ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ ರೂಪುರೇಷೆ ಹೇಗಿರಬೇಕು ಎಂಬ ಕುರಿತು ಭೈರಪ್ಪನವರನ್ನು ಹತ್ತಿರದಿಂದ ಬಲ್ಲವರು ಮತ್ತು ಆಳವಾಗಿ ಓದಿಕೊಂಡವರು ‘ಆಂದೋಲನ’ ದಿನಪತ್ರಿಕೆಯ ವಾರದ ಆನ್‌ಲೈನ್ ಸಂವಾದದಲ್ಲಿ ಮಾತನಾಡಿದ್ದಾರೆ. ಸಂವಾದದಲ್ಲಿ ಪಾಲ್ಗೊಂಡವರ ಆಯ್ದ ಮಾತುಗಳು ಇಲ್ಲಿ ಅಕ್ಷರ ರೂಪದಲ್ಲಿವೆ.
ಚರ್ಚೆಯಲ್ಲಿ ಭಾಗವಹಿಸಿದ್ದವರು ಡಾ.ಕೃಷ್ಣಮೂರ್ತಿ ಹನೂರು, ಡಾ.ದೀಪಾ ಫಡ್ಕೆ, ಸಹನಾ ವಿಜಯಕುಮಾರ್, ಡಾ.ಅಜಕ್ಕಳ ಗಿರೀಶ್ ಭಟ್ ಮತ್ತು ಒಡನಾಡಿ ಪರಶುರಾಮ್
ಭೈರಪ್ಪನವರ ನೈಜ ಒಲವು ಇದ್ದದು ಓದುವ ಬಡ ವಿದ್ಯಾರ್ಥಿಗಳ ಮೇಲೆ: ಭೈರಪ್ಪನವರ ಕಾದಂಬರಿಗಳು ಎಡ ಅಥವಾ ಬಲದ ಪರವಾಗಿ ಇಲ್ಲ. ನೇರವಾಗಿ ಮನುಷ್ಯ ಗುಣಗಳ ಕುರಿತಾಗಿ ಬರೆದಿದ್ದಾರೆ. ಆದರೆ ಕೆಲವರು ಅವರನ್ನು ಪೂರ್ವಗ್ರಹ ಸಾಹಿತಿಯನ್ನಾಗಿ ಮಾಡಿಬಿಟ್ಟಿದ್ದಾರೆ. ಎಸ್.ಎಲ್.ಭೈರಪ್ಪನವರ ಸಮಗ್ರ ಕೃತಿಗಳಿರುವ ಒಂದು ಗ್ರಂಥಭಂಡಾರವಾದರೆ ಉಪಯುಕ್ತ. ಭೈರಪ್ಪನವರು ಹೆಚ್ಚು ಓಡಾಡುತ್ತಿದ್ದ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಬೇಕು. ಅವರು ನಿರ್ದಿಷ್ಟ ವ್ಯಕ್ತಿ ಅಥವಾ ನಿಲುವಿನ ಪರವಾಗಿ ಇರಲಿಲ್ಲ, ಒಲವಿದ್ದದ್ದು ಓದುವ ಬಡ ವಿದ್ಯಾರ್ಥಿಗಳ ಮೇಲೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಸ್ಥಿತಿ ಭೈರಪ್ಪನವರಿಗೆ ಇದ್ದುದರಿಂದ ಅವರ ಸ್ಮಾರಕದ ಜೊತೆಗೆ ಬಡವಿದ್ಯಾರ್ಥಿಗಳಿಗೆ ಅನುಕೂಲಕರವಾದ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಪ್ರಯೋಜನವಾಗಬಹುದು. ಸ್ಮಾರಕದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾಕ್ಷ್ಯಚಿತ್ರಗಳ ಪ್ರದರ್ಶನವಾಗಬೇಕು. ಬೇರೆ ದೇಶಗಳ ಸ್ಮಾರಕಗಳಲ್ಲಿ ಪ್ರತಿದಿನ ಸಾಕ್ಷ್ಯಚಿತ್ರ ಪ್ರದರ್ಶನವಾಗುತ್ತದೆ.
ಭೈರಪ್ಪನವರ ಸ್ಮಾರಕದಲ್ಲಿಯೂ ದಿನನಿತ್ಯ ಸಾಕ್ಷ್ಯಚಿತ್ರ ಪ್ರದರ್ಶನವಾಗಬೇಕು. ಭೈರಪ್ಪನವರ ಮೆಚ್ಚಿನ ಪುಸ್ತಕಗಳು, ಭೈರಪ್ಪನವರ ಸಮಗ್ರ ಸಾಹಿತ್ಯ, ನುಡಿಚಿತ್ರ ನಿರಂತರವಾಗಿ ಸಿಕ್ಕರೆ ಕೃತಿಗಳು ಜೀವಂತವಾಗಿರುತ್ತದೆ. ಸ್ಮಾರಕವನ್ನು ಎಲ್ಲೋ ದೂರದಲ್ಲಿ ಪ್ರತ್ಯೇಕ ಭಾಗದಲ್ಲಿ ಮಾಡುವುದಕ್ಕಿಂತ ಎಲ್ಲರಿಗೂ ಉಪಯುಕ್ತವಾಗುವಂತೆ ನಿರ್ಮಾಣಗೊಳ್ಳಬೇಕು. ಭೈರಪ್ಪನವರ ಕಾದಂಬರಿಗಳನ್ನು ನಿಧಾನವಾಗಿ ಓದಿದರೆ ಪಾತ್ರಗಳು ಎಡ-ಬಲ ಕುರಿತಾಗಿ ಇಲ್ಲ. ಆದರೆ ಅಂತಹ ಯೋಚನೆ ಯಾವಾಗ ಬಂತೋ ತಿಳಿಯುತ್ತಿಲ್ಲ. ಸಾಕ್ಷಿ, ದಾಟು ಮುಂತಾದವುಗಳನ್ನು ಗಮನಿಸಿದರೆ ಎಲ್ಲೂ ಅಂತಹದ್ದು ಕಾಣುವುದಿಲ್ಲ. ಒಂದು ಕಡೆ ಹೊರಗಿನಿಂದ ಇದ್ದರೆ, ಇನ್ನೊಂದು ಕಡೆ] ಒಳಗಿನಿಂದ ಇದ್ದಂತೆ ಕಾಣುತ್ತದೆ. ಹೆಣ್ಣುಮಕ್ಕಳಲ್ಲಿ ಮಾತೃತ್ವದ ನಂಜಮ್ಮನಂತಹ ಪಾತ್ರವೂ ಇದೆ, ಗಂಗಮ್ಮನಂತಹ ಪಾತ್ರವೂ ಇದೆ. ಭೈರಪ್ಪ ಅವರನ್ನು ಪೂರ್ವಗ್ರಹ ಗ್ರಹಿತ ಲೇಖಕರೆನ್ನುವ ಹಾಗೆ ಕೆಲವರು ಬಿಂಬಿಸಿದ್ದಾರೆ. ಸಾಕ್ಷಿ ಕಾದಂಬರಿಯಲ್ಲಿ ಮಂಜಪ್ಪನೂ ಇದ್ದಾನೆ, ಸತ್ಯಪ್ಪನೂ ಇದ್ದಾನೆ. ಗಾಂಧೀಜಿಯವರ ಪರವಾಗಿಯೂ ಬರೆದಿದ್ದಾರೆ, ವಿರೋಧವಾಗಿಯೂ ಬರೆದಿದ್ದಾರೆ. ಕೆಲವರು ತಮಗೆ ಬೇಕಾದ್ದನ್ನು ಮಾತ್ರ ಓದಿಕೊಂಡು ಬೇಕಾದಂತೆ ಮಾತನಾಡಲು ಆರಂಭಿಸಿದರೆಂದು ಅನ್ನಿಸುತ್ತದೆ. ನಾನು ಭೈರಪ್ಪನವರಲ್ಲಿ ಮಾತನಾಡಿದ ಪ್ರಕಾರ, ಅವರಿಗೆ ನಿರ್ದಿಷ್ಟವಾಗಿ ಯಾರಲ್ಲೂ ಒಲವಿರಲಿಲ್ಲ. ಭೈರಪ್ಪನವರಿಗೆ ಓದುವ ಮಕ್ಕಳನ್ನು ಕಂಡರೆ ಬಹಳ] ಒಲವಿತ್ತು. ವಿಗ್ರಹ ನಿಲ್ಲಿಸೋದು, ಗ್ರಂಥಾಲಯ ಮಾಡೋದು, ಸ್ಮಾರಕಕಟ್ಟೋದು ಇವೆಲ್ಲ ನಡೆಯಲಿ. ಆದರೆ, ಭೈರಪ್ಪನವರ ನೈಜ ಒಲವು ಇದ್ದದ್ದು ಓದುವ ಬಡ ವಿದ್ಯಾರ್ಥಿಗಳ ಮೇಲೆ. ಅವರ ತಾಯಿ ಬದುಕಿದ್ದ ಜಾಗದಲ್ಲಿ ದೊಡ್ಡ ಕಟ್ಟಡವನ್ನು ಕಟ್ಟಿಸಿ ಒಬ್ಬ ತಳ ಸಮುದಾಯದವನಿಗೆ ಕಟ್ಟಡದ ಕೀಲಿ ಕೊಟ್ಟು ಬಂದಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ‘ಹೆಣ್ಮಕ್ಕಳಿಗಾಗಿ, ರೈತರಿಗಾಗಿ ಯಾವುದೇ ಕಾರ್ಯಕ್ರಮವನ್ನು ಇಲ್ಲಿ ಮಾಡಬಹುದು’ ಎಂದಷ್ಟೇ ಉದ್ಘಾಟನೆ ಸಮಯದಲ್ಲಿ ಹೇಳಿದ್ದರು.
ಇನ್ನೊಬ್ಬರಿಗಾಗಿ ಸಹಾಯ ಮಾಡುವ ಮನೋಸ್ಥಿತಿಯಿದ್ದವರಾಗಿದ್ದುದರಿಂದ, ತಮ್ಮ ಹಾಗೆ ಬಡ ವಿದ್ಯಾರ್ಥಿಗಳು ಕಷ್ಟಪಡಬಾರದೆಂಬ ಭಾವನೆ ಇದ್ದುದರಿಂದ ಸ್ಮಾರಕದ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈಗಲೂ ಎಲ್ಲ ವಿದ್ಯಾರ್ಥಿಗಳ ಸ್ಥಿತಿ ಸುಧಾರಿಸಿಲ್ಲ, ಹಳ್ಳಿಗಳಲ್ಲಿ ಬಡ ವಿದ್ಯಾರ್ಥಿಗಳಿದ್ದಾರೆ. ಆದುದರಿಂದ ಅಂತಹ ವಿದ್ಯಾರ್ಥಿಗಳಿಗೆ ಉಪಯೋಗವಾಗಬೇಕು. ಲೇಖಕ ವಿದ್ಯಾರ್ಥಿಗಳನ್ನು, ಇತರರನ್ನು ಮುಟ್ಟುವಷ್ಟು ಬೇರೆ ಯಾರೂ ಮುಟ್ಟಲಾರರು. ಭೈರಪ್ಪನವರ ಅಭಿಮಾನಿಗಳು ಎಲ್ಲ ಕಡೆ ಇದ್ದಾರೆ. ಭೈರಪ್ಪನವರ ಕೃತಿಗಳು ಮಾರ್ಗದರ್ಶಕ ಇದ್ದಂತೆ. ಹುಟ್ಟೂರು ಸಂತೇಶಿವರದಲ್ಲಿ ಭೈರಪ್ಪನವರು ಕೆರೆ ಕಟ್ಟಿಸಿದ್ದಾರೆ. ಮನೆಯನ್ನು ಜನೋಪಯೋಗಿ ಮನೆಯನ್ನಾಗಿಸಿದ್ದಾರೆ. ಅಲ್ಲಿಯೂ ಕೂಡ ಭೈರಪ್ಪನವರ ಗುರುತಿರುವಂತೆ ವರ್ಷಕ್ಕೊಮ್ಮೆ ಕಾರ್ಯಕ್ರಮ ಮಾಡಬೇಕು. ಭೈರಪ್ಪನವರ ಕೃತಿಗಳು ಮತ್ತೆ ಮತ್ತೆ ಮರುಮುದ್ರಣವಾಗುವುದರೊಂದಿಗೆ ಅವರು ಸದಾ ಜೀವಂತ.
-ಡಾ.ಕೃಷ್ಣಮೂರ್ತಿ ಹನೂರು, ಹಿರಿಯ ವಿದ್ವಾಂಸರು ಮತ್ತು ಲೇಖಕರು
ಭೈರಪನವರ ಕೃತಿಗಳ ವಿಮರ್ಶೆಯ ಸಂಗ್ರಹ ಸಾರಕದಲ್ಲಿರಬೇಕು:
ಭೈರಪ್ಪನವರನ್ನು ಚೆನ್ನಾಗಿ ಬಲ್ಲವರ ಮೂಲಕ ಸ್ಮಾರಕ ಮಾಡಿಸುವುದು ಉತ್ತಮ. ಸರ್ಕಾರ ಧನಸಹಾಯ ನೀಡಿ ಲೆಕ್ಕಪತ್ರ ಕೇಳಬಹುದು. ಆದರೆ ಅದನ್ನು ಮಾಡುವ ಯೋಚನೆ ಭೈರಪ್ಪನವರ ಅಭಿಮಾನಿಗಳು, ಟ್ರಸ್ಟ್ ಅಥವಾ ಪ್ರತಿಷ್ಠಾನಗಳು ಮಾಡುವುದು ಉತ್ತಮ. ಕೃತಿ ಬಿಡುಗಡೆ, ಸಂವಾದ, ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನ ಇತ್ಯಾದಿ ಸಭಾ ಕಾರ್ಯಕ್ರಮಕ್ಕೆ ಅನುಕೂಲವಾಗುವಂತಹ ಪುಟ್ಟ ಸಭಾಂಗಣ ಭೈರಪ್ಪನವರ ನೆನಪಿನ ಸ್ಮಾರಕದಲ್ಲಿ ಭೌತಿಕವಾಗಿ ಇರಬೇಕು. ಭೈರಪ್ಪನವರ ಕೃತಿಗಳು ನಾಟಕ, ಸಿನಿಮಾ, ಧಾರಾವಾಹಿಗಳಾಗಿ ಬಂದಿವೆ. ಇವನ್ನು ಪ್ರದರ್ಶಿಸಬಹುದು. ಭೈರಪ್ಪನವರ ಪ್ರತಿಮೆ ಸ್ಥಾಪಿಸುವ ಅವಶ್ಯವಿಲ್ಲವೆಂದೆನಿಸುತ್ತದೆ. ಭೈರಪ್ಪನವರ ಕುರಿತಾಗಿ ಬಂದ ಕೃತಿಗಳ ಸರಿಯಾದ ಮಾಹಿತಿ ಪಟ್ಟಿಯೇ ನಮ್ಮಲ್ಲಿಲ್ಲ. ನೂರಕ್ಕಿಂತಲೂ ಹೆಚ್ಚು ಪುಸ್ತಕಗಳು, ಲೇಖನಗಳು ಬಂದಿವೆ. ಈ ಕಾರಣಕ್ಕಾಗಿ ಭೈರಪ್ಪನವರ ಕೃತಿಗಳ ವಿಮರ್ಶೆಯ ಸಂಗ್ರಹ ಸ್ಮಾರಕದಲ್ಲಿರಬೇಕು. ಇಂಡಿಯನ್-ವೆಸ್ಟರ್ನ್ ಫಿಲಾಸಫಿ, ಸಾಹಿತ್ಯ ಮೀಮಾಂಸೆ -ಕಲಾ ಮೀಮಾಂಸೆ ಇತ್ಯಾದಿ ವಿಚಾರಗಳ ಬಗ್ಗೆ ಅಧ್ಯಯನ ಕೇಂದ್ರವಾಗಿ ರೂಪಿಸಿದರೆ ಭೈರಪ್ಪನವರ ಕಾಲದ ಆಶಯ ಮತ್ತು ನಮ್ಮ ಕಾಲದ ಆವಶ್ಯಕತೆಯನ್ನು ಪೂರೈಸಿದ ಹಾಗೆ ಆಗುತ್ತದೆ.
ವಿಶ್ವವಿದ್ಯಾಲಯದ ಮೂಲಕ ಸ್ಮಾರಕವಾದರೆ ಅದು ಹೆಚ್ಚಿನವರಿಗೆ ಪೂರಕವಾಗುತ್ತದೆ. ಮೈಸೂರಿನಲ್ಲೇ ಸ್ಮಾರಕ ನಿರ್ಮಾಣವಾಗುವುದು ಸೂಕ್ತ.
-ಡಾ.ಅಜಕ್ಕಳ ಗಿರೀಶ್ ಭಟ್, ವಿಮರ್ಶಕರು
ಸಾಹಿತ್ಯದ ಜೊತೆ ಸಂಗೀತದ ಮಾಧುರ್ಯವೂ, ನೃತ್ಯದ ಘಮಲೂ ಇರಬೇಕು:
ಲೇಖಕ ಸ್ಮಾರಕದ ಮೂಲಕ ಮನಸ್ಸಿನಲ್ಲಿ ನೆಲೆ ನಿಲ್ಲಬೇಕೋ ಅಥವಾ ಬರವಣಿಗೆಯ ಮೂಲಕವೋ! ಎಂದು ಕೇಳಿದರೆ ನನ್ನ ಪ್ರಕಾರ ಎರಡೂ ರೀತಿಯಲ್ಲಿ ಕೂಡ ನಿಲ್ಲುತ್ತಾನೆ. ಇದಕ್ಕೆ ಭೈರಪ್ಪನವರು ಅತ್ಯಂತ ದೊಡ್ಡ ಮಾದರಿಯಾಗಿ ನಮ್ಮ ಜೊತೆಗಿದ್ದಾರೆ. ಭೈರಪ್ಪನವರ ಸಾಹಿತ್ಯ ಪ್ರಪಂಚವನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಒಂದು ಕಾದಂಬರಿ ಬರೆಯುವ ಹಿಂದಿನ ಶ್ರಮ ಎಷ್ಟಿದೆ ಎಂಬುದನ್ನು ತಿಳಿಸಲು ಇಂತಹ ಸ್ಮಾರಕಗಳ ಅಗತ್ಯವಿದೆ. ಈಗಾಗಲೇ ಅವರ ಫೌಂಡೇಶನ್ ಸಾಕಷ್ಟು ಕೆಲಸ ಮಾಡುತ್ತಿದೆ. ಕಾರಂತ, ಕುವೆಂಪು ಅವರ ಸ್ಮಾರಕಗಳನ್ನು ನೋಡಿದಾಗ ಮತ್ತು ಬಾಲವನದ ಈಗಿನ ದುಸ್ಥಿತಿಯನ್ನು ನೋಡಿದಾಗ, ಸ್ಮಾರಕ ಮಾಡು ವುದು ಎಷ್ಟು ದೊಡ್ಡ ವಿಷಯವೋ ಅಷ್ಟೇ ಮುಖ್ಯವಾದದ್ದು ನಂತರದ ನಿರ್ವಹಣೆ ಕೂಡ. ಈ ಹೊತ್ತಿನ ಎಲ್ಲ ಲೇಖಕರು, ಓದುಗರು ಕಾರಂತರಿಂದ ಉಪಕೃತರು. ಬಾಲವನ ಕಾರಂತರ ಬಹಳ ದೊಡ್ಡ ಕನಸಾಗಿತ್ತು.
ಆದರೆ ಇವತ್ತು ಅದರ ಸ್ಥಿತಿ ಹೇಗಿದೆಯೆಂಬ ಎಚ್ಚರದಿಂದ ಸ್ಮಾರಕವನ್ನು ಕಟ್ಟ ಬೇಕಾಗಿದೆ. ಶಿವರಾಮ ಕಾರಂತ ವೇದಿಕೆಯ ಅಂಗಸಂಸ್ಥೆಮ ಲಕ್ಷ್ಮೀನಾರಾಯಣ ಚಡಗ ಟ್ರಸ್ಟ್‌ನ ಒಂದು ಲೈಬ್ರರಿಯಿದೆ. ಅಲ್ಲಿಯೇ ಕಾರ್ಯಕ್ರಮಗಳಾಗುತ್ತವೆ. ಅಲ್ಲಿ ೩೦,೦೦೦ಪುಸ್ತಕಗಳಿವೆ. ತರಳಬಾಳು ಕೇಂದ್ರದ ಎರಡನೇ ಅಂತಸ್ತಿನಲ್ಲಿರುವ ಆ ಗ್ರಂಥಾಲಯದಲ್ಲಿ ನನ್ನಿಷ್ಟದಜಾಗವೆಂದರೆ ರೀಡಿಂಗ್ ಕಾರ್ನರ್. ಭೈರಪ್ಪನವರ ಸ್ಮಾರಕದಲ್ಲೂ ಅಂತಹ ಒಂದು ರೀಡಿಂಗ್ ಕಾರ್ನರ್ ಆಗಬೇಕು. ಮಾರಾಟದ ವ್ಯವಸ್ಥೆಯ ಜೊತೆಗೆ ವಿದ್ಯಾರ್ಥಿಗಳು ಬಂದಾಗ ಎಂಟ್ಹತ್ತು ಜನರು ಕುಳಿತು ಓದುವಂತಹ ರೀಡಿಂಗ್ ಕಾರ್ನರ್ ಅಲ್ಲಿರಬೇಕು. ಓದು, ಸ್ವಾಧ್ಯಾಯ, ಸ್ವ ಅಧ್ಯಾಪನಕ್ಕೆ ಉತ್ತಮ ಉದಾಹರಣೆ ಭೈರಪ್ಪನವರು. ಓದುವ ಶ್ರದ್ಧೆಗೆ ಗುರುತಾಗಿ ಅಲ್ಲಿ ಒಂದು ರೀಡಿಂಗ್ ಕಾರ್ನರ್ ಇರಬೇಕೆಂದು ನನಗನ್ನಿಸುತ್ತದೆ. ಸ್ಮಾರಕ ನಿರ್ಮಾಣಕ್ಕೆ ಮೈಸೂರೇ ಸೂಕ್ತವಾದ ಸ್ಥಳ. ಸ್ಮಾರಕ ಮೈಸೂರು ವಿಶ್ವ ವಿದ್ಯಾಲಯದ ಆಸುಪಾಸಿನಲ್ಲಿದ್ದರೆ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ. ಭೈರಪ್ಪನವರ ಹುಟ್ಟೂರಿನಲ್ಲಿ ಮಾಡಿದರೆ ಅಲ್ಲಿನ ನಿರ್ವಹಣೆ ಹೇಗಾಗಬಹು ದೆಂಬುದು ಇಚ್ಛಾಶಕ್ತಿಗೆ ಬಿಟ್ಟಿರುವುದಾಗಿದೆ. ಸ್ಮಾರಕದ ಅಗತ್ಯ ಎಷ್ಟಿ ದೆಯೋಗೊತ್ತಿಲ್ಲ, ಆದರೆ ಭೈರಪ್ಪನವರು ಸಾಹಿತ್ಯ ಕಲೆಯ ಒಂದು ಭಾಗವೆಂದೇ ನಂಬಿಕೊಂಡುಬಂದವರು. ಮೈಸೂರಲ್ಲಿ ಸಂಗೀತ ಕಾರ್ಯ ಕ್ರಮಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತು ಕೊಳ್ಳುತ್ತಿದ್ದರು. ಆದುದರಿಂದ ಅವರ ಹೆಸರಲ್ಲಿ ಯಾವುದೇ ಸಾಹಿತ್ಯದ ಕಾರ್ಯಕ್ರಮಗಳಾದರೂ ಅಲ್ಲಿ ಸಂಗೀತ ಮತ್ತು ನೃತ್ಯದ ಘಮವಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ನನಗನ್ನಿಸುತ್ತದೆ.
-ಡಾ.ದೀಪಾ ಫಡ್ಕೆ, ಲೇಖಕಿ ಮತ್ತು ವಿಮರ್ಶಕಿ
ಸಂಘರ್ಷಗಳನ್ನು ಸೃಷ್ಟಿಸುವ ಬದಲಾಗಿ ಸ್ಮಾರಕದಲ್ಲಿ ವಿಚಾರಗಳಿರಬೇಕು:
ಭೈರಪ್ಪರು ಮತ್ತು ನನ್ನದು ಆತ್ಮೀಯವಾದ ಒಂದು ಮಾನವೀಯ ಸಂಬಂಧ. ಪರಿತ್ಯಕ್ತಗೊಂಡ ಹೆಣ್ಣುಮಕ್ಕಳು, ಮತ್ತು ಅವರ ಮಕ್ಕಳ ಬಗ್ಗೆ ಭೈರಪ್ಪನವರಿಗೆ ವಿಶೇಷವಾದ ಕಾಳಜಿಯಿತ್ತು. ಅವರಿಗೆ ಉದ್ಯೋಗ ಹಾಗೂ ಪ್ರೋಟಿನ್ ಯುಕ್ತ ಆಹಾರ ಕೊಡಿಸಬೇಕು ಎನ್ನುವಂತಹ ವಿಚಾರ ಅವರ ದೊಡ್ಡ ಆಲೋಚನೆಗಳಲ್ಲಿ ಒಂದು ಎಂಬುದನ್ನು ಗಮನಿಸಬೇಕು. ಸ್ಮಾರಕಗಳಿಗಿಂತಲೂ ಭೈರಪ್ಪನವರ ವಿಚಾರಧಾರೆ, ವೈಯಕ್ತಿಕ ನಿಲುವುಗಳ ಕುರಿತಾಗಿ ನೋಡಬೇಕು. ಪತ್ರಿಕೆಗಳನ್ನು ಆಟೋದಲ್ಲಿ ಹಾಕಿ ಕಳುಹಿಸುವಂತಹ ಯೋಚನೆಯನ್ನು ಕುಟುಂಬದಲ್ಲೂ ಬೆಳೆಸಿದವರು ಭೈರಪ್ಪನವರು. ಆದುದರಿಂದ ಕುಟುಂಬದವರೂ ಇದರಲ್ಲಿ ಒಳಗೊಂಡರೆ ಇನ್ನೂ ಒಳ್ಳೆಯದು. ಅವರಿಗಾಗಿ ಸರ್ಕಾರ ನಿಜವಾಗಿಯೂ ಸ್ಮಾರಕ ಮಾಡುವುದಾದರೆ; ನಾಟಕಗಳು, ಕೃತಿಗಳು, ವಿಚಾರಗಳು ಮತ್ತು ಅವರೊಡನೆ ಸಂಘರ್ಷಕ್ಕೆ ಬಿದ್ದಂತಹ ಸಾಹಿತ್ಯವಲಯ ಇವೆಲ್ಲವೂ ಇರಬೇಕು. ಒಂದೇ ಕಡೆ ನೋಡುವಂತಹದ್ದು ವ್ಯರ್ಥ. ಸಂಘರ್ಷಗಳು, ವಿಮರ್ಶೆಗಳು, ಚಟುವಟಿಕೆಗಳು, ಟೀಕೆಗಳು ಮತ್ತು ಎಲ್ಲರನ್ನೂ ಮೆಚ್ಚುವಂತಹ ಗುಣ, ಹಂಚಿ ತಿನ್ನುವ ಬಲಿಷ್ಠ ತತ್ವವನ್ನು, ಸರ್ಕಾರ ನಿರ್ಮಿಸುವ ಸ್ಮಾರಕ ಪ್ರತಿನಿಽಸಬೇಕು. ಎಲ್ಲರನ್ನೊಳಗೊಂಡು ಚರ್ಚಿಸುವಂತಹ ಸ್ಮಾರಕ ನಿರ್ಮಾಣವಾಗಬೇಕು. ವಿಚಾರಗಳು ಮತ್ತು ವಿವೇಕ ಜನರಿಗೆ ಮುಟ್ಟಬೇಕೆನ್ನುವ ಅವರ ತತ್ವವನ್ನು ಬಿಂಬಿಸಬೇಕು. ಮೊದಲನೆಯದಾಗಿ, ಹಣಕಾಸನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡುವ ಯಾವುದಾದರೂ ಸಂಸ್ಥೆಗೆ ಸರ್ಕಾರ ಸರಿಯಾದ ಜಾಗ ಗುರುತಿಸಿಕೊಡಬೇಕು. ಅವರಿಗಾಗಿ ಮುಜುಗರವಿಲ್ಲದೆ ಸ್ಥಳ ಕೊಡಲಿ. ಎರಡನೆಯದಾಗಿ, ಭೈರಪ್ಪನವರಿಗೆ ಒಲವಿದ್ದಂತಹ ಬಹಳಷ್ಟು ಜನರನ್ನೊಳಗೊಂಡಂತೆ ಅವರಿಗೆ ಒಂದೊಂದು ವಿಷಯವನ್ನು] ಕೊಟ್ಟು ಸೃಜನಾತ್ಮಕವಾಗಿ ಪ್ರದರ್ಶಿಸಿ, ಆದರ್ಶಗಳು]ಪ್ರತಿಧ್ವನಿಸುವಂತೆ ಮಾಡಬೇಕೆಂಬ ಆಶಯ ಇರಬೇಕು. ಪುತ್ತಳಿ ನಿರ್ಮಿಸಿ ಸಂಘರ್ಷಗಳನ್ನು ಸೃಷ್ಟಿಸುವ ಬದಲಾಗಿ ಸ್ಮಾರಕದಲ್ಲಿ ವಿಚಾರಗಳಿರಬೇಕು, ಅವು ಅವರನ್ನು ಪ್ರತಿಧ್ವನಿಸುವಂತಿರಬೇಕು. ಈ ದೃಷ್ಟಿಯಲ್ಲಿ ಯುವಜನತೆಗೆ ಮಾರ್ಗದರ್ಶಕವಾಗಿರಬೇಕು.
ಯಾಕೆಂದರೆ ಇಂತಹವರೊಬ್ಬರಿದ್ದರೆಂಬುದು ಸದಾಕಾಲ ಸ್ಛೂರ್ತಿಯಾಗಬೇಕು. ಸ್ವೀಡನ್‌ನ ಉದ್ಯಾನವೊಂದರಲ್ಲಿ ಬಂದೂಕಿನ ನಳಿಕೆ ತಿರುಗಿಸಿ ಇಟ್ಟ ರೀತಿ ಒಂದು ಸ್ಮಾರಕವಿದೆ. ಭೈರಪ್ಪನವರಿಗೆ ಆರೋಗ್ಯಕಾಳಜಿಯಿದ್ದ ಕಾರಣ, ಅವರ ಸಮಗ್ರ ಸಾಹಿತ್ಯ ಕೃತಿಗಳನ್ನು ಉದ್ಯಾನದಲ್ಲಿ ಇಟ್ಟರೆ, ಪುಸ್ತಕ ಓದಿನಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಭೈರಪ್ಪನವರ ಧ್ವನಿಗೆ ಪೂರಕವಾಗುವಂತಹ ಕೆಲಸಗಳಾಗಬೇಕು.
-ಒಡನಾಡಿ ಪರಶುರಾಮ್
ಮೈಸೂರಿನ ಮನೆಯೇ ಸ್ಮಾರಕವಾಗಬೇಕೆಂಬುದು ಅವರ ಕೊನೆಯ ಆಸೆಯಾಗಿತ್ತು:
ತಮ್ಮ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಭೈರಪ್ಪನವರು ಕೊನೆಯ ಏಳೆಂಟು ತಿಂಗಳುಗಳಲ್ಲಿ ಹೇಳಿದ್ದರು. ಅವರಿಗೆ ತಮ್ಮ ಗ್ರಂಥಭಂಡಾರ ಬಹಳ ಪ್ರಿಯವಾಗಿತ್ತು. ಮನೆಯ ಅವರ ಕೋಣೆ ಗ್ರಂಥಭಂಡಾರದ ಸಮೀಪವೇ ಇದ್ದುದರಿಂದ ಹಸ್ತಪ್ರತಿಗಳು, ಪ್ರಶಸ್ತಿಗಳು, ಟೇಬಲ್, ಕುರ್ಚಿ, ಮಂಚ ಇತ್ಯಾದಿಗಳು ಇದ್ದಂತೆಯೇ ಇರಬೇಕೆಂದು ಹೇಳಿದ್ದರು. ಅವರಷ್ಟು ವ್ಯಾಪಕವಾಗಿ ಸಂಚರಿಸಿ ಜೀವನಾನುಭವ ಪಡೆದವರು ಮತ್ತೊಬ್ಬರಿಲ್ಲ. ತಮ್ಮಮನೆಯೇ ಸ್ಮಾರಕವಾಗಬೇಕು ಎಂಬುದಕ್ಕೆ ಈ ಹಿನ್ನೆಲೆಯೂ ಕಾರಣವಾಗಿರಬಹುದು. ಏಕೆಂದರೆ ಪ್ರಸಿದ್ಧ ಸಾಹಿತಿಗಳನೇಕರ ಮನೆ ಅವರ ನಂತರ ಇಲ್ಲವಾಗಿದೆ ಎನ್ನುವುದನ್ನು ಹಿಂದೆಯೂ ಹೇಳುತ್ತಿದ್ದರು. ಒಟ್ಟಿನಲ್ಲಿ ತಮ್ಮ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.
ನಾನು ಈಚೆಗೆ ಸ್ಟಾಕ್ ಹೋಮ್‌ನಲ್ಲಿ ಆಲ್ರೆಡ್ ನೊಬೆಲ್ ಅವರ ಮ್ಯೂಸಿಯಂ ನೋಡಿದ್ದೇನೆ. ಸಣ್ಣಜಾಗವನ್ನು ಬಹಳಚೆನ್ನಾಗಿ ಬಳಸಿಕೊಂಡಿದ್ದಾರೆ. ಆತನ ವಿಚಾರಗಳನ್ನು ಆಧರಿಸಿನಿರ್ಮಿಸಿದ್ದಾರೆ. ಒಂದು ವೇಳೆ ಆಲ್ರೆಡ್ ಪುನಃ ಹುಟ್ಟಿ ಬಂದರೆ ತನ್ನ ಕಲ್ಪನೆ ಕಾರ್ಯರೂಪಕ್ಕೆ ಬಂದಿರುವುದನ್ನು ನೋಡಿ ಸಂತೃಪ್ತನಾಗುತ್ತಾನೆಂಬುದರಲ್ಲಿ ಸಂಶಯವಿಲ್ಲ. ಭೈರಪ್ಪನವರ ಸ್ಮಾರಕವೂ ಅಂತೆಯೇ ಇರಬೇಕು. ಭೌತಿಕವಾಗಿ ಎಲ್ಲ ಪ್ರಮುಖ ಅಂಶಗಳನ್ನು ಒಳಗೊಂಡಿರಬೇಕು ಎಂಬುದರ ಜೊತೆಗೆ ಅವರೆಷ್ಟುವಾಸ್ತವವಾದಿಯೆಂಬುದನ್ನೂ ನಾವು ಅರಿತಿರಬೇಕು. ಉದಾಹರಣೆಗೆ ಅವರು ಮೊದಲು ಹೇಳುತ್ತಿದ್ದುದೇ ಪೌಷ್ಟಿಕಾಂಶಗಳ ಬಗ್ಗೆ. ಉದಾಹರಣೆಗೆ, ನನ್ನ ಮೊದಲ ಪರಿಚಯವಾದಾಗ ಅವರು ಕೇಳಿದ್ದೇ ‘ನಿಮ್ಮ ರೆಗ್ಯುಲರ್ ಡಯಟ್ ಏನು?’ಎಂಬುದಾಗಿ. ‘ಬರವಣಿಗೆಗೂ ಊಟತಿಂಡಿಗೂ ಏನು ಸಂಬಂಧ?’ ಎಂದು ಕೇಳಿದ್ದೆ. ಸಾಹಿತಿಯೊಬ್ಬರು ಹೀಗೆ ಪ್ರಶ್ನಿಸುತ್ತಿರುವುದೇ ನನಗೆ ಆಶ್ಚರ್ಯ ಮೂಡಿಸಿತ್ತು. ‘ಅಲ್ಲಮ್ಮ, ಚಿಂತನಾಶೀಲತೆಗೆಬುದ್ಧಿ ಚುರುಕಾಗಿರಬೇಕು. ನಾವು ತೆಗೆದುಕೊಳ್ಳುವ ಆಹಾರದಲ್ಲಿ ಪೌಷ್ಟಿಕಾಂಶವಿರದಿದ್ದರೆ ಅಧ್ಯಯನ ಹೇಗೆ ಸಾಧ್ಯ?’ ಎಂದಿದ್ದರು. ಹಿರಿಯರಿರಲಿ, ಮಕ್ಕಳಿರಲಿ, ಪೌಷ್ಟಿಕ ಆಹಾರ ಸಿಗದಿದ್ದರೆ ಬುದ್ಧಿ ಚುರುಕಾಗುವುದಿಲ್ಲ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದರು. ತಮ್ಮದೇ ಅನುಭವವನ್ನು ‘ಭಿತ್ತಿ’ಯಲ್ಲೂ ಬರೆದುಕೊಂಡಿದ್ದಾರೆ. ಕೊನೆಯ ತಿಂಗಳುಗಳಲ್ಲಿ ತಮ್ಮ ಬಡತನದ ಬಾಲ್ಯ ಅವರಿಗೆ ಬಾರಿಬಾರಿಗೂ ಜ್ಞಾಪಕವಾಗುತ್ತಿತ್ತು. ತಮ್ಮ ಸಾಹಿತ್ಯದಿಂದ ಗಳಿಸಿದ ಪವಿತ್ರವಾದ ಹಣವನ್ನು ವಿದ್ಯೆಗೆ ವಿನಿಯೋಗಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಅವರು ಹೇಳುತ್ತಿದ್ದ ರೀತಿ ಅವರಿಗಿದ್ದ ಸಾಮಾಜಿಕ ಕಳಕಳಿ, ಬದ್ಧತೆಗಳನ್ನು ತೋರಿಸುತ್ತಿತ್ತು. ಹಾಗಾಗಿ, ಸ್ಮಾರಕ ಮಾಡುವುದಾದರೆ ಭೌತಿಕವಾಗಿ ಏನೆಲ್ಲಮಾಡಬಹುದು ಎಂಬುದರ ಜೊತೆಗೆ, ಬಡ, ಪ್ರತಿಭಾವಂತಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ಒದಗಿಸುವ ಕೆಲಸವೂಆಗಬೇಕೆನಿಸುತ್ತೆ. ಆ ಮಕ್ಕಳಿಗೆ ವಿದ್ಯಾಭಾಸದ ಜೊತೆ ಕನ್ನಡ ಸಾಹಿತ್ಯದ ಪರಿಚಯ, ಭಾರತೀಯ ತತ್ತ್ವಶಾಸ್ತ್ರದ ಓದು ಇವುಗಳನ್ನೂ ಯೋಚಿಸಿ, ಆಯೋಜಿಸಬೇಕು. ಆಲ್ರೆಡ್ ನೊಬೆಲ್ ಮೂಲತಃ ವಿಜ್ಞಾನಿಯಾದ್ದರಿಂದ ಅವನ ಮ್ಯೂಸಿಯಂ ಅನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನಿರ್ಮಿಸಲಾಗಿದೆ. ಭೈರಪ್ಪನವರು ಮೂಲತಃ ದಾರ್ಶನಿಕರಾದ್ದರಿಂದ ಅವರ ಸ್ಮಾರಕವನ್ನು, ಅವರ ಕಾದಂಬರಿಗಳ ಸಾಂಸ್ಕೃತಿಕ ಪ್ರತಿಮೆಗಳನ್ನಾಧರಿಸಿಯೇ ನಿರ್ಮಿಸಬಹುದು. ಜೊತೆಗೆ ವಿದ್ಯಾದಾನದಂತಹ ಮೌಲಿಕ ಚಟುವಟಿಕೆಗಳೂ ಸೇರಿದರೆ ಅವರ ಆಶಯವನ್ನು ಪೂರೈಸಿದಂತಾಗುತ್ತದೆ.
-ಸಹನಾ ವಿಜಯಕುಮಾರ್, ಭೈರಪ್ಪನವರ ಶಿಷ್ಯೆ





