– ಕೀರ್ತಿ ಬೈಂದೂರು
ಕಳೆದ ಹದಿನಾರು ವರ್ಷಗಳಿಂದ ಮೈಸೂರಿನ ಒಡನಾಡಿ ಸಂಸ್ಥೆ ಮಾನವ ಸಾಗಾಣಿಕೆ, ಲಿಂಗ ತಾರತಮ್ಯ, ಲೈಂಗಿಕ ಶೋಷಣೆಗಳ ಕುರಿತು ಅರಿವನ್ನು ಮೂಡಿಸುವ ಸಲುವಾಗಿ ‘yoga Stops Traffick’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರ ಹಿಂದೆ ಒಂದು ಕಥೆಯಿದೆ.
ಅವಳು ಚಂದದ ಹುಡುಗಿ. ಮಂಡ್ಯದ ಕುಗ್ರಾಮವೊಂದರಲ್ಲಿ ಗರಿಹೊದಿಕೆಯ ಸೂರಿನಡಿ ಅವಳ ಬದುಕು ಸಾಗುತ್ತಿತ್ತು. ಮನೆಯಲ್ಲಿ 60 ವರ್ಷ ಮೇಲ್ಪಟ್ಟ ಮೂವರು ಮುದುಕಿಯರು ಬಿಟ್ಟರೆ ಒಬ್ಬ ಗಂಡಸರೂ ಇರಲಿಲ್ಲ. ಮೂವರು ಮುದುಕಿಯರೂ ಅಂಗವೈಕಲ್ಯರು. ಹಾಗಾಗಿ ಮೂವರು ಎಲ್ಲೇ ಹೋಗಲಿ, ಒಟ್ಟಿಗೇ ಹೋಗುವುದು ಅಭ್ಯಾಸ. ವಿಚಿತ್ರ ಅನ್ನಿಸಬಹುದು, ನಿತ್ಯ ಕರ್ಮಗಳಿಂದ ಹಿಡಿದು, ನಿದ್ರೆಯ ತನಕವೂ! ಆದರೆ ಬದುಕಿಗಾಗಿ ಮೊಮ್ಮಗಳನ್ನೇ ಆಶ್ರಯಿಸಿದ್ದರು.
ಇಂತಹ ದುರ್ಬಲ ಸ್ಥಿತಿಯಲ್ಲಿರುವ ಹೆಣ್ಣುಮಕ್ಕಳ ಮೇಲೆ ಸಮಾಜ ಕಣ್ಣಿಟ್ಟೇ ಇರುತ್ತದೆ. ಮೂವರೂ ಮುದುಕಿಯರನ್ನು ಒಪ್ಪಿಸುವ ಪ್ರಯತ್ನ ಬಹಳ ನಾಜೂಕಾಗಿ ನಡೆಯಿತು. ‘ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸವೊಂದು ಖಾಲಿಯಿದೆ. ನಿಮ್ಮ ಮೊಮ್ಮಗಳನ್ನೇ ಕಳಿಸಿಕೊಡಿ. ತಿಂಗಳಿಗೆ 12 ಸಾವಿರದಷ್ಟು ಸಂಬಳ ಸಿಗುತ್ತದಲ್ಲಾ. ಕಳಿಸಬಾರದೇಕೆ?’ ಎಂದ ಮಾತಿಗೆ ಮೂವರು ಮುದುಕಿಯರು ಸಮ್ಮತಿಸಿದರು. ಹುಡುಗಿಯೂ ಒಪ್ಪಿ, ಮೈಸೂರಿನ ಬೋಗಾದಿಗೆ ಬಂದಿಳಿದಳು.
ಎದುರು ನೋಟಕ್ಕೆ ಅದು ಬ್ಯೂಟಿಪಾರ್ಲರ್ರೇ. ಒಳಹೊಕ್ಕರೆ ಅದೊಂದು ಸ್ಪಾ ಸೆಂಟರ್ ಆಗಿತ್ತು. ಅದೆಷ್ಟೋ ಗಂಡಸರೆಲ್ಲ ಬರುತ್ತಿದ್ದದ್ದನ್ನು ನೋಡಿದಳು. ಎಣ್ಣೆ ಉಜ್ಜುವ ನೆಪದಲ್ಲಿ ಬೇರೆಯದ್ದೇನೊ ನಡೆಯುತ್ತಿದೆ ಎಂದು ಕಾಣದಷ್ಟು ಮೂರ್ಖಿಯಾಗಿರಲಿಲ್ಲ ಹುಡುಗಿ. ತನ್ನಿಂದ ಈ ಕೆಲಸ ಸಾಧ್ಯವಿಲ್ಲವೆಂದು ಮಾಲೀಕರಿಗೆ ಹೇಳಿಯೇಬಿಟ್ಟಳು. ‘ಇದೊಂದು ಚಿಕಿತ್ಸಕ ಕ್ರಿಯೆ. ನೀನು ನರ್ಸ್‌ನಂತೆ ಎಣ್ಣೆ ಉಜ್ಜಿ ಆರೈಕೆ ಮಾಡು ಸಾಕು. ಇದರಲ್ಲಿ ತಪ್ಪೇನಿಲ್ಲ’ ಎಂದ ಮಾಲೀಕನ ಮಾತಿಗೆ ಬೇರೇನೂ ಹೇಳಲು ತೋಚದೆ ಸುಮ್ಮನಾದಳು. ಬಂದವ ಎಣ್ಣೆ ಉಜ್ಜಿಸಿಕೊಂಡು ಸುಮ್ಮನೆ ತೆರಳುತ್ತಾನೆಯೇ? ವಿಚಿತ್ರವಾಗಿ ವರ್ತಿಸುತ್ತಾನೆ. ಏಕೆಂದರೆ ಆತ ರೋಗಿ
ಅಲ್ಲ; ಇವಳು ನರ್ಸ್ ಅಲ್ಲ. ಬಂದವರೆಲ್ಲ ಮೈಮುಟ್ಟುತ್ತಿದ್ದರೆ ಈಕೆಗೆ ಅಸಹ್ಯವೆನಿಸುತ್ತಿತ್ತು. ದೂರು ನೀಡಲು ಹೋದರೆ, ‘ಚಿಕ್ಕ ಪುಟ್ಟದ್ದನ್ನೆಲ್ಲ ಸಹಿಸಿಕೊಳ್ಳಬೇಕು’ ಮತ್ತದೇ ತಲೆ ಸವರುವ ಮಾತು.
ಅಲ್ಲಿದ್ದ ಬೇರೆ ಹುಡುಗಿಯರಿಗೆ ಮೂವತ್ತು ಸಾವಿರ ಸಂಬಳವಿದೆ ಎನ್ನುವ ಸಂಗತಿ ತಿಳಿಯಿತು. ಅಷ್ಟು ಸಂಬಳ ಸಿಗದಿದ್ದರೂ ಪರವಾಗಿಲ್ಲ, ತಾನು ಇದ್ದಂತೆಯೇ ಇರುತ್ತೇನೆ ಎಂದುಕೊಂಡಳು. ಅವಳಿಗೆ ಮೈಸೂರು ಹೊಸತು.
ಉಳಿದ ಹುಡುಗಿಯರು ಕೆಲಸ ಮುಗಿಸಿ ಮನೆಗೆ ತೆರಳಿದರೆ ಈಕೆ ಮಾತ್ರ ಅಲ್ಲೇ ಉಳಿದುಕೊಳ್ಳುತ್ತಿದ್ದಳು. ಒಂದು ದಿನ ರಾತ್ರಿ ಮಾಲೀಕ ಅವಳನ್ನು ಅತ್ಯಾಚಾರ ಮಾಡಿದ್ದ. ಅಷ್ಟೇ ಅಲ್ಲ, ಅದರ ವೀಡಿಯೊ ಮಾಡಿಟ್ಟುಕೊಂಡ.
ಬೆದರಿಕೆ, ಅಸಹಾಯಕತೆಗೆ ಕಟ್ಟುಬಿದ್ದು, ಆತ ಹೇಳಿದ ಕೆಲಸವನ್ನು ಮಾಡತೊಡಗಿದಳು.
ಕಾಲ ಕಳೆಯುತ್ತಿತ್ತು. ಈ ಜಾಲದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಅವರು ಪತ್ತೆ ಮಾಡಿ, ಹುಡುಗಿಯನ್ನು ರಕ್ಷಿಸಿದರು. ಕನ್ನಡ ಚಿತ್ರರಂಗದ ಇಬ್ಬರು ಪ್ರಸಿದ್ಧ ಕಲಾವಿದರು ಸಿಕ್ಕಿಬಿದ್ದದ್ದು ಇದೇ ಹುಡುಗಿಯ ಪ್ರಕರಣದಲ್ಲಿ!
ಚಾಮರಾಜನಗರದ ಸೌಮ್ಯಳದ್ದೂ ಇದೇ ಕತೆ (ಹೆಸರನ್ನು ಬದಲಿಸಲಾಗಿದೆ). ತಾಯಿ ತೀರಿದ ಕೆಲವೇ ಸಮಯದಲ್ಲಿ ತಂದೆ ಇನ್ನೊಂದು ಮದುವೆಯಾಗಿದ್ದ. ಮನೆಗೆ ಬಂದ ಮಲತಾಯಿ ಸೌಮ್ಯ ಮತ್ತವಳ ತಂಗಿ ಸ್ವಾತಿಯ ಶಾಲೆ ಬಿಡಿಸಿ, ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ದಳು. ಚಿಕ್ಕಮ್ಮನ ಹೊಡೆತ, ಬೈಗುಳ ಸಹಿಸಲಾರದೆ ಸೌಮ್ಯ ಹುಡುಗನೊಬ್ಬನನ್ನು ಪ್ರೀತಿಸಿದಳು. ಎಲ್ಲರ ಕಣ್ತಪ್ಪಿಸಿ, ಆತನೊಂದಿಗೆ ಕೊಡಗಿಗೆ ಬಂದು ಮದುವೆಯಾದಳು.
ಕೊಡಗು ರೆಸಾರ್ಟ್‌ನವರ ಪರಿಚಯ ಬೆಳೆದು, ಅವರಿಬ್ಬರೂ ಅಲ್ಲೇ ಕೆಲಸಕ್ಕೂ ಸೇರುತ್ತಾರೆ. ರೆಸಾರ್ಟ್ ಮಾಲೀಕರು ಗಂಡನನ್ನು ಒಲಿಸಿಕೊಂಡು, ದುಡಿಮೆಯ ದಾರಿಗಳನ್ನು ಪರಿಚಯಿಸುತ್ತಿದ್ದೇವೆ ಎಂಬೆಲ್ಲ
ಮಾತುಗಳಿಂದ ಮರುಳು ಮಾಡುತ್ತಾರೆ. ಒಲ್ಲದ ಹೆಂಡತಿಯನ್ನೂ ಒಪ್ಪಿಸಿ, ಅವಳ ತಂಗಿ ಸ್ವಾತಿಯನ್ನೂ
ಕರೆಸಿಕೊಳ್ಳುತ್ತಾನೆ. ದೊಡ್ಡ ದೊಡ್ಡ ಬಂಗಲೆ, ಹೋಂಸ್ಟೇಗಳಲ್ಲಿ ಅವರಿಬ್ಬರನ್ನಿರಿಸಿ, ದಂಧೆಗಿಳಿಯುತ್ತಾರೆ.
