರಿ, ಒಂದು ಕಪ್ ಈರುಳ್ಳಿ, ಒಂದು ಕಪ್ ಟೊಮೆಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ಅಚ್ಚ ಮೆಣಸಿನ ಕಾಯಿ ಪುಡಿ, ಚಾಟ್ ಮಸಾಲಾ, ಉರಿದ ಶೇಂಗಾ, ಖಾರಸೇವ್, ನಿಂಬೆರಸವನ್ನು ಒಂದು ಪಾತ್ರೆಗೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ರುಚಿಕರ ಚಾಟ್ಸ್ ಸವಿಯಲು ಸಿದ್ಧವಾಗುತ್ತದೆ. ಬಾಳೆದಿಂಡಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕಿಡ್ನಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

 

Tags:
error: Content is protected !!