Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಪಾರಿವಾಳಗಳಿಗೆ ಯಾಕೆ ಕಾಳು ಹಾಕಬಾರದು?

ಕೀರ್ತಿ

ರೆಕ್ಕೆ ಬಲಿತ ಹಕ್ಕಿ ತನ್ನ ಆಹಾರವನ್ನು ತಾನೇ ಹುಡುಕುತ್ತಾ ವಲಸೆ ಹೋಗುವುದು ನಿಸರ್ಗ ನಿಯಮ. ಆದರೆ ವಿಪರೀತ ಪಕ್ಷಿ ದಯೆಯನ್ನು ಮೈಗೂಡಿಸಿಕೊಂಡಿರುವ ಹಲವರು ಮೈಸೂರಿನ ಅರಮನೆಯ ಮುಂದೆ ಪಾರಿವಾಳಗಳಿಗೆ ಕಾಳು ಹಾಕುತ್ತಾ ಅನೇಕ ಅವಾಂತರಗಳಿಗೆ ಕಾರಣರಾದರು.

ನಿಜ ಹೇಳಬೇಕಾದರೆ ಇಲ್ಲಿರುವ ಪಾರಿವಾಳಗಳು ಸಾಕುವುದಕ್ಕೆ ಯೋಗ್ಯವಲ್ಲ. ಅವು ‘ಬ್ಲೂ ರಾಕ್ ಪಿಜನ್ಸ್’ ತಳಿಗಳು. ಅಂದರೆ, ಬೆಟ್ಟ ಗುಡ್ಡಗಳೇ ಈ ಪಾರಿವಾಳಗಳ ಆವಾಸಸ್ಥಾನ. ಮನುಷ್ಯನ ನಗರೀಕರಣದ ಹೊಡೆತಕ್ಕೆ ಸಿಲುಕಿ, ಇಂದು ನಗರದಲ್ಲೇ ತಮ್ಮ ವಾಸ್ತವ್ಯ ಕಂಡುಕೊಂಡಿರುವುದು ದುರಂತ. ನಿಸರ್ಗದಲ್ಲಿರುವ ಅಷ್ಟೂ ಸಸ್ಯಾಹಾರಿ, ಮಾಂಸಾಹಾರಿ ಪ್ರಾಣಿ ಪಕ್ಷಿಗಳು ತಮ್ಮ ಮರಿಗಳಿಗೆ ಆಹಾರ ಪೂರೈಸುವ ಸಂದರ್ಭದಲ್ಲಿ ಹುಳಹುಪ್ಪಟೆಯನ್ನು ನೀಡುತ್ತವೆ. ಆದರೆ ಈ ಪಾರಿವಾಳಗಳು ಮಾತ್ರ ಸಸ್ಯಾಹಾರದ ಹೊರತಾಗಿ ಏನನ್ನೂ ನೀಡುವುದಿಲ್ಲವೆಂದು ಪರಿಸರಪ್ರೇಮಿ ಶೈಲಜೇಶ್ ತಿಳಿಸುತ್ತಾರೆ. ಇವುಗಳು ಇಲ್ಲೇ ನೆಲೆ ನಿಲ್ಲುವುದಕ್ಕೆ ಮುಖ್ಯ ಕಾರಣ ಸುಲಭಕ್ಕೆ ದಕ್ಕುವ ಆಹಾರ.