ವೇಶ್ಯಾವೃತ್ತಿಯೆಂದು ಜನರ ತಿಳಿವಳಿಕೆ. ಆದರೆ ಇದು ಕೂಡ ಅತ್ಯಾಚಾರವೇ! ಅವರಿಬ್ಬರನ್ನು ರಕ್ಷಿಸಿ, ಒಡನಾಡಿ ಸಂಸ್ಥೆಗೆ ಕರೆ ತಂದಾಗ ಹದಿನಾಲ್ಕು – ಹದಿನೈದರ ಬಾಲೆಯರು ಅವರು. ಮತ್ತೆ ಅ, ಆ, ಇ, ಈ.. ಕಲಿಕೆ ಮೊದಲಿಂದ ಆರಂಭವಾಗಿ ಹತ್ತನೇ ತರಗತಿಯವರೆಗೆ ಶಿಕ್ಷಣ ಕಲಿತ ನಿದರ್ಶನಗಳಿವೆ.
ಇನ್ನು ಕೆಲ ಹುಡುಗಿಯರು ಎಷ್ಟೋ ವರ್ಷಗಳಿಂದ ಇಂತಹ ಕೂಪಕ್ಕೆ ಸಿಕ್ಕಿ, ಬೇಸತ್ತು, ಸಹಜ ಬದುಕಿಗೆ ಹೊಂದಿಕೊಳ್ಳಲಾರದಷ್ಟು ಅದೇ ಬಣ್ಣ-ಬೆಡಗಿನ ಜೀವನಕ್ಕೆ ಒಗ್ಗಿ ಹೋದವರಿದ್ದಾರೆ. ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಬಾಲ್ಯ, ಯೌವನವನ್ನು ಮಾನವ ಸಾಗಾಣಿಕೆಯ ಉಪಜಗತ್ತಿನೊಳಗೆ ಕಳೆದುಕೊಂಡಿದ್ದಾರೆ.
ಕಳೆದ 16 ವರ್ಷಗಳಿಂದ ಮೈಸೂರಿನ ಒಡನಾಡಿ ಸಂಸ್ಥೆ ಮಾನವ ಸಾಗಾಣಿಕೆ, ಲಿಂಗ ತಾರತಮ್ಯ, ಲೈಂಗಿಕ ಶೋಷಣೆ ಈ ಕುರಿತು ಅರಿವನ್ನು ಮೂಡಿಸುವ ಸಲುವಾಗಿ ‘yoga Stops Traffick’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರ ಹಿಂದೆ ಒಂದು ಕಥೆಯಿದೆ. ಲಂಡನ್‌ನ ಪತ್ರಕರ್ತೆ ಸ್ಯಾರಾ ಹ್ಯಾರಿಸ್ ಮತ್ತು ಇಂಗ್ಲೆಂಡಿನಲ್ಲಿ ಸೂಜಿ ಚಿಕಿತ್ಸಕರಾಗಿದ್ದ ಶ್ಯಾನ್ ಕ್ಲೇಯರ್ ಒಡನಾಡಿ ಸಂಸ್ಥೆಗೆ ಅಧ್ಯಯನ ದೃಷ್ಟಿಯಿಂದ ಬಂದಿದ್ದರು. ಇಬ್ಬರಲ್ಲೂ ಪ್ರೇಮಾಂಕುರಿಸಿ, ಒಡನಾಡಿಯಲ್ಲೇ ಮದುವೆಯೂ ಆಯಿತು.
ಒಲ್ಲದ ಮನಸ್ಸಿನಲ್ಲಿ ಹೊರಡುವ ತಯಾರಿಯಲ್ಲಿದ್ದಾಗ, ಸಂಸ್ಥೆಯೊಂದಿಗೆ ಕಿಲುಬಾಗದ ಬಾಂಧವ್ಯ ತಂತುವನ್ನು ಬೆಸೆಯಬೇಕೆನಿಸಿತು. ಅವರಿಬ್ಬರೂ ಯೋಗಾಭ್ಯಾಸಿಗಳಾಗಿದ್ದರಿಂದ ಲೈಂಗಿಕ ಶೋಷಣೆಯನ್ನು ತಡೆಗಟ್ಟುವ ಮಾನವೀಯ ಸಾಧನವಾಗಿ ಯೋಗವನ್ನು ಬಳಸಿಕೊಳ್ಳಬಹುದೆಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಅವರು ಪರಿಕಲ್ಪನೆ ನೀಡಿದರು. ಹಾಗಾಗಿ 2008ರಲ್ಲಿ ಅಂತರಾಷ್ಟ್ರೀಯ ಕಾರ್ಯಕ್ರಮದ ಮೂಲಕ ಯೋಗವನ್ನು ಮೊತ್ತ ಮೊದಲ ಬಾರಿಗೆ ಪರಿಚಯಿಸಿತು. ಕಾರ್ಯಕ್ರಮದ ವ್ಯಾಪ್ತಿ ಈಗ 49 ದೇಶಗಳ 168 ಪ್ರಮುಖ ನಗರಗಳಿಗೆ ವಿಸ್ತರಿಸಿದೆ.
ಇದೇ ಶನಿವಾರ (ಮಾ.29) ರಂದು ಜಗದ ಗಮನವನ್ನು ಮೈಸೂರು ತನ್ನತ್ತ ಸೆಳೆಯಲಿದೆ. ಆವತ್ತು ಬೆಳಿಗ್ಗೆ 7:30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ‘yoga Stops Traffick’ ಕಾರ್ಯಕ್ರಮ ಆರಂಭಗೊಳ್ಳಲಿದೆ. ಏಕಕಾಲಕ್ಕೆ ವಿಶ್ವದ ಜನರೆಲ್ಲ ಯೋಗವನ್ನು ಮಾಡಲಿದ್ದಾರೆ. ಯೋಗವೆಂದರೆ ಬರಿಯ ಆಸನ, ವ್ಯಾಯಾಮ, ಸಾತ್ವಿಕ ಆಹಾರ ಸೇವನೆ ಮಾತ್ರವಲ್ಲ.
ಯೋಗಮಾಡುವುದೆಂದರೆ ನಿಜಾರ್ಥದಲ್ಲಿ ಯೋಗಿಗಳಾಗುವುದು. ಎಲ್ಲೇ ಶೋಷಣೆ ನಡೆಯುತ್ತಿದ್ದರೂ ಅದನ್ನು ವಿರೋಧಿಸುವುದೂ ಕೂಡ ಬಹಳ ಮುಖ್ಯ. ಇದು ಸಾಮಾಜಿಕ ಮತ್ತು ಮಾನವೀಯ ಸಂಬಂಧಗಳನ್ನು ಅನುಸಂಧಾನಿಸುವ ಅಪರೂಪದ ಕಾರ್ಯಕ್ರಮ ಎಂಬುದು ಸಂಸ್ಥೆಯ ನಿರ್ಮಾತೃಗಳಾದ ಸ್ಟ್ಯಾನ್ಲಿ ಮತ್ತು ಪರಶು ಅವರ ಅಭಿಪ್ರಾಯ.
keerthisba2018@gmail.com
ಕಾರ್ಯಕ್ರಮದ ಜೊತೆಗೆ ಯೋಗ ವಸ್ತ್ರವನ್ನು ಜಗತ್ತಿನ ಎಲ್ಲ ಜನರಿಗೆ ಮಾರಾಟ ಮಾಡುವ ಮೂಲಕ ಒಡನಾಡಿ ಸಂಸ್ಥೆ ದೇಣಿಗೆ ಸಂಗ್ರಹಕ್ಕೆ ಮುಂದಾಗುತ್ತಿದೆ. ಒಡನಾಡಿಯ ‘ಒಡಲು’ ಮತ್ತು ‘ಮಡಿಲು’ ಸಂಸ್ಥೆಯಲ್ಲಿರುವ ಮಕ್ಕಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಿ ಕೊಡುವುದಕ್ಕೆ ಈ ದೇಣಿಗೆ ಸಹಾಯಕಾರಿ.
-ಪರಶು-ಸ್ಟ್ಯಾನ್ಲಿ