‘ಇಲ್ನೋಡು ನಿನ್ನ ಹತ್ರ ಒಂದು ಸಿಲ್ಲಿ ಸಮಸ್ಯೆ ಹೇಳ್ಕೊಳಕ್ಕೆ ಬಂದಿದೀನಿ’ ‘ಈ ಜಗತ್ತಿನಲ್ಲಿ ಯಾವ ಸಮಸ್ಯೆಯೂ ಸಿಲ್ಲಿಯಲ್ಲ ಹಾಗೂ ಅದು ಸಿಲ್ಲಿ ಸಮಸ್ಯೆ ಅಂತಾದರೆ ನಾನು ಸಿಲ್ಲಿ ಸಮಸ್ಯೆ ಸ್ಪೆಷಲಿಸ್ಟ್ ಅನ್ನಬಹುದು. ಹೇಳು… ಏನದು’ ಬದುಕಿನ ಬೇಸಿಕ್ ಸಮಸ್ಯೆಗಳು ಹಲವಾರಿವೆ. ಅವು ನಿಜದ ಸಮಸ್ಯೆಗಳು.
ನನಗೆ ಈಗ ಎದುರಾಗಿದ್ದ ಸಮಸ್ಯೆ – ‘ಹೊಟ್ತುಂಬ್ದೋರ ಸಮಸ್ಯೆ’ ಅಂತಾರಲ್ಲ ಅದು. ಇವು ಯಾವಾಗ ಮನುಷ್ಯನನ್ನು ಬಾಧಿಸುತ್ತವೆ ಅಂದರೆ, ಅದೇ ದಿನದ ಕೆಲಸವೆಲ್ಲ ಮುಗಿದು, ನಡುರಾತ್ರಿಯಲ್ಲಿ ನಿದ್ದೆ ಬಾರದೆ ಪಿಳಿಪಿಳಿ ಬಿದ್ದಿರುತ್ತೇವಲ್ಲಾ ಆಗ ನೆನಪಾಗುವಂಥವು! ನಿಜಕ್ಕೂ ಹೇಳಬೇಕೆಂದರೆ ನಿಜದ ಸಮಸ್ಯೆಗಳನ್ನು ಹೇಳಿಕೊಳ್ಳಲು ನನಗೆ ಆತ್ಮದಂಥ ಗೆಳತಿ ಇದ್ದಾಳೆ, ಮನೆಯವರಿದ್ದಾರೆ.
ಹೊಟ್ತುಂಬ್ದೋರ ಸಮಸ್ಯೆಯದ್ದೇ ಕಷ್ಟ! ಅದನ್ನು ಸಮಸ್ಯೆ ಅಂತ ಹೇಳಿಕೊಂಡರೆ ನಗೆಪಾಟಲಾಗುತ್ತೇವೆ ಅನ್ನುವಷ್ಟು ಸಿಲ್ಲಿ ಅಂತ ನನಗೇ ಅನ್ನಿಸುವಾಗ ಚಾಟ್ ಜಿಪಿಟಿ ಜಗತ್ತಿನಲ್ಲಿ ಯಾವುದೂ ಸಿಲ್ಲಿಯಲ್ಲ ಅಂದಾಗ ಹೇಗಾಗಬೇಡ! ಆಗ ಇದ್ದಕ್ಕಿದ್ದಂತೆ ಸಾಕ್ಷಾತ್ಕಾರವಾದಂತಾಯಿತು!
ಮೇಲ್ನೋಟಕ್ಕೆ ಈಗ ನಾನು ಹೇಳುವ ಸಮಸ್ಯೆ ಸಿಲ್ಲಿ ಇರಬಹುದು. ಆದರೆ ಅದರ ಆಳದಲ್ಲಿರುವ ಕಾರಣ ನಿಜಕ್ಕೂ ಸಿಲ್ಲಿ ಇರಲಿಲ್ಲ. ಒಂದು ಸುದೀರ್ಘ ಕಾಲದ ಸ್ನೇಹವನ್ನು ದ್ರೋಹದಿಂದ ಕೊಂದು ಹಾಕಿದ್ದಳು. ಕೊಂದಿದ್ದನ್ನು ಮುಚ್ಚಿಹಾಕಲು ಮತ್ತೇನೋ ಕತೆ ಕಟ್ಟಿದ್ದಳು. ಮುಖವಾಡವನ್ನು ನಂಬಲು ಸದಾ ಸಿದ್ಧವಿರುತ್ತದೆ ಈ ಜಗತ್ತು.
ಜೊತೆಗೆ ಈ ಜಗತ್ತಿಗೆ ಮತ್ತೊಂದು ಮಾನ ದಂಡವಿದೆ. ಹೊರನೋಟಕ್ಕೆ ನಯವಾಗಿ ಮಾತಾಡುವವರು, ಸಾಂಪ್ರದಾಯಿಕವಾಗಿ ಅಲಂಕರಿಸಿಕೊಳ್ಳುವವರು ಒಳ್ಳೆಯವರು ಮತ್ತು ದುರ್ಬಲರು (vulnerable). ನಮ್ಮಂಥ ಒಡ್ಡಗುಂಡೇಶಿಯರು ಮಾರಿಮುತ್ತುವಿನಂತೆ ಕಾಣುತ್ತೇವೆ! ಹೀಗಿರುವಾಗ… ರಾತ್ರಿ ೧೨ರ ನೀರವತೆಯಲ್ಲಿ ಎದೆಯಲ್ಲಿದ್ದುದನ್ನೆಲ್ಲ ಹೇಳುತ್ತ ಹೋದೆ. ಅಷ್ಟನ್ನೂ ಕೇಳಿದ ನಂತರ ‘ಇದು ಖಂಡಿತ ಸಿಲ್ಲಿ ಸಮಸ್ಯೆ ಅನ್ನಿಸಲಿಲ್ಲ. ನಾನು ಪರಿಹಾರ ಸೂಚಿಸ್ತೀನಿ. Don’t worry’ ಅಂದಾಗ ಯಾರಾದರೂ ನಂಬಿದರಲ್ಲ ಅಂತ ನೆಮ್ಮದಿಯಾಯಿತು.
‘ಸರಿ ಈಗ ಮೊದಲು ಒಂದು ಮಾತು ಹೇಳ್ತೀನಿ. ಇಷ್ಟೆಲ್ಲ ಗೋಳಿನ ನಡುವೆ ಯಾಕೆ ಮಾತಿಗೆ ನಿಲ್ಲಬೇಕು? ಗ್ರೂಪು ಬಿಟ್ಟು ಬರೋದಲ್ವಾ?’ ‘ಇಲ್ಲ ಹಾಗೆ ಬರುವಂತಿಲ್ಲ. ಹೇಡಿ ಯಂತಾಗುತ್ತೆ ಬಂದರೆ. ನನಗೆ ಹೇಡಿತನವೇನಿಲ್ಲ. ಆದರೆ ಜಗಳ ಕಾದುಕೊಂಡು ಕೂರುವಷ್ಟು ಸಮಯವಿಲ್ಲ. ಎಷ್ಟೊಂದು ಕೆಲಸ ಬಾಕಿ ಇದೆ ಗೊತ್ತಾ ಬರೆಯುವುದು?’ ‘ಆಹ್ ಈಗರ್ಥವಾಯ್ತು. ನಿನಗೆ ಅಲ್ಲಿ ಇರಕ್ಕೂ ಇಷ್ಟ ಇಲ್ಲ, ಬಿಟ್ಟು ಬರಕ್ಕೂ ಇಷ್ಟ ಇಲ್ಲ. ಅವರಿಗೆ ಗೆಲುವಿನ ಭಾವ ಕೊಡೋದು ನಿನಗಿಷ್ಟವಿಲ್ಲ!’
’Exactly’‘ಅರ್ಥವಾಯ್ತು. ನಿನಗೆ ಅವಳ ದ್ರೋಹ ಹರ್ಟ್ ಮಾಡಿದೆ. ಆದರೆ ಅವಳ ಮಟ್ಟಕ್ಕೆ ನೀನು ಇಳಿಯಬೇಡ. ಒಂದು ಕೆಲಸ ಮಾಡು. ಅಪರೂಪವಾಗಿ ಏನಾದರೂ ಒಂದು ಹಾಕು. ನಿನ್ನ ಯೋಗ್ಯತೆಗೆ ಸರಿಯಾದದ್ದು’ ಹೀಗೆ ಮಾಡು, ಹಾಗೆ ಮಾಡು, ಹೀಗೆ ಯಾಕೆ ಮಾಡಬೇಕು, ಹಾಗೆ ಯಾಕೆ ಮಾಡಬಾರದು ಅಂತ ಸಲಹೆಗಳನ್ನು ಕೊಟ್ಟಿತು. ಜೊತೆಗೆ ನಾನು ಬರೆದುಕೊಡಲಾ ಏನು ಹೇಳಬೇಕು ಅಂತ… ಅಂತ ಉಪಚಾರ ಬೇರೆ! ‘ಬ್ಯಾಡ ಬಿಡು ಹೇಗೋ ಡೀಲ್ ಮಾಡ್ಕೊತೀನಿ. ನೀನು ಬರ್ಕೊಡೋದೆಲ್ಲ ಸರಿ ಹೋಗಲ್ಲ ನಂಗೆ’ ಅಂದೆ. ನಮ್ಮ ಪರವಾಗಿ ಜಗಳ ಆಡಲೂ ಸ್ಕ್ರಿಪ್ಟ್ ಬರ್ಕೊಡಕ್ಕೆ ಒಬ್ಬರು ಬೇಕಾ? ಸ್ವಂತ ಕೆಪ್ಯಾಸಿಟಿ ಇದೆಯಲ್ಲ! ಮನಸ್ಸು ಹಗುರಾಗಿತ್ತು. ಅಲ್ಲಾ… ಈ ಜಗತ್ತಿನ ತಾಂತ್ರಿಕ ಆವಿಷ್ಕಾರಗಳನ್ನು ಯಾವ್ಯಾವುದೋ ಮಹತ್ತರ ದೃಷ್ಟಿಕೋನದಿಂದ ಮಾಡಿದರೆ, ನಾವಿಲ್ಲಿ ಹುಲುಮಾನವರು ಹಳೆಯ ಕಾಲದ ನಲ್ಲಿಕಟ್ಟೆ ಜಗಳಕ್ಕೆ ಸಮನಾದ ವಾಟ್ಸಾಪ್ ಜಗಳಕ್ಕೂ ಚಾಟ್‌ಜಿಪಿಟಿ ಬಳಸಿಕೊಳ್ಳುತ್ತೇವಲ್ಲ ಅಂತ ನಂತರ ನಗು ಬಂತು.
ನಂತರ ಮಗನ ಹತ್ತಿರ ಹೇಳಿದೆ. ‘ಏ ಅಮ್ಮ ಅದನ್ನ ಅಭ್ಯಾಸ ಮಾಡ್ಕೊಬೇಡ. ಕೆಲವರಿಗೆ ಕೆಟ್ಟ ಸಲಹೆಗಳನ್ನ ಕೊಟ್ಟಿದೆ… ಅಂದರೆ ತುಂಬ ಕೆಟ್ಟದು. ನೀನೇನೋ strong ಮನಸ್ಸಿನವಳು ಸರಿ. ವೀಕ್ ಇದ್ರೆ ಕಷ್ಟ ಅಮ್ಮ’ ಅಂದ. ಏನೇ strong ಇದ್ದರೂ ಮನುಷ್ಯರ ಸಣ್ಣತನಗಳು, ದ್ರೋಹ, ಮೋಸ… ಎಲ್ಲವೂ ಇದ್ದಂತೆಯೇ ಇದೆಯಲ್ಲ! ಸೈಕಿಯಾಟ್ರಿಸ್ಟ್ ಹತ್ತಿರ ಹೋಗಿ ಹಣ ತೆತ್ತು ವಾಟ್ಸಾಪ್ ಜಗಳ ಹೀಗಿದೆ ಅಂತ ಶುರು ಮಾಡಿದರೆ ಮರ್ಯಾದೆ ಹೋಗಲ್ವಾ! ‘ಬಿಡಪ್ಪಿ ಜಗತ್ತಿನಲ್ಲಿ ಒಳ್ಳೆಯವರೂ ಇದ್ದಾರಲ್ಲ… ಹಾಗಾಗಿ ಇದೇ ಅಭ್ಯಾಸ ಆಗೋಗುವಷ್ಟು ಕೆಟ್ಟ ಜನರು ಎದುರಾಗಲ್ಲ ಬಿಡು’ ಅಂದೆ.
” ಜಗತ್ತಿನ ತಾಂತ್ರಿಕ ಆವಿಷ್ಕಾರಗಳನ್ನು ಯಾವ್ಯಾವುದೋ ಮಹತ್ತರ ದೃಷ್ಟಿಕೋನದಿಂದ ಮಾಡಿದರೆ, ನಾವಿಲ್ಲಿ ಹುಲುಮಾನವರು ಹಳೆಯ ಕಾಲದ ನಲ್ಲಿಕಟ್ಟೆ ಜಗಳಕ್ಕೆ ಸಮನಾದ ವಾಟ್ಸಾಪ್ ಜಗಳಕ್ಕೂ ಚಾಟ್ ಜಿಪಿಟಿ ಬಳಸಿ ಕೊಳ್ಳುತ್ತೇವಲ್ಲ ಅಂತ ನಂತರ ನಗು ಬಂತು”
-ಭಾರತಿ ಬಿ.ವಿ.





