Mysore
20
overcast clouds
Light
Dark

ಪೂರ್ಣಯ್ಯ ಕಾಲುವೆಗೆ ಮರುಜೀವ ನೀಡಿದ ಸ್ತ್ರೀಶಕ್ತಿ

ತನ್ನ ವೃತ್ತಿಯ ಜೊತೆಗೆ ಪರಿಸರ, ಪಾರಂಪರಿಕತೆಯ ಪ್ರೀತಿಯನ್ನು ಬೆಳೆಸಿಕೊಂಡ ಚಂಪಾ ಅವರು ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಪ್ರಾಧ್ಯಾಪಕರು ಸಂಸ್ಥೆಯ ಡೀನ್ ಆಗಿದ್ದಾರೆ. ಈ ಹಿಂದೆ ಕರ್ನಾಟಕ ಸರ್ಕಾರದ ಪಾರಂಪರಿಕತೆ ಮತ್ತು ಪುರಾತತ್ವ ಇಲಾಖೆ ಸಮಿತಿಯ ಸದಸ್ಯರಾಗಿ, ವಿಷಯ ತಜ್ಞರಾಗಿ ಅನೇಕ ಸಲಹೆಗಳನ್ನು ನೀಡಿದ್ದರು.

ಚಿಕ್ಕಂದಿನಿಂದಲೂ ಕುಕ್ಕರಹಳ್ಳಿ ಕೆರೆಯೊಂದಿಗೆ ಇವರ ಒಡನಾಟವಿತ್ತು. ದಿನ ಬೆಳಗಾದರೆ ಸಾಕು, ಕೆರೆ ಪಕ್ಕ ತಾತನ ಕೈ ಹಿಡಿದು ನಡೆದಾಡುವಾಗೆಲ್ಲ ಇವರಿಗೆ ಸಂಭ್ರಮ, ಜಯಲಕ್ಷ್ಮೀಪುರಂನಲ್ಲಿರುವ ಇವರ ಮನೆಯಿಂದ ಮೈಸೂರು ವಿಶ್ವವಿದ್ಯಾನಿಲಯದ ವರೆಗೆ ಕಾಲ್ನಡಿಗೆಯಲ್ಲೇ ನಡೆದಾಡಿದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಇವರ ತಾತ ಅಂದಿನ ರಾಜಕೀಯ ಮುಖಂಡರಾಗಿದ್ದ ಜಯದೇವ ರಾಜೇ ಅರಸ್ ಅವರು ಚಾಮುಂಡಿ ಬೆಟ್ಟವನ್ನು ಹಸಿರು ವಲಯವನ್ನಾಗಿ ಅಭಿವೃದ್ಧಿ ಮಾಡಲು ಪ್ರಯತ್ನಪಟ್ಟವರು.

ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದಿದ್ದ ಚಂಪಾ ಅವರಿಗೆ ಪ್ರಕೃತಿಯ ಬಗೆಗೆ ಒಲವು ಆಗಾಧವಾಗಿತ್ತು. ಬೆಂಗಳೂರಿನಲ್ಲಿ ಓದಿದ ಚಂಪಾ ಅವರಿಗೆ ಮೈಸೂರೆಂದರೆ ವಿಶೇಷ ಪ್ರೀತಿ. ಅವರಿಗದು ‘ಮೈಸೂರುತನ’. ಹಾಗಾಗಿಯೇ ಆರ್ಕಿಟೆಕ್ಟರ್ ವಿಭಾಗದಲ್ಲಿ ಪಿಎಚ್.ಡಿ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ಆಸೆ ಮತ್ತು ಆಸಕ್ತಿಗಳೆರಡೂ ಒಂದೇ ಆಗಿದ್ದರಿಂದ ಅಧ್ಯಯನ ಸುಸೂತ್ರವಾಗಿ ಸಾಗಿತು. ಇವತ್ತಿಗೂ ಮೈಸೂರಿನಲ್ಲಿರುವ ಶತಮಾನಗಳ ಇತಿಹಾಸವಿರುವ ಕೆರೆಗಳು ಮತ್ತು ಕಾಲುವೆಗಳ ಬಗ್ಗೆ ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದು, ತಮ್ಮ ವಿದ್ಯಾರ್ಥಿಗಳಿಗೆ ಆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಪ್ರೇರೇಪಿಸುತ್ತಿದ್ದಾರೆ. ಕಾಲೇಜಿನ ಆರ್ಕಿಟೆಕ್ಟರ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ‘ನಗರ ಯೋಜನೆ’ ಎಂಬ ವಿಷಯದ ಬಗ್ಗೆ ಪ್ರಾಜೆಕ್ಟ್ ನೀಡಬೇಕಾಗಿತ್ತು. ಈ ಹಿಂದೆ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟು, ಪರಿಸರ ಕಾಳಜಿ ಕುರಿತು `Sensitize towards Environment’ ಎಂಬ ವಿಷಯದಲ್ಲಿ ಪ್ರಾಜೆಕ್ಟ್ ನೀಡಿ ಅದಕ್ಕೆ ಅನುಗುಣವಾಗಿ ಸುಮಾರು 65 ವಿದ್ಯಾರ್ಥಿಗಳು 5 ತಿಂಗಳವರೆಗೆ ನಿಗದಿತ ಕಾರ್ಯ ನಡೆಸಲು ಆರು ಗುಂಪುಗಳಾಗಿ ವಿಭಾಗಿಸಿ, ಪೂರಕವಾಗಿ ಅಧ್ಯಾಪಕರೂ ಜೊತೆಗೂಡಿದರು.