ಹೇಳಬೇಕಾದ ಸಂಗತಿಯೊಂದಿದೆ. ‘ಪೆರಿಗ್ರೀನ್ ಫಾಲ್ಕಾನ್’ ಎಂಬ ಹಕ್ಕಿಗಳು ಬೇರೆ ಭಾಗದಿಂದ ವಲಸೆ ಬರುತ್ತವೆ. ಕೆಲ ವರ್ಷಗಳಿಂದ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪಾರಿವಾಳಗಳನ್ನು ತಿಂದು ಬದುಕುವ ಪಕ್ಷಿ ಸಂಕುಲವದು. ಆದರೆ ನಗರದಲ್ಲೇ ವಾಸವಿರುವ ಈ ಪಾರಿವಾಳಗಳು ಆಹಾರಕ್ಕಾಗಿ ಬೇರೆ ಭಾಗಕ್ಕೆ ವಲಸೆ ಹೋಗುವ ಅನಿವಾರ್ಯತೆಯೇ ಎದುರಾಗುವುದಿಲ್ಲ. ಹೀಗಾದಾಗ ಸೃಷ್ಟಿಯ ಆಹಾರ ಸರಪಳಿ ವ್ಯತ್ಯಯವಾಗುತ್ತದೆ. ಗೋಡೆಯಲ್ಲಿರುವ ಹಲ್ಲಿಗೆ ಹುಳವೇ ಆಹಾರ. ಹಲ್ಲಿಯ ಬಾಯಿಗೆ ಪಾಪದ ಹುಳ ಆಹಾರವಾಗುತ್ತದಲ್ಲಾ ಎಂದು ಕಾಪಾಡಲು ಹೊರಟರೆ ಹಲ್ಲಿಗೆ ಆಹಾರ? ಇದು ಸಣ್ಣ ಉದಾಹರಣೆಯಷ್ಟೆ. ಆಹಾರ ಸರಪಳಿಯಲ್ಲಿ ಮಾನವನ ಹಸ್ತಕ್ಷೇಪ ತಂದೊಡ್ಡುವ ಭೀಕರತೆಯನ್ನು ವಿಶೇಷವಾಗಿ ಹೇಳಬೇಕಿಲ್ಲ.

ಸರಿಸುಮಾರು ಎಂಟು ಹತ್ತು ವರ್ಷಗಳ ಹಿಂದಿನಿಂದಲೂ ಪಾರಿವಾಳಗಳಿಗೆ ಕಾಳು ಹಾಕುವುದನ್ನು ಕೆಲ ಪರಿಸರ ಪ್ರೇಮಿಗಳು ವಿರೋಧಿಸಿದ್ದರು. ಪಾರಿವಾಳಗಳು ಕಾಳುಗಳನ್ನೆಲ್ಲ ತಿಂದ ಮೇಲೆ ಹಾಕುವ ಹಿಕ್ಕೆ ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಹಾಳುಗೆಡವುತ್ತದೆಂದು ತಜ್ಞರು ಗಮನಿಸಿದ್ದರು. ವಿಷಯವನ್ನು ಸಂಬಂಽಸಿದ ಅಽಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೂ ಪ್ರಯೋಜನವಾಗಿಲ್ಲ. ಹೇಳಿ ಕೇಳಿ ಮೈಸೂರು ಅರಮನೆ ಜಗತ್ಪ್ರಸಿದ್ಧ. ಇನ್ನೇನು ದಸರೆಯ ಸಿದ್ಧತೆ ಭರದಿಂದ ಸಾಗುತ್ತಿದೆ. ಮೊದಲೆಲ್ಲ ಅರಮನೆಯನ್ನು ಗುಡಿಸಿದರೆ ಸ್ವಚ್ಛವಾಗುತ್ತಿತ್ತು. ಆದರೀಗ ಬ್ಲೂ ರಾಕ್ ಪಿಜನ್‌ಗಳ ಹಿಕ್ಕೆ ಅಂಟಿನಂತಾಗಿ, ತೆಗೆಯುವುದಕ್ಕೆ ಮೆಶಿನ್‌ಗಳ ಸಹಾಯ ಬೇಕಾಗಿತ್ತು.

ಇಂತಹ ಪಾರಿವಾಳಗಳಿಂದ ಬರಬಹುದಾದ ರೋಗಗಳ ಬಗ್ಗೆ ಈಗಾಗಲೇ ನುರಿತ ವೈದ್ಯರು ಅನೇಕ ಬಾರಿ ಆಧಾರ ಸಮೇತ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು. ಕ್ಲೈಮೋಡಿಯಾ ಸಿಟ್ರಸ್ ಎನ್ನುವ ಕಾಯಿಲೆ ಇಂತಹ ಹಕ್ಕಿಗಳ ಮೂಲಕವೇ ಮನುಷ್ಯನನ್ನು ಬಾಧಿಸುತ್ತಿದೆ ಎಂದಮೇಲೂ ಜನರಿಗೆಲ್ಲ ಅದೆಂತಹ ನಿರ್ಲ್ಯಕ್ಷ್ಯ ಭಾವ!

ಪಾರಿವಾಳಗಳಿಗೆ ಕಾಳು ಹಾಕುವುದಕ್ಕಾಗಿಯೇ ‘ಹಲವು ಬಳಗಗಳಿದ್ದವು. ಇವರ ಆದಾಯದ ಮೂಲ ಬಗೆಬಗೆಯವಿದ್ದರೂ ಪಾರಿವಾಳಗಳಿಗೆ ಕಾಳು ಹಾಕುವುದರಲ್ಲಿ ಎಲ್ಲರಿಗೂ ಒಮ್ಮತವಿತ್ತು ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ‘ಹ್ಯಾಪಿ ಬರ್ತಡೇ’, ‘ಮದುವೆಯ ವಾರ್ಷಿಕೋತ್ಸವ’ ಎಂದು ಬರೆಸಿದ ಕಾಳುಗಳನ್ನು ಪಾರಿವಾಳಗಳಿಗೆ ಹಾಕುವುದು ಟ್ರೆಂಡ್ ಆಗಿತ್ತು. ಪ್ರಿ ವೆಡ್ಡಿಂಗ್ ಶೂಟ್ ಗಳಿಗಂತೂ ಪಾರಿವಾಳಗಳು ನಿತ್ಯ ಉಚಿತ. ಕಾಳುಗಳನ್ನು ಸುರಿದು ಒಂದೆಡೆ ಅವುಗಳನ್ನು ಸೇರಿಸಿ, ಪಕ್ಕದಲ್ಲಿ ಗಾಳಿ ತುಂಬಿದ ಬಲೂನ್ ಒಡೆದರೆ ಭಯಕ್ಕೆ ಪಾರಿವಾಳಗಳೆಲ್ಲ ಹಾರುತ್ತವೆ. ವಧುವರರು ಅವುಗಳ ಎದುರು ನಿಂತರೆ, ಪಾರಿವಾಳಗಳ ಹಿಂಡಿನಲ್ಲಿ ಬಿಂದಾಸ್ ಜೋಡಿ ಚಿತ್ರ!

ಅರಮನೆ ಎದುರು ಮಾತ್ರವಲ್ಲದೆ, ಜೆಎಸ್‌ಎಸ್ ಸಂಸ್ಥೆ, ಚಿಕ್ಕ ಗಡಿಯಾರ ಸೇರಿದಂತೆ ಅನೇಕ ಕಡೆಗಳಲ್ಲಿ ಪಾರಿವಾಳಗಳಿಗೆ ಕಾಳು ಹಾಕುವವರ ಸಂಖ್ಯೆ ಹೆಚ್ಚಾಗಿತ್ತು. ವನ್ಯ ಜಗತ್ತಿಗೆ ಸೇರಿದ ಇಂತಹ ಪ್ರಾಣಿಗಳಿಗೆ ಆಹಾರ ನೀಡುವುದಾಗಲಿ, ಕಸಿದುಕೊಳ್ಳುವುದಾಗಲಿ ಸರಿಯಲ್ಲವೆಂಬುದು ಪರಿಸರ ಪ್ರೇಮಿಗಳ ಕೂಗು. ಇತ್ತೀಚೆಗಷ್ಟೆ ಸಭೆ ಸೇರಿ, ಇನ್ನು ಕಾಳು ಹಾಕುವುದಿಲ್ಲವೆಂದವರೂ ಈಗ ಮಾರನೆಯ ದಿನದಿಂದ ಈ ಕೆಲಸವನ್ನು ಮತ್ತೆ ಮುಂದುವರಿಸಿದ್ದಾರೆ.

keerthisba@gmail.com

Tags: