Mysore
15
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ದಿಶಾ ರಮೇಶ್;‌ ಕಡು ಮೌನಿ, ಸಹಜ ನಟಿ

• ಮಧುರಾಣಿ ಎಚ್.ಎಸ್.

ಕಣ್ಣು ತೆರೆದಾಗಿನಿಂದ ರಂಗಭೂಮಿ ಹಾಗೂ ಹಿರಿತೆರೆಯ ಬಣ್ಣದ ಅನುಭವಗಳನ್ನು ತನ್ನ ಪುಟ್ಟ ಬೊಗಸೆಯಲ್ಲಿ ತುಂಬಿಕೊಂಡೇ ಬೆಳೆದ ದಿಶಾ ಎಂಬ ಈ ಅಪ್ಪಟ ಪ್ರತಿಭೆ, ರಂಗದ ಮೇಲಷ್ಟೆ ಅಲ್ಲದೇ ಕನ್ನಡ ಸಿನಿಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವುದು ಗೊತ್ತೇ ಇದೆ. ಎಸ್.ಎಲ್.ವಿ. ಚಿತ್ರದ ಯಶಸ್ಸಿನ ನಂತರವೂ ತನ್ನ ಬೇರುಗಳು ಗಟ್ಟಿಯಾಗಿ ನಾಟಿಕೊಂಡಿರುವುದು ರಂಗಭೂಮಿಯಲ್ಲಿ ಎಂದು ನಂಬಿರುವ ಈ ಹುಡುಗಿಯ ಅಗಾಧ ಆತ್ಮವಿಶ್ವಾಸ ಎಂಥವರನ್ನೂ ಬೆರಗುಗೊಳಿಸುತ್ತದೆ.

ಬಾಲ್ಯದ ದಿನಗಳಲ್ಲಿ ಅಪ್ಪ ಮಂಡ್ಯ ರಮೇಶ್ ಅವರ ಜನಪ್ರೀತಿ, ಅಮ್ಮ ಸರೋಜಾ ಅವರ ರಂಗಭೂಮಿಯ ಒಲವು, ಚರ್ಚಿಸಿದರೂ ರಂಗ ಸನ್ನಿವೇಶಗಳ ಕುರಿತಾಗೇ ಜಗಳಗೈವ ಅಪ್ಪ ಅಮ್ಮ, ಎಲ್ಲವನ್ನು ಹಚ್ಚಿಕೊಂಡೇ ಬೆಳೆದರೂ ದಿಶಾ ವೈಯಕ್ತಿಕವಾಗಿ ಅಪ್ಪಟ ಕಲಾತಪಸ್ವಿ, ಕಲೆಯನ್ನು ಉಸಿರಾಡಬಲ್ಲ, ಒಡಲ ಹಸಿವಾಗಿಸಿಕೊಳ್ಳಬಲ್ಲ ಸೃಜನಶೀಲ ದೇಸಿ ಮಗಳು, ಅಮ್ಮ ಸರೋಜಾ ಅಪ್ಪಟ ರಂಗ ಭೂಮಿ ಪ್ರತಿಭೆ, ಅವರು ಹಾಡುವ ಗೀತೆಗಳನ್ನು ಈಕೆ ಸದಾ ಕೇಳಿಕೊಂಡಿರುವುದು, ಕೆಲವೊಮ್ಮೆ ಅಪ್ಪ ತಪ್ಪುವ ಶ್ರುತಿಯನ್ನು ಅಮ್ಮ ಸರಿ ಮಾಡಿದಾಗ ಅಮ್ಮ ಮಗಳು ಸೇರಿ ನಗುವುದು, ಅಪ್ಪನ ಜನಪ್ರಿಯತೆಯನ್ನು ತಣ್ಣಗೆ ತಬ್ಬಿ ಪ್ರೀತಿಸುವ ಅಮ್ಮ, ತನ್ನ ನಂಬಿಕೆಯನ್ನು ಅಪ್ಪ ಮೊದಲು ಎಷ್ಟೇ ಹೇಳಿದರೂ ಎಂದೂ ಅವರ ಬುದ್ಧಿ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದ ಎಷ್ಟೋ ಕಲಾ ಪ್ರಕಾರಗಳನ್ನು ಈಗ ಅಭ್ಯಾಸ ಮಾಡುತ್ತಾ ಅದರೊಳಗೆ ತಾನು ಮುಳುಗಿರುವಾಗ ಈಕೆಗೆ ಬಾಲ್ಯದ ಸಂಗೀತದ ತರಗತಿಗಳು ಹೆಚ್ಚು ಪ್ರಿಯವೆನಿಸುತ್ತವೆ. ರಾಜು ಅನಂತಸ್ವಾಮಿಯವರ ತರಗತಿಗಳಿಗೆ ಎಂದೂ ಗಂಭೀರವಾಗಿ ಹಾಜರಾಗದ, ಕಾರಂತ ರಂಗಮನೆಯಲ್ಲಿ ಯಾವುದೇ ಕಲೆಯನ್ನೂ ಒಳ ಹೊಕ್ಕು ಕಲಿಯದ, ಆದರೂ ದೂರದಿಂದ ಕಿವಿಗೆ ಬಿದ್ದ ಎಲ್ಲಾ ಹಾಡುಗಳನ್ನು ಬಾಲ್ದಾರ ಮಾಡಿಕೊಂಡು ಮುಂದೊಂದು ದಿನ ರಾಜು ಅನಂತಸ್ವಾಮಿಯವರ ಮುಂದೆ ಹೇಳುವಾಗ ಅಪ್ಪನಿಗೂ ಅಮ್ಮನಿಗೂ ಸಂಗೀತದ ಗುರುಗಳಿಗೂ ಈ ಪ್ರತಿಭೆಯ ಬಗ್ಗೆ ಪರಮಾಶ್ಚರ್ಯ!

ಅಂದು ಐದನೇ ತರಗತಿಯಲ್ಲಿ ‘ಕೃಷ್ಣ ಎನಬಾರದೇ…’ ಎಂಬ ಕೀರ್ತನೆಯನ್ನು ಹಾಡಿದ ದಿಶಾ ‘ಈಗಲೂ ಖುಷಿಯಲ್ಲೂ ಬೇಸರದಲ್ಲೂ ಅದನ್ನೇ ಹಾಡುವೆನು” ಎಂದು ಆಸ್ಥೆಯಿಂದ ನುಡಿಯುತ್ತಾರೆ. ಹಾಡಲು ಬಹಳವಾಗಿ ಒತ್ತುಕೊಟ್ಟ ಪರಮಜ್ಜನೆಂಬ ಹಾಡುಗಾರರನ್ನೂ ಪ್ರೀತಿಯಿಂದ ನೆನೆಯುತ್ತಾರೆ. ಹಾಗೆಯೇ ಒಂದು ದಿನ ಅಚಾನಕ್ಕಾಗಿ ‘ಚೋರ ಚರಣದಾಸ ನಾಟಕವು ತೆರೆ ಕಾಣುವ ಸಮಯದಲ್ಲಿ ಸಖಿಯ ಪಾತ್ರಧಾರಿ ಬಾರದ ಕಾರಣ ನಾಟಕದ ಅಂದಿನ ಶೋ ನಿಭಾಯಿಸುವ ಸಲುವಾಗಿ ಪಾತ್ರದ ಒಳಹೊಕ್ಕು ರಂಗದ ಮುಂದೆ ಪೂರ್ಣ ಪ್ರಮಾಣದ ಕಲಾಕಾರಣಿಯಾಗಿ ತೊಡಗಿಕೊಂಡ ದಿಶಾ ಅಂದು ಅಭೂತಪೂರ್ವ ಚಪ್ಪಾಳೆ ಗಿಟ್ಟಿಸಿದ್ದರು. ನಂತರ ರಂಗಭೂಮಿಯೊಟ್ಟಿಗಿನ ಅವಿನಾಭಾವ ಅನುಬಂಧ ಬಿಟ್ಟೂ ಬಿಡದೆ ನಿತ್ಯದ ಬದುಕಾಗಿ ಹೋಗಿದ್ದು ಕನಸೆಂಬಂತೆ ಈಗಲೂ ನೆನೆಯುತ್ತಾರೆ. ನಂತರ ‘ಕೆಂಪು ಕಣಗಿಲೆ’ಯ ಮೂಲಕ ಸಂಪೂರ್ಣ ರಂಗನಟಿಯಾಗಿ ದಿಶಾ ರಂಗಕ್ಕೆ ಕಾಲಿಟ್ಟರು. ‘ಪುಟ್ಟವಳಾದಾಗ ನನ್ನ ಅಪ್ಪನನ್ನು ನನಗೇ ಬಿಡದಂತೆ ಯಾಕೆ ಹೀಗೆ ಎಲ್ಲರೂ ಮಾತಾಡಿಸುತ್ತಾರೆ? ಅವರು ನನಗೆ ಮಾತ್ರ ಬೇಕು…’

ಎಂದು ಸಿಕ್ಕಾಪಟ್ಟೆ ಪೊಸೆಸಿವ್ ಆಗುತ್ತಿದ್ದ ಹುಡುಗಿ, ಈಗ ತಂತಾನೇ ನಟನ ರಂಗಶಾಲೆಯ ಸಕಲ ಜವಾಬ್ದಾರಿಗಳನ್ನೂ ಎಳೆದು ಮೇಲೆ ಹಾಕಿಕೊಂಡು ಅಣ್ಣ ಸಮೀರನ ಜೊತೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಓಡಾಡುವುದನ್ನು ನೋಡಿದರೆ ಸಂಸ್ಕೃತಿಯ ಜೊತೆಜೊತೆಗೆ ಕಲೆಯೊಂದು ಹುಟ್ಟಿ ಬೆಳೆಸಬಲ್ಲ ದಿಟ್ಟ ಪೀಳಿಗೆಯ ಬಗೆಗೆ ನಂಬಿಕೆ ಹುಟ್ಟುತ್ತದೆ. ಮೊದಲಿನಿಂದಲೂ ಯಾರೊಂದಿಗೂ ಹೆಚ್ಚು ಒಡನಾಡದ ಕಡುಮೌನಿ ದಿಶಾಗೆ ತಾನೊಬ್ಬಳು ಹುಟ್ಟು ತಾರೆ’ ಎಂಬ ಬಗ್ಗೆ ಕಿಂಚಿತ್ತು ಗರ್ವವಾಗಲಿ ಅಹಂಕಾರವಾಗಲಿ ಇಲ್ಲ.

‘ನಾನು ಯಾರೊಂದಿಗೂ ಹೆಚ್ಚು ಬೆರೆಯದ ಮೌನಿ ಅಷ್ಟೇ, ಆದರೆ ಸ್ನೇಹದಲ್ಲೂ ಸಂಬಂಧದಲ್ಲೂ ಅಹಂಕಾರಿಯಲ್ಲ’ ಎನ್ನುವ ಈ ಸಹಜ ಸುಂದರಿಗೆ ಈಗಲೂ ಹೆಚ್ಚು ಸ್ನೇಹಿತರಿಲ್ಲವಂತೆ. ಹೊರಗೆ ಸುತ್ತುವ ಹುಚ್ಚು, ಹರಟೆ ಕೊಚ್ಚುವ ರೂಢಿ, ಸದುಪಯೋಗವಾಗದ ಸಮಯ ಕಳೆಯುವ ಪ್ರವೃತ್ತಿಗಳಿಲ್ಲದ ಈಕೆ ತನ್ನ ಪ್ರವೃತ್ತಿಯನ್ನೇ ಉಸಿರಾಡುವಲ್ಲಿ ಯಾವುದೇ ಆಶ್ಚರ್ಯವಿಲ್ಲ. ಬೇರು ಬಿಟ್ಟು ಎಷ್ಟೇ ದೂರ ಓಡಿದರೂ ಬಳಲಿದಾಗ ಬೇರಿಗೆ ನೀರುಣಿಸಬೇಕು, ತಣಿಸಬೇಕು ಎಂಬ ಸತ್ಯವನ್ನು ಮನಗಂಡಿರುವ ಈ ಹುಡುಗಿ ಇದನ್ನೇ ಇಂದಿನ ಯುವ ಜನತೆಯೂ ಅರಿಯಲಿ ಎಂದು ಕಿವಿಮಾತು ಹೇಳುತ್ತಾರೆ. ಚಿತ್ರರಂಗದ ಅಗತ್ಯ ಹಾಗೂ ಬೇಡಿಕೆಗಳು ಏನೇ ಇದ್ದರೂ ರಂಗಭೂಮಿಯ ವಿಪುಲ ಅವಕಾಶ ಹಾಗೂ ಮಮತೆಯ ಅನುಬಂಧ ಈ ಹುಡುಗಿಯನ್ನು ಹೆಚ್ಚು ಆಕರ್ಷಿಸುತ್ತದೆ ಎನ್ನುವವರು ಅಪರೂಪಕ್ಕೊಮ್ಮೆ ಪ್ರವಾಸ ಬೇಸರವಾದಾಗ ಒಂದು ನೆಚ್ಚಿನ ತಿನಿಸು, ಮೂಕ ಸಂಜೆಗಳೆಲ್ಲೊಂದು ಹಾಡಿನ ಗುನುಗುವಿಕೆ ಇವೆಲ್ಲ ಇವರಿಗೆ ಹೆಚ್ಚು ಪ್ರಿಯ. ಸಾಹಿತ್ಯವನ್ನು ಪ್ರೀತಿಯಿಂದ ಓದಿಕೊಳ್ಳುವ ಈಕೆಗೆ ಕವಿತೆಗಳನ್ನು ಓದುವುದು ಎಲ್ಲ ಪ್ರಕಾರದ ಸಾಹಿತ್ಯಕ್ಕಿಂತಲೂ ಇಷ್ಟವಂತೆ. ದಿನವೂ ಯೋಗ ಮಾಡುವ ಈಕೆಗೆ ಇದೆಲ್ಲದರಿಂದ ದೂರ ನಡೆದರೆ ಏಕಾಂತವೇ ಪ್ರಿಯವಂತೆ! ಎಲ್ಲದರಿಂದ ಬಿಡುವು ಸಿಕ್ಕಿದರೆ ಕೋಣೆಯೊಳಗೆ ನೆಮ್ಮದಿಯಾಗಿ ಇದ್ದು ಬಿಡುವೆ, ಎಲ್ಲೂ ಹೋಗುವುದಿಲ್ಲ’ ಎನ್ನುತ್ತಾರೆ. ಹೊರಗೆಲ್ಲೋ ತನ್ನನ್ನು ಹುಡುಕಲಾರೆ, ಒಳಗಿನ ನಾನು ನನಗೆ ಮುಖ್ಯವೆನ್ನುವ ಅಂತರ್ಮುಖಿ ದಿಶಾ.

‘ಏನನ್ನಾದರೂ ನಂಬಿದರೆ ಸಂಶಯವಿಲ್ಲದಂತೆ ನಂಬು, ಏನಾದರೂ ಮಾಡಿದರೆ ಲೋಪವಿಲ್ಲದಂತೆ ಮಾಡು’ ಎಂಬ ಅಪ್ಪ ನಂಬಿದ ನುಡಿಯನ್ನು ಈಕೆ ಅಕ್ಷರಶಃ ನಂಬುತ್ತಾರೆ. ಹಲವಾರು ಎಡರು ತೊಡರುಗಳ ನಡುವೆಯೂ ದಡ ಮುಟ್ಟಿದ ಅಪ್ಪನಂತೆ ನಂಬಿಕೆ ಇಟ್ಟವರಿಲ್ಲ ಎಂದೇ ಹೇಳುತ್ತಾರೆ. ಅಮ್ಮನ ಮಮತೆ ಕರುಣೆ ಪ್ರೀತಿ, ಅಪ್ಪನ ನಂಬಿಕೆ ಹಾಗೂ ಆತ್ಮವಿಶ್ವಾಸ, ಅಣ್ಣನ (ಮೇಘ ಸಮೀರ) ಕಾರ್ಯ ಬದ್ಧತೆ ಹಾಗೂ ಚುರುಕುತನ ತನಗೆ ಯಾವಾಗಲೂ ಆದರ್ಶವೆಂಬ ಈಕೆ ಅವರ ಹಾದಿಯಲ್ಲಿ ನಡೆಯುವುದರಲ್ಲಿ ಹೆಮ್ಮೆ ಇದೆ ಎನ್ನುತ್ತಾರೆ. ಶಾಂತಿಪ್ರಿಯರಾಗಿ ವಚನಬದ್ದರಾಗಿ ನಡೆಯುವ ಹಾದಿಯಲ್ಲಿ ಎಂದಿಗೂ ಸೋಲಿಲ್ಲ ಎಂದು ಬಲವಾಗಿ ನಂಬುತ್ತಾರೆ. ದಿಶಾ ಕನ್ನಡದ ಭರವಸೆಯ ನಟಿ ಹಾಗೂ ನಟನೆಗೂ ಮೀರಿದ ಒಂದು ನವಿರು ಕಾವ್ಯದಂತಹ ಹುಡುಗಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!