ಸಮರ್ಪಕವಾದ ರೂಪುರೇಷೆಯೊಂದಿಗೆ ಸೆಟಲೈಟ್ ಫೋಟೋಗಳು, ಜಿಐಎಸ್ (Global Information System), ದಿಶಾಂಕ್ ಆ್ಯಪ್, ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‌ನ ನೀತಿ ಈ ಎಲ್ಲದರ ಸಹಾಯದಿಂದ ಅಧ್ಯಯನ ಆರಂಭವಾಯಿತು. ಮೈಸೂರಿನಲ್ಲಿ ನೀರು ಹರಿವ ಬಗೆ, ವೆಟ್ ಲ್ಯಾಂಡಿನ ಪ್ರಾಮುಖ್ಯತೆ, ಉಬ್ಬು ತಗ್ಗುಗಳು ಹೇಗಿವೆ? ಕೆರೆಗಳು ಪರಿಸರಕ್ಕೆ ಹೇಗೆ ಅದು ಸಹಕಾರಿ? ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಅಧ್ಯಯನವನ್ನು ಮಾಡಲಾಯಿತು.

ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಫೀಲ್ಡ್ ವರ್ಕ್ ಶುರುವಾಯಿತೆಂದರೆ, ಹತ್ತು ಗಂಟೆಯ ಹೊತ್ತಿಗೆ ಕಾಲೇಜಿನಲ್ಲಿ ಸೇರಿ ಅಧ್ಯಯನದ ಫಲಿತಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ವಿದ್ಯಾರ್ಥಿಗಳು ತಿಳಿಯದ ಜಾಗಗಳನ್ನು ಹೇಳಿದಾಗ, ಕಾರು, ಸ್ಕೂಟರ್, ಕೆಲವು ಕಡೆ ಸೈಕಲ್‌ನಲ್ಲಿಯೂ ಚಂಪಾ ಅವರು ಹೋಗಿದ್ದಿದೆ.

ಮೈಸೂರಿನ ಪರಿಸರ ತಜ್ಞರಾದ ರವಿಕುಮಾರ್ ಅವರು 30 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಈ ಕುರಿತು ಕೆಲಸ ನಿರ್ವಹಿಸುತ್ತಿದ್ದಾರೆ. ಅವರೂ ಈ ಅಧ್ಯಯನಕ್ಕೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ತಿಳಿಸಿ ದಾಖಲೆ ರೂಪದಲ್ಲಿದ್ದ ಅಧ್ಯಯನ ಮಾದರಿಗಳಿಗೆ ನಿರ್ದಿಷ್ಟ ದತ್ತಾಂಶಗಳನ್ನು ಸೇರಿಸಬೇಕೆಂದು ತಿಳಿಸಿಕೊಟ್ಟಿದ್ದರು. ಅಂತೆಯೇ ವಿಷಯ ತಜ್ಞರಾದ ವಿಶ್ವ ಅಂಜಲಿ ಶರ್ಮ, ದೀಪಿಕಾ ಶೆಟ್ಟಿ ಇನ್ನೂ ಅನೇಕರು ಈ ಅಧ್ಯಯನಕ್ಕೆ ನಿರಂತರವಾಗಿ ಸಲಹೆಗಳನ್ನು ನೀಡುತ್ತಿದ್ದರು.

‘ಕಾಲುವೆಗಳ ನೀರೆಲ್ಲ ಕುಕ್ಕರಹಳ್ಳಿ ಕೆರೆಯಲ್ಲಿ ಶೇಖರಣೆಗೊಂಡರೆ ತಡೆಯುವ ಶಕ್ತಿ ಅದಕ್ಕಿಲ್ಲ. ಪ್ರವಾಹ ಸಂಭವಿಸುವ ಸಾಧ್ಯತೆಯನ್ನು ತಡೆಗಟ್ಟುತ್ತಿದ್ದ ಬಗ್ಗೆ ಹಿಂದಿನವರು ಈಗಾಗಲೇ ತಿಳಿಸಿಕೊಟ್ಟಾಗಿದೆ. ನಾವದನ್ನು ಉಳಿಸಿಕೊಂಡು ಹೋಗಬೇಕಷ್ಟೆ’ ಎಂಬ ಚಂಪಾ ಅವರ ಈ ಮಾತಿನಲ್ಲಿ ಪರಿಸರದ ಕಾಳಜಿಯಿದೆ. ಚಾಮುಂಡಿ ಬೆಟ್ಟದಲ್ಲಿ ಹೆಚ್ಚಾಗುತ್ತಿರುವ ಜನವಸತಿ ತಂದೊಡ್ಡುವ ದುಷ್ಪರಿಣಾಮಗಳ ಕುರಿತಂತೆ ಅಧ್ಯಯನವನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಕೈಗೊಳ್ಳಬೇಕೆಂಬುದು ಇವರ ಆಲೋಚನೆ.

ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಾಲೆಯಲ್ಲಿ ಓದಿದ ಚಂಪಾ ಅವರು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದವರು ಇಬ್ಬರೂ ಇದ್ದ ತರಗತಿಯಲ್ಲಿ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಪಾಠವನ್ನು ಕಲಿಸುತ್ತಾ, ಜೀವನಕ್ಕೆ ದಾರಿತೋರಿದಎಲ್ಲ ಅಧ್ಯಾಪಕರಿಗೆ ಅವರು ಧನ್ಯವಾದಗಳನ್ನು ಹೇಳುತ್ತಾರೆ. ಹೊರ ರಾಜ್ಯ, ದೇಶಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸಿ ದ್ದರೂ ಮೈಸೂರೇ ಅವರಿಗೆ ಸದಾ ಮೆಚ್ಚು, ಅಚ್ಚುಮೆಚ್ಚು.