Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮನುಷ್ಯರ ಕಥೆ ಹೇಳುವ ಹುಲಿಬೇಟೆ ಕಲ್ಲುಗಳು

ಇಲ್ಲಿರುವ 4 ಹುಲಿ ಬೇಟೆ ವೀರಗಲ್ಲುಗಳು ಒಂದು ಕಾಲದಲ್ಲಿ ಈ ಪ್ರದೇಶ ದೊಡ್ಡದಾದ ಹುಲಿ ಕಾಡಾಗಿತ್ತು ಎಂದು ಹೇಳುತ್ತವೆ. ವೀರಗಲ್ಲುಗಳನ್ನು ಹುಡುಕಾಡುತ್ತಾ ತಿರುಗುವ ನನ್ನಲ್ಲಿ ಈ ಕಲ್ಲುಗಳು ವಿಶೇಷ ಕುತೂಹಲವನ್ನು ಮೂಡಿಸಿವೆ.

ಸಂತೇಬಾಚಹಳ್ಳಿ ರಂಗಸ್ವಾಮಿ
ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಸಂತೆಬಾಚಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದಲ್ಲಿ ಅಪರೂಪದ ನಾಲ್ಕು ಹುಲಿ ಬೇಟೆ ವೀರಗಲ್ಲುಗಳಿವೆ. ಕರ್ನಾಟಕದಲ್ಲಿ ಸುಮಾರು ೫೦ ಹುಲಿ ಬೇಟೆ ವೀರಗಲ್ಲುಗಳಿರುವ ದಾಖಲೆಗಳಿವೆ. ಆದರೆ ಒಂದು ಪುಟ್ಟ ಗ್ರಾಮದಲ್ಲಿ ಒಂದೇ ಜಾಗದಲ್ಲಿ ನಾಲ್ಕು ಹುಲಿ ಬೇಟೆ ವೀರಗಲ್ಲುಗಳಿರುವುದು ಬಹಳ ಕುತೂಹಲಕಾರಿಯಾಗಿದೆ.

ನಾಯಕನಹಳ್ಳಿಯ ಬೋರಿದೇವರ ದೇವಾಲಯದ ಆವರಣದಲ್ಲಿ ಸುಮಾರು ೪೦ಕ್ಕೂ ಹೆಚ್ಚು ವೀರಗಲ್ಲುಗಳಿವೆ. ಗ್ರಾಮಸ್ಥರು ಹಬ್ಬ ಹರಿದಿನಗಳಲ್ಲಿ ಈ ವೀರಗಲ್ಲುಗಳಿಗೆ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಈ ವೀರಗಲ್ಲುಗಳು ಸುಮಾರು ೧೨ನೇ ಶತಮಾನದ ಸುತ್ತಮುತ್ತಲಿನ ಕಾಲಕ್ಕೆ ಸೇರಿದ ಹಾಗೆ ಕಾಣುತ್ತದೆ. ಅಂದರೆ ಹೊಯ್ಸಳರ ಕಾಲಘಟ್ಟದಲ್ಲಿ ಈ ವೀರಗಲ್ಲುಗಳನ್ನು ಸ್ಥಾಪಿಸಿರುವ ಬಗ್ಗೆ ತಿಳಿಯುತ್ತದೆ.

ಮೊದಲ ಸಾಲಿನಲ್ಲಿರುವ ಹುಲಿ ಬೇಟೆ ವೀರಗಲ್ಲು ಬಿಲ್ಲುಧಾರಿಯು ಹುಲಿಗೆ ಬಿಟ್ಟ ಬಾಣವನ್ನು ಚಿತ್ರಿಸುತ್ತದೆ. ಘಾಸಿಗೊಂಡ ಹುಲಿ ಬಿಲ್ಲು ಹಿಡಿದ ವೀರನ ಮೇಲೆ ಆಕ್ರಮಣ ಮಾಡುತ್ತಿರುವ ಚಿತ್ರವೂ ಇದೆ. ಎರಡನೇ ಸಾಲಿನಲ್ಲಿ ದೇವ ಕನ್ಯೆಯರು ಹುತಾತ್ಮ ಬೇಟೆಗಾರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ಚಿತ್ರಣವಿದೆ.

ಮೂರನೇ ಸಾಲು ಆತ ಶಿವೈಕ್ಯವಾಗುವ ಚಿತ್ರಣವನ್ನು ತೋರಿಸುತ್ತದೆ. ಎರಡನೆಯ ಹುಲಿ ಬೇಟೆ ವೀರಗಲ್ಲಿನ ಮೊದಲ ಸಾಲು ಕರುವೊಂದರ ಮೇಲೆ ಹುಲಿ ದಾಳಿ ಇಟ್ಟಿದ್ದನ್ನು ಕಂಡು ಬಿಡಿಸಲು ಹೋದ ಬಿಲ್ಲುಗಾರ ಹುಲಿಯ ದಾಳಿಗೆ ತುತ್ತಾಗಿರುವುದನ್ನೂ ಹಾಗೂ ಆತನ ಮಡದಿ ಆತನೊಡನೆ ಸಾವಿನಲ್ಲಿ ಐಕ್ಯವಾಗಿರುವ ಚಿತ್ರಣವನ್ನು ತೋರಿಸುತ್ತದೆ.

ಮೂರನೆಯ ಹುಲಿ ಬೇಟೆ ವೀರಗಲ್ಲೂ ಕೂಡ ಹುಲಿಯಿಂದ ಹತನಾದ ವೀರ ಆತನ ಹೆಂಡತಿಯು ಜೊತೆ ಸ್ವರ್ಗಸ್ತವಾಗುವುದನ್ನು ಚಿತ್ರಿಸುತ್ತದೆ. ನಾಲ್ಕನೆಯ ಹುಲಿ ಬೇಟೆಯ ವೀರಗಲ್ಲು ಹಸುವಿನ ದಾಳಿಯಲ್ಲಿ ರಕ್ಷಿಸುವ ವೀರ ಹುಲಿಯ ಎದೆಗೆ ಬಾಣ ಬಿಟ್ಟಿರುವ ಚಿತ್ರಣವಿದ್ದು, ನಂತರ ವೀರನು ಹುಲಿಯಿಂದ ಹತನಾಗುವ ದೃಶ್ಯವನ್ನು ತೋರಿಸುತ್ತದೆ.

 

 

Tags: