Mysore
20
overcast clouds
Light
Dark

ಹೆತ್ತ ತಾಯಿಯ ಆತಂಕಗಳು

ಕನ್ನಡ ಕಿರುತೆರೆಯ ನಟಿಯೊಬ್ಬಳು ತನ್ನ ಮಗುವಿಗೆ ಜನ್ಮ ನೀಡಿದ ನಂತರ ತನ್ನಲ್ಲಾದ ಬದಲಾವಣೆಯನ್ನು ಕುರಿತು ಮುಕ್ತವಾಗಿ ರಿಯಾಲಿಟಿ ಶೋನಲ್ಲಿ ಹೇಳಿಕೊಂಡ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಕೆಲವರು ಲೊಲ್ ಎನ್ನುತ್ತಾ, ಅತಿಯಾಯ್ತು ಎಂದು ಪ್ರತಿಕ್ರಿಯಿಸುತ್ತಿದ್ದರು. ಮಗುವಿಗೆ ಜನ್ಮ ನೀಡಿದ ಬಹುತೇಕ ಮಹಿಳೆಯರಲ್ಲಿ ಇದು ಸಹಜ ಬದಲಾವಣೆ. ಇನ್ನೊಂದು ಜೀವವನ್ನು ತನ್ನಿಂದ ಲೋಕಕ್ಕೆ ತಂದ ಮೇಲೆ, ತಾಯಿಯಾದವಳ ದೇಹಸ್ಥಿತಿಯಲ್ಲಿ ಹಾರ್ಮೋನ್ ಬಹಳ ವ್ಯತ್ಯಯವನ್ನು ಉಂಟುಮಾಡುತ್ತದೆ. ಕನಿಷ್ಟ 40 ದಿನಗಳವರೆಗೆ ಇದನ್ನು ಗುರುತಿಸಬಹುದು. ಎಷ್ಟೋ ಮಹಿಳೆಯರು ಮಗುವನ್ನು ಕಂಡು ಅಳುತ್ತಾ, ನನ್ನ ಮಗುವನ್ನು ನಾನು ಇಷ್ಟಪಡುತ್ತೇನಾ? ತಾನು ಒಳ್ಳೆ ತಾಯಿಯಾಗಬಹುದೇ? ಎಂಬ ಪ್ರಶ್ನೆಗಳನ್ನಿಟ್ಟು ಕೊರಗುತ್ತಾರೆ. ಕೆಲವರು ಮೌನವಾಗಿ ಖಿನ್ನತೆಗೂ ಜಾರುತ್ತಾರೆ. ಇವೆಲ್ಲ ಯೋಚನೆಗೆ ಅರ್ಥವೇ ಇಲ್ಲವೆಂದು ತಳ್ಳಿಹಾಕುವಂತಿಲ್ಲ. ಏಕೆಂದರೆ, ಒಳಗಿನ ಸಂಕಟಗಳ ತೀವ್ರತೆ ಬೇರೆಯದ್ದೇ ಆಗಿರುತ್ತದೆ. ಕೆಲ ಮಹಿಳೆಯರು 41ನೆಯ ದಿನದ ನಂತರ ಚೇತರಿಸಿಕೊಂಡು, ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಿಂದ ಮನಸ್ಸನ್ನು ಪ್ರಶಾಂತಗೊಳಿಸಿಕೊಳ್ಳುತ್ತಾರೆ. ಇನ್ನುಳಿದವರಿಗೆ ಕುಟುಂಬ, ಸ್ನೇಹಿತರ ಬಳಗ ಜೊತೆಗಿದ್ದು, ತಾಯ್ತನದ ಸಹಜತೆಗಳನ್ನು ತಿಳಿಸಿ, ಮಾನಸಿಕವಾಗಿ ಅವರನ್ನು ಗಟ್ಟಿಗೊಳಿಸುವುದು ಅನಿವಾರ್ಯ